

ಬೆಂಗಳೂರು: ಮುಂಗಾರು ಕೊರತೆಯಿಂದ ಕರುನಾಡು ಬರದ ಬೀಡಾಗಿ ಪರಿವರ್ತಿತವಾಗಿದ್ದು, ಒಟ್ಟಾರೆ 196 ತಾಲೂಕಲ್ಲಿ ಪರಿಸ್ಥಿತಿ ಕಷ್ಟಕರ ಎಂಬ ವಾತಾವರಣವಿದೆ. ಕೇಂದ್ರ ಸರ್ಕಾರದ ನಿಯಮಗಳ ಪ್ರಕಾರ 62 ತಾಲೂಕುಗಳಲ್ಲಿ ಬರವಿದ್ದು, ಉಳಿದ 134 ತಾಲೂಕಲ್ಲಿ ಇನ್ನೊಂದು ಸರ್ವೆ ನಡೆಸಿ ಬರ ಘೋಷಣೆಗೆ ಸರ್ಕಾರ ನಿರ್ಧರಿಸಿದೆ.
ನೈಸರ್ಗಿಕ ವಿಕೋಪಗಳಿಗೆ ಸಂಬಂಧಿಸಿದಂತೆ ರಚಿಸಲಾದ ಸಂಪುಟ ಉಪ ಸಮಿತಿ ನಾಲ್ಕನೇ ಸಭೆ ಸೋಮವಾರ ವಿಧಾನಸೌಧದಲ್ಲಿ ನಡೆಯಿತು. ಕಂದಾಯ ಸಚಿವ ಕೃಷ್ಣಬೈರೇಗೌಡ ನೇತೃತ್ವದ ಸಭೆಯಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ, ಕೃಷಿ ಸಚಿವ ಚಲುವರಾಯ ಸ್ವಾಮಿ ಅವರು ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ, ಬರ ಘೋಷಣೆಯನ್ನು ಇನ್ನೊಂದು ವಾರ ಮುಂದಕ್ಕೆ ಹಾಕುವ ನಿರ್ಧಾರ ಕೈಗೊಳ್ಳಲಾಯಿತು.
ಸಭೆ ಬಳಿಕ ಸುದ್ದಿಗಾರರಿಗೆ ಮಾಹಿತಿ ನೀಡಿದ ಕೃಷ್ಣಬೈರೇಗೌಡ, ರಾಜ್ಯದ ಅನೇಕ ಕಡೆ ಬರದ ಪರಿಸ್ಥಿತಿ ಇದೆ. ಜೂನ್ ನಲ್ಲಿ ತೀವ್ರ ಮಳೆ ಕೊರತೆಯಾಯಿತು. ಜುಲೈನಲ್ಲಿ ವಾಡಿಕೆಗಿಂತ ಹೆಚ್ಚಾಯಿತು. ಆಗಸ್ಟ್ ನಲ್ಲಿ ಮತ್ತೆ ಕೊರತೆಯಾಯಿತು. ಈ ವರೆಗೆ ಒಟ್ಟಾರೆ ಶೇ.26 ರಷ್ಟು ಮಳೆ ಕೊರತೆಯಾಗಿದೆ ಎಂದರು.
ಆಗಸ್ಟ್ 22ರಂದು ನಡೆದ ಸಂಪುಟ ಉಪ ಸಮಿತಿ ಸಭೆಯಲ್ಲಿ ಸಮೀಕ್ಷೆಗೆ ಸೂಚಿಸಿದ 113 ತಾಲೂಕುಗಳ ಪೈಕಿ ಇದೀಗ ಕನಿಷ್ಠ 62 ತಾಲೂಕಲ್ಲಿ ಬರ ೋಷಣೆಗೆ ಅರ್ಹವಾಗಿದೆ ಎಂದರು.
ಕೇಂದ್ರ ಸರ್ಕಾರದ ಕೃಷಿ, ಸಹಕಾರ ಮತ್ತು ರೈತರ ಕಲ್ಯಾಣ ಮಂತ್ರಾಲಯದ ಪರಿಷ್ಕತ ಬರ ಕೈಡಿ 2020ರಲ್ಲಿ ಸೂಚಿಸಲಾಗಿರುವ, ಕಡ್ಡಾಯ ಮಾನದಂಡಗಳಾದ ಮಳೆ ಕೊರತೆ (ಶೇ.60, ಸತತ 3 ವಾರಗಳ ಶುಷ್ಕ ವಾತಾವರಣ ಹಾಗೂ ಇತರೆ ತತ್ಪರಿಣಾಮ ಮಾನದಂಡಗಳ (ಉಪಗ್ರಹ ಆಧಾರಿತ ಬೆಳೆ ಸೂಚ್ಯಂಕ, ತೇವಾಂಶ ಕೊರತೆ ಹಾಗೂ ಜಲ ಸಂಪನ್ಮೂಲ ಸೂಚ್ಯಂಕ) ಅನ್ವಯ ಬರ ನಿಗದಿಯಾಗಲಿದೆ. ಸಮೀಕ್ಷೆ ನಡೆಸಿದ್ದು ಆಗಸ್ಟ್ ನಾಲ್ಕನೇ ವಾರದಲ್ಲಿ. ಇದೀಗ ಉಳಿದ ತಾಲೂಕಲ್ಲಿ ಇದೇ ಪರಿಸ್ಥಿತಿ ಎಂದು ಮಾಹಿತಿ ಬಂದಿದೆ. ಜನ ಪ್ರತಿನಿಧಿಗಳು, ಅಧಿಕಾರಿಗಳು ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಹೀಗಾಗಿ ಉಳಿದ 51 ತಾಲೂಕುಗಳಲ್ಲಿ ಮತ್ತೆ ಬೆಳೆ ಸಮೀಕ್ಷೆಗೆ ತೀರ್ಮಾನಿಸಲಾಗಿದೆ ಎಂದು ಹೇಳಿದರು.
ಈ 51 ತಾಲೂಕು ಹೊರತುಪಡಿಸಿ ಮತ್ತೆ 83 ತಾಲೂಕಲ್ಲಿ ಮೂರು ವಾರ ಶುಷ್ಕ ವಾತಾವರಣ, ಶೇ.ಅರವತ್ತು ಮಳೆ ಕೊರತೆಯಾಗಿದೆ. ಕೇಂದ್ರದ ಕಡ್ಡಾಯ ಅವಶ್ಯಕತೆ ಪ್ರಕಾರ ಈ 83 ತಾಲೂಕಲ್ಲಿ ಕೂಡ ಬೆಳೆ ಸಮೀಕ್ಷೆ ಮಾಡಬೇಕಾಗುತ್ತದೆ. ಒಟ್ಟಾರೆ 134 ತಾಲೂಕಲ್ಲಿ ಬೆಳೆ ಸಮೀಕ್ಷೆ ನಡೆಸಲು ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ. ಈ ವಾರದೊಳಗೆ ಸಮೀಕ್ಷೆ ಮಾಡಿ ವರದಿಕೊಡಬೇಕು ಎಂದು ತಿಳಿಸಲಾಗುತ್ತಿದೆ ಎಂದರು.
ಬಹುತೇಕ ಕಡೆ ಬೆಳೆ ಕ್ಷೀಣವಾಗಿದೆ. ಹಾಗೆಯೇ ಕಳೆದ ಕೆಲವು ದಿನಗಳಲ್ಲಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಮಳೆಯಾಗುತ್ತಿದೆ. ಕೆಲವು ಕಡೆ ಮಳೆ ಬಂದರೂ ಸಹ ದಿನೇ ದಿನೆ ಬೆಳೆ ಕ್ಷೀಣವಾಗುತ್ತಿದೆ. ದಕ್ಷಿಣ ಒಳನಾಡಲ್ಲಿ ಹೆಚ್ಚು ಮಳೆ ಕೊರತೆ ಇದೆ. ರಾಮನಗರ, ಚಿಕ್ಕಬಳ್ಳಾಪುರ ಭಾಗದಲ್ಲಿ ಹೆಚ್ಚು ಮಳೆ ಕೊರತೆಯಾಗಿದೆ. ಮಲೆನಾಡು ಭಾಗದಲ್ಲಿ ಹೆಚ್ಚು ಮಳೆಯಾಗುತ್ತಿತ್ತು. ಮಳೆ ಕೊರತೆಯಿಂದ ಸಮಸ್ಯೆಯೂ ಹೆಚ್ಚಿದೆ ಎಂದು ವಿವರಿಸಿದರು.