

| ಕೆ.ಎನ್.ಮಹದೇವಸ್ವಾಮಿ ಕೊಡಸೋಗೆ ಗುಂಡ್ಲುಪೇಟೆ
ಬರದ ಪರಿಣಾಮದಿಂದ ಎದುರಾಗಿರುವ ಮೇವಿನ ಕೊರತೆ ಜಾನುವಾರುಗಳನ್ನೇ ಮಾರಾಟ ಮಾಡುವಂತಹ ಸಂಕಷ್ಟಕ್ಕೆ ರೈತರನ್ನು ನೂಕಿದೆ. ಗುಂಡ್ಲುಪೇಟೆ ತಾಲೂಕಿನಲ್ಲಿ ಮೇವು ಒದಗಿಸಲಾಗದೆ ರೈತರು ಅನಿವಾರ್ಯವಾಗಿ ಜಾನುವಾರುಗಳನ್ನು ಮಾರಾಟ ಮಾಡುತ್ತಿದ್ದಾರೆ. ಸೋಮವಾರ ನಡೆಯುವ ಬೇಗೂರು ಸಂತೆ, ಗುರುವಾರದ ತೆರಕಣಾಂಬಿ ಸಂತೆಗಳಲ್ಲಿ ಜಾನುವಾರುಗಳನ್ನು ಕಡಿಮೆ ಹಣಕ್ಕೆ ಮಾರಾಟ ಮಾಡಿದ್ದಾರೆ. ಕಳೆದ ಎರಡು ತಿಂಗಳ ಹಿಂದೆ 40 ರಿಂದ 50 ಸಾವಿರ ರೂ.ಗೆ ಬಿಕರಿಯಾಗುತ್ತಿದ್ದ ಹಾಲು ಕರೆಯುವ ಹಸುಗಳನ್ನು ಈ ಸಂತೆಗಳಲ್ಲಿ ಕೇವಲ 15-20 ಸಾವಿರ ರೂ.ಗೆ ಮಾರಿದ್ದಾರೆ.
ತಾಲೂಕಿನಲ್ಲಿ ಒಟ್ಟು 70 ಸಾವಿರ ಜಾನುವಾರುಗಳಿವೆ. ಸರ್ಕಾರಿ ದಾಖಲೆಗಳ ಪ್ರಕಾರ 14,580 ಹೆಕ್ಟೇರ್ ಗೋಮಾಳವಿದೆ. ಆದರೆ ಪ್ರತಿ ವರ್ಷವೂ ಒತ್ತುವರಿ, ಅತಿಕ್ರಮಣ ಮುಂತಾದ ಕಾರಣಗಳಿಂದ ಗೋಮಾಳದ ವಿಸ್ತೀರ್ಣ ಕಡಿಮೆಯಾಗುತ್ತಿದ್ದು, ಜಾನುವಾರುಗಳಿಗೆ ಮೇವಿನ ಕೊರತೆಯಾಗುತ್ತಿದೆ. ಜು.1ರಿಂದ ಸೆ.21ರವರೆಗೆ ತಾಲೂಕಿಗೆ 56 ಮಿಮೀ ವಾಡಿಕೆ ಮಳೆಯಾಗಬೇಕಿತ್ತು. ಆದರೆ 34 ಮಿಮೀ ಮಳೆ ಬಿದ್ದಿದೆ. ಮುಂಗಾರಿನಲ್ಲಿ ಬಿತ್ತನೆ ಮಾಡಿದ್ದ ಸೂರ್ಯಕಾಂತಿ, ಜೋಳ, ಮುಸುಕಿನ ಜೋಳ, ನೆಲಗಡಲೆ, ಹತ್ತಿ ಮುಂತಾದ ಬಹುತೇಕ ಬೆಳೆಗಳು ನಾಶವಾಗಿವೆ. ಸಕಾಲದಲ್ಲಿ ಮಳೆ ಬೀಳದೆ ರಾಗಿ ಹಾಗೂ ಹುರುಳಿಯನ್ನು ಬಿತ್ತನೆ ಮಾಡಲು ಸಾಧ್ಯವಾಗಿಲ್ಲ. ಇದರಿಂದ ಜಾನುವಾರುಗಳಿಗೆ ಪ್ರಮುಖ ಆಹಾರದ ಮೂಲವಾಗಿರುವ ಜೋಳ, ಮುಸುಕಿನಜೋಳ, ನೆಲಗಡಲೆ, ರಾಗಿ, ಹುರುಳಿ ಬೆಳೆಗಳೇ ನಾಶವಾಗಿರುವುದು ಮೇವಿನ ಅಭಾವ ಹೆಚ್ಚಿಸಿದೆ.
ಸದ್ಯ ಜೋಳದ ಕಡ್ಡಿಯ ಒಂದು ಕಂತೆಗೆ 10 ರೂ. ಮಾರಾಟವಾಗುತ್ತಿದ್ದರೆ, ಹಸಿ ಮುಸುಕಿನ ಜೋಳದ ಕಡ್ಡಿ (ಟನ್ಗೆ -ಠಿ;3 ಸಾವಿರ) ಕೆಜಿಗೆ 3 ರೂಪಾಯಿಗಳಿಗೆ ಏರಿದ್ದು, ಬೆಳೆಗಳು ನಾಶವಾದ ರೈತರು ತಮ್ಮ ಜಾನುವಾರುಗಳಿಗೆ ಮೇವು ಒದಗಿಸಲು ಪರದಾಡುತ್ತಿದ್ದಾರೆ. ಕೊಳ್ಳೇಗಾಲ, ತಿ.ನರಸೀಪುರ, ಯಳಂದೂರು ಮುಂತಾದ ತಾಲೂಕುಗಳ ನೀರಾವರಿ ಜಮೀನುಗಳಲ್ಲಿ ಬೆಳೆದ ಮುಸುಕಿನ ಜೋಳದ ಕಡ್ಡಿಯನ್ನು ಖರೀದಿಸುತ್ತಿದ್ದಾರೆ.
ಪ್ರತಿ ದಿನ ಒಂದು ಹಾಲು ಕರೆಯುವ ರಾಸುಗಳಿಗೆ 12 ರಿಂದ 15 ಕಂತೆ ಕಡ್ಡಿಗೆ 150 ರೂ., ನಿತ್ಯ ಇಂಡಿ, ಬೂಸಾಗೆ 150 ರೂ. ಖರ್ಚಾಗುತ್ತಿದೆ. ಆದರೆ ಪ್ರತಿ ದಿನ 6 ರಿಂದ 8 ಲೀಟರ್ ಹಾಲು ಉತ್ಪಾದಿಸಿ ಡೇರಿಗೆ ಮಾರಿದರೆ ಗರಿಷ್ಠ 250 ರೂ. ಆದಾಯ ದೊರಕುತ್ತಿದೆ. ಇದರಿಂದ ಹೈನುಗಾರರು ತಮ್ಮ ಹಾಲು ಕರೆಯುವ ಹಸುಗಳನ್ನು ಸಂತೆಗಳಲ್ಲಿ ಮಾರಾಟ ಮಾಡುತ್ತಿದ್ದಾರೆ. ಆದರೆ ಸಂತೆಗಳಲ್ಲಿ ಜಾನುವಾರುಗಳನ್ನು ಕೊಂಡವರಿಗೂ ಮೇವಿನ ಸಮಸ್ಯೆ ಎದುರಾಗುವುದರಿಂದ ಜಾನುವಾರುಗಳನ್ನು ಖರೀದಿಸಲು ಮುಂದಾಗುತ್ತಿಲ್ಲ. ಇದರಿಂದ ಕೇಳಿದಷ್ಟು ಬೆಲೆಗೆ ಮಾರಾಟ ಮಾಡುತ್ತಿದ್ದಾರೆ.
ಈ ಬಾರಿ ಜಾನುವಾರುಗಳ ಮೇವಿನ ಮೂಲವಾದ ಎಲ್ಲ ಬೆಳೆಗಳೂ ನಾಶವಾಗುವ ಜತೆಗೆ ಎಲ್ಲ ಗ್ರಾಮಗಳಲ್ಲಿಯೂ ಸರ್ಕಾರಿ ಗೋಮಾಳ ಅತಿಕ್ರಮಣದಿಂದ ಜಾನುವಾರುಗಳಿಗೆ ಮೇವಿಲ್ಲದಂತಾಗಿದೆ. ಹಾಲು ಕರೆಯುವ ಹಸುಗಳನ್ನೇ ಅಡ್ಡಾದಿಡ್ಡಿ ಬೆಲೆಗೆ ಮಾರಾಟ ಮಾಡಲಾಗುತ್ತಿದ್ದು, ಹಸುಗಳನ್ನು ಖರೀದಿಸುವವರಿಗೆ ಸುಗ್ಗಿಯ ಕಾಲವಾಗುತ್ತಿದೆ. ಸದ್ಯ ಮಳೆ ಬೀಳದಿದ್ದರೆ ಮುಂಬರುವ ಜನವರಿ, ಫೆಬ್ರವರಿ ನಂತರ ಬೇಸಿಗೆ ಸಂದರ್ಭದಲ್ಲಿ ತುಂಬಾ ಸಮಸ್ಯೆ ಎದುರಿಸಬೇಕಾಗಿದೆ. | ಜಿ.ಜಿ. ಮಲ್ಲಿಕಾರ್ಜುನ ಗೋಪಾಲಪುರ, ನಿವಾಸಿ ಜೋಳ, ಮುಸುಕಿನಜೋಳ ಮುಂತಾದ ಬೆಳೆಗಳು ನಾಶವಾಗಿದ್ದು ಹುರುಳಿ, ರಾಗಿ ಇನ್ನೂ ಬಿತ್ತನೆ ಮಾಡಲು ಸಾಧ್ಯವಾಗಿಲ್ಲ. ಇದರಿಂದ ಸದ್ಯದಲ್ಲಿ ಮಳೆ ಬೀಳದಿದ್ದರೆ ಜಾನುವಾರುಗಳಿಗೆ ಮೇವಿನ ಕೊರತೆ ತೀವ್ರವಾಗಲಿದೆ. ಸರ್ಕಾರ ತಾಲೂಕನ್ನು ಅರೆ ಬರಗಾಲ ಪೀಡಿತ ಎಂದು ಪರಿಗಣಿಸಿದ್ದು ಇದೇ ಪರಿಸ್ಥಿತಿ ಮುಂದುವರಿದರೆ ಮುಂದಿನ ದಿನಗಳಲ್ಲಿ ಗೋಶಾಲೆ ಆರಂಭಿಸುವ ಸಂಭವವಿದೆ. ಭೂರಹಿತ ಜಾನುವಾರು ಮಾಲೀಕರನ್ನು ಗುರ್ತಿಸಿ ಅವರಿಗೆ ಪ್ರಥಮ ಹಂತದಲ್ಲಿ ಮೇವು ಪೂರೈಸಲಾಗುತ್ತದೆ. | ಡಾ.ಮೋಹನ್ಕುಮಾರ್, ಸಹಾಯಕ ನಿರ್ದೇಶಕ, ಪಶುಸಂಗೋಪನಾ ಇಲಾಖೆ ಗುಂಡ್ಲುಪೇಟೆ