

ಬೆಂಗಳೂರು: ರಾಜ್ಯದ ಪ್ರತಿಯೊಬ್ಬರಿಗೂ ತಮ್ಮ ಊರು, ತಮ್ಮ ಜಿಲ್ಲೆ ಬಗ್ಗೆ ಅಭಿಮಾನ ಇದ್ದೇ ಇರುತ್ತದೆ. ಅದು ತಪ್ಪೇನಲ್ಲ. ಪ್ರತಿಯೊಬ್ಬರಿಗೂ ಹುಟ್ಟೂರಿನ ಬಗ್ಗೆ ಭಾವನಾತ್ಮಕ ಸಂಬಂಧ ಇರುವುದು ಅಸಹಜವೂ ಅಲ್ಲ. ತಮ್ಮೂರಿನವನೊಬ್ಬ ಏನಾದರೂ ಸಾಧನೆ ಮಾಡಿದರೆ ಎಲ್ಲರೂ ಬೆಂಬಲಿಸುತ್ತಾರೆ. ಆದರೆ ಅವನೇ ಏನಾದರೂ ತಪ್ಪು ಮಾಡಿದರೆ ಸ್ವಂತ ಊರಿನವರೂ ಬೆಂಬಲಿಸುವುದಿಲ್ಲ. ಡ್ರೋನ್ ಪ್ರತಾಪ್ ವಿಷಯದಲ್ಲೂ ಇದೇ ಆಗುತ್ತಿದೆ.
ಖಾಸಗಿ ವಾಹಿನಿಯೊಂದರಲ್ಲಿ ಪ್ರಸಾರವಾಗಿರುವ ‘‘ಡ್ರೋನ್ ಪ್ರತಾಪ್ ಆಯ್ತು, ಇದೀಗ ಕೆರೆ ಕಾಮೇಗೌಡರ ಸರದಿ... ಕಲ್ಮನೆ ಕಾಮೇಗೌಡರ ಸಾಧನೆ ಶೂನ್ಯನ?’’ ಎಂಬ ಶೀರ್ಷಿಕೆಯ ವರದಿಯನ್ನು ಫೇಸ್ಬುಕ್ನ ‘ಡ್ರೋನ್ ಪ್ರತಾಪ್ ಫ್ಯಾನ್ಸ್ ಕ್ಲಬ್’ ಎಂಬ ಪೇಜ್ನಲ್ಲಿ ಷೇರ್ ಮಾಡಿಕೊಂಡಿದ್ದು, ಅದರ ಮೇಲೆ ‘‘ನಮ್ಮ ಜಿಲ್ಲೆಯವರನ್ನು ತುಳಿಯುವ ಷಡ್ಯಂತ್ರ’’ ಎಂದು ಬರೆಯಲಾಗಿದೆ. ಇದಕ್ಕೆ ನೆಟ್ಟಿಗರೊಬ್ಬರು ‘‘ನಮ್ಮ ಜಿಲ್ಲೆಯವರನ್ನು... ಅಂದ್ರೆ ಇದರ ಅಡ್ಮಿನ್ ಪ್ರತಾಪ...’’ ಎಂದು ಅಲ್ಲೇ ಪ್ರತಿಕ್ರಿಯೆ ನೀಡಿದ್ದಾರೆ.
‘‘ಇಂತಹ ಎಮೋಷನಲ್ ಟ್ಯಾಗ್ಲೈನ್ಗಳಿಂದ ಜನರನ್ನು ಯಾವಾಗಲೂ ಮೂರ್ಖರನ್ನಾಗಿಸಬಹುದು ಅಂತ ಅಂದುಕೊಂಡಿದ್ದೀಯಾ?’’ ಎಂದು ಒಬ್ಬರು ಕೇಳಿದ್ದರೆ, ಇನ್ನೊಬ್ಬರು ‘‘ಬಾರೋ ಮಂಡ್ಯದ ಮಾನ ಕಳೀಬೇಡ, ಬಂದು ಉತ್ತರ ಕೊಡು’’ ಎಂದಿದ್ದಾರೆ. ‘‘ಬೇರೆ ಜಿಲ್ಲೆಯವರು ತುಳಿಯಲು ಯತ್ನಿಸಿದರೆ ಷಡ್ಯಂತ್ರ ಅನ್ನಬಹುದು. ನಿಮ್ಮ ಜಿಲ್ಲೆಯವರೂ ಪ್ರಶ್ನಿಸುತ್ತಿದ್ದಾರಲ್ಲ’’ ಎಂದು ಮತ್ತೊಬ್ಬರು ಅಭಿಪ್ರಾಯಪಟ್ಟಿದ್ದಾರೆ. ‘‘ಮಂಡ್ಯದ ಬಗ್ಗೆ ಮಾತಾಡೋ ಯೋಗ್ಯತೆ ನಿನಗಿಲ್ಲ. ತಂದಿಡೋ ಬುದ್ಧಿ ಬಿಡು...’’ ಎಂದು ಇನ್ನೊಬ್ಬರು ಬುದ್ಧಿ ಹೇಳಿದ್ದಾರೆ.