

ನವದೆಹಲಿ: ಲಡಾಖ್ನ ಪೂರ್ವಭಾಗದ ವಾಸ್ತವ ಗಡಿರೇಖೆಯ ನಾಲ್ಕು ಕಡೆಗಳಲ್ಲಿ ಚೀನಾ ಮತ್ತು ಭಾರತ ಯೋಧರು ಬಿರುಗಣ್ಣು ಬಿಟ್ಟುಕೊಂಡು ಕುಳಿತಿರುವ ಹಿನ್ನೆಲೆಯಲ್ಲಿ ಗಡಿಯುದ್ಧಕ್ಕೂ ಡ್ರೋನ್ ಪಹರೆಯನ್ನು ಹೆಚ್ಚಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
ಪೀಪಲ್ಸ್ ಲಿಬರೇಷನ್ ಆರ್ಮಿಯ (ಪಿಎಲ್ಎ) ಅತಿಕ್ರಮಣದ ಮೇಲೆ ಹದ್ದಿನಕಣ್ಣು ಇಡುವುದು ಇದರ ಉದ್ದೇಶವಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಗಡಿ ಭಾಗದಲ್ಲಿ ಡ್ರೋನ್ ಪಹರೆ ಹೆಚ್ಚಳಕ್ಕೆ ಅನುವು ಮಾಡಿಕೊಡುವಂತೆ ಹೆಚ್ಚಿನ ಸಂಖ್ಯೆಯ ಡ್ರೋನ್ಗಳನ್ನು ನಿಯೋಜಿಸುವಂತೆ ರಾಷ್ಟ್ರೀಯ ತಾಂತ್ರಿಕ ಸಂಶೋಧನಾ ಸಂಸ್ಥೆಗೆ (ಎನ್ಟಿಆರ್ಒ) ಸೂಚಿಸಿದೆ. ಹೀಗೆ ಮಾಡುವುದರಿಂದ, ಯುದ್ಧದ ಪರಿಸ್ಥಿತಿಯ ಕುರಿತು ಹೆಚ್ಚು ಪಾರದರ್ಶಕ ಮಾಹಿತಿ ದೊರೆಯುತ್ತದೆ ಎಂದು ಹೇಳಲಾಗುತ್ತಿದೆ.
ಇಸ್ರೇಲ್ ಡ್ರೋನ್ಗಳ ಬಳಕೆ: ಕೇಂದ್ರ ಸರ್ಕಾರ ಇಸ್ರೇಲ್ನಿಂದ ಖರೀದಿಸಿರುವ ಹೆರಾನ್ ಮಧ್ಯಮ ಎತ್ತರದ ಡ್ರೋನ್ಗಳನ್ನು ಸದ್ಯ ಬಳಸಲಾಗುತ್ತಿದೆ. ಇವುಗಳ ಪಹರೆ ಕಾರ್ಯಕ್ಕೆ ಎನ್ಟಿಆರ್ಒ ತಾಂತ್ರಿಕ ಸಹಕಾರ ಒದಗಿಸುತ್ತಿದೆ.
ಪಿಎಲ್ಎ ಲೂಂಗ್ ಎಂಬ ಶಸ್ತ್ರಸಜ್ಜಿತ ಡ್ರೋನ್ನ ಪಡೆಯನ್ನು ರಚಿಸಿಕೊಂಡಿದೆ. ಆದರೆ, ಇದರ ಕಾರ್ಯಕ್ಷಮತೆಯ ಬಗ್ಗೆ ಅಷ್ಟೇನೂ ಮಾಹಿತಿ ಲಭ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ಭಾರತ ಕೂಡ ತನ್ನ ಸೇನಾಪಡೆಗೆ ಡ್ರೋನ್ ಪಡೆಯನ್ನು ಸೇರ್ಪಡೆಗೊಳಿಸುವ ಚಿಂತನೆ ನಡೆಸಿದೆ. ಇದಕ್ಕಾಗಿ ಅದು ಇಸ್ರೇಲ್ ಅಥವಾ ಅಮೆರಿಕದಿಂದ ಡ್ರೋನ್ಗಳನ್ನು ಖರೀದಿಸುವ ಬಗ್ಗೆ ಆಲೋಚಿಸುತ್ತಿದೆ ಎನ್ನಲಾಗಿದೆ.