ರಾಣೆಬೆನ್ನೂರ ತಾಲೂಕನ್ನು ಬರಪೀಡಿತವೆಂದು ಘೋಷಿಸಲು ರೈತರ ಆಗ್ರಹ; ರಸ್ತೆ ತಡೆ ನಡೆಸಿ ಪ್ರತಿಭಟನೆ

31-RNR-04
Published on

ರಾಣೆಬೆನ್ನೂರ: ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸಬೇಕು ಎಂದು ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ನಗರದ ತಹಸೀಲ್ದಾರ್ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಿದರು.
ಮೊದಲಿಗೆ ತಹಸೀಲ್ದಾರ್ ಕಚೇರಿ ಎದುರಿನ ಹಳೆ ಪಿ.ಬಿ. ರಸ್ತೆಯಲ್ಲಿ ಕೆಲಕಾಲ ವಾಹನ ಸಂಚಾರ ತಡೆದು ಪ್ರತಿಭಟನೆ ನಡೆಸಿದ ರೈತರು ರಾಣೆಬೆನ್ನೂರ ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸುವಂತೆ ಆಗ್ರಹಿಸಿದರು. ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ನಂತರ ತಹಸೀಲ್ದಾರ್ ಕಚೇರಿ ಎದುರು ಪ್ರತಿಭಟಿಸಿ ತಹಸೀಲ್ದಾರ್ ಎಚ್.ಎಸ್. ಶಿರಹಟ್ಟಿ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ನೇತೃತ್ವ ವಹಿಸಿದ್ದ ರೈತ ಸಂಘದ ತಾಲೂಕು ಅಧ್ಯಕ್ಷ ಕರಬಸಪ್ಪ ಅಗಸಿಬಾಗಿಲ ಮಾತನಾಡಿ, ತಾಲೂಕಿನಲ್ಲಿ ಮಳೆ ಸಂಪೂರ್ಣ ಮಾಯವಾಗಿದೆ. ಇದರಿಂದ ಬೆಳೆಗಳು ಒಣಗಿ ಹಾಳಾಗಿವೆ. ಈಗ ಮಳೆ ಬಂದರೂ ಬೆಳೆಗಳು ಚಿಗುರಿಕೊಳ್ಳುವ ಸ್ಥಿತಿಯಲ್ಲಿಲ್ಲ. ಆದ್ದರಿಂದ ರಾಜ್ಯ ಸರ್ಕಾರ ಕೂಡಲೇ ಬರಪೀಡಿತ ಪ್ರದೇಶವೆಂದು ಘೋಷಿಸಬೇಕು.
ಬೆಳೆಗಳಿಗೆ ಕೂಡಲೇ ಬೆಳೆವಿಮೆ ಬಿಡುಗಡೆ ಮಾಡಬೇಕು. ಬೆಳೆಹಾನಿಯಾದ ರೈತರಿಗೆ ಸಮರ್ಪಕ ಪರಿಹಾರ ಘೋಷಿಸಬೇಕು. ಇಲ್ಲವಾದರೆ ಮುಂದಿನ ದಿನದಲ್ಲಿ ತೀವ್ರತರವಾದ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ರೈತ ಮುಖಂಡರಾದ ಸುರೇಶ ದೂಳೆಹೊಳಿ, ಸಿದ್ದಪ್ಪ ಕುಪ್ಪೇಲೂರ, ಶಂಕ್ರಪ್ಪ ಮೆಣಸಿನಹಾಳ, ರಮೇಶ ಕರಬಸಳ್ಳೇರ, ಬಸಪ್ಪ ಕನ್ನಪ್ಪಳವರ, ಶಿವನಗೌಡ ಗೌಡಪ್ಪಗೌಡ್ರ, ಲೋಕೇಶ ಸುತಾರ, ರಮೇಶ ಮೂಲಿಮನಿ, ಜೆಟ್ಟೆಪ್ಪ ಕನ್ನಪ್ಪಳವರ, ಬಸಪ್ಪ ಕಡೂರ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net