

ಬೆಂಗಳೂರು: ಮರುಬಳಕೆ ವಸ್ತುಗಳಿಂದ 600 ಡ್ರೋನ್ಗಳನ್ನು ತಯಾರಿಸಿದ್ದೇನೆ. ನನಗೆ ಸಾಕಷ್ಟು ಪ್ರಶಸ್ತಿಗಳು ಹಾಗೂ ವಿದೇಶಿ ಕಂಪನಿಗಳಿಂದ ಆಫರ್ ಬಂದಿವೆ ಎಂದು ಕಟ್ಟುಕತೆ ಕಟ್ಟಿದ್ದ ನಕಲಿ ವಿಜ್ಞಾನಿ ಡ್ರೋನ್ ಪ್ರತಾಪ್ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗುತ್ತಲೇ ಇದೆ. ಇದರ ನಡುವೆ ಪ್ರತಾಪ್ ಇನ್ಸ್ಟಾಗ್ರಾಂನಲ್ಲಿ ದಿಢೀರನೇ ಒಂದು ವೈರಲ್ ಪೋಸ್ಟ್ ಮಾಯವಾಗಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.
ಫೇಸ್ಬುಕ್ ಹಾಗೂ ಟ್ವಿಟರ್ ಹೊರತುಪಡಿಸಿ ಇನ್ಸ್ಟಾಗ್ರಾಂನಲ್ಲಿ ಸಕ್ರೀಯರಾಗಿರುವ ಪ್ರತಾಪ್ ತಮ್ಮ ವಿರುದ್ಧದ ಟ್ರೋಲ್ ಒಂದಕ್ಕೆ ಇನ್ಸ್ಟಾಗ್ರಾಂನಲ್ಲಿ ಎಚ್ಚರಿಕೆ ನೀಡಿದ್ದರು. ಡ್ರೋನ್ ಪ್ರತಾಪ್ ಆತ್ಮಹತ್ಯೆ ಶರಣಾಗಿದ್ದಾರೆ. ಅವರ ಆತ್ಮಕ್ಕೆ ಶಾಂತಿ ದೊರಕಲಿ (RIP) ಎಂದು ಬರೆದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಲಾಗಿತ್ತು.
ಇದಲ್ಲದೆ, ನಿನ್ನೆ ಖಾಸಗಿ ನ್ಯೂಸ್ ವಾಹಿನಿಯಲ್ಲಿ ತನ್ನ ವಿರುದ್ಧ ಆರೋಪಗಳಿಗೆ ಉತ್ತರ ನೀಡಲು ಆಗಮಿಸಿದ್ದ ಪ್ರತಾಪ್, ಈ ಸಮಯದಲ್ಲೂ ಇದೇ ಪೋಸ್ಟ್ ವಿಚಾರವನ್ನು ಪ್ರಸ್ತಾಪ ಮಾಡಿದ್ದರು. ನನ್ನ ತಾಯಿ ಇದರಿಂದ ಸಾಕಷ್ಟು ಅಪ್ಸೆಟ್ ಆಗಿದ್ದರು. ನಾನು ನಿಜವಾಗಿಯೇ ಸತ್ತು ಹೋಗಿದ್ದೇನೆ ಅಂದುಕೊಂಡಿದ್ದರು, ನಾನೇ ಖುದ್ದಾಗಿ ಫೋನ್ ಮಾಡಿ ತಿಳಿಸಿದೆ. ಹೀಗೆ ಬಿಟ್ಟರೆ ನಾಳೆ ನನ್ನ ತಿಥಿಯನ್ನು ಮಾಡಿ ಟ್ರೋಲ್ ಮಾಡುತ್ತಾರೆ. ಇದರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುತ್ತೇನೆಂದು ಎಚ್ಚರಿಸಿದ್ದರು.
ಲೈವ್ ಶೋ ಮುಗಿದ ಬೆನ್ನಲ್ಲೇ ಪ್ರತಾಪ್ ಇನ್ಸ್ಟಾಗ್ರಾಂ ಖಾತೆಯಿಂದ "RIP ಪ್ರತಾಪ್" ಎಂದು ಹರಿದಾಡಿದ್ದ ಪೋಸ್ಟ್ ಮಾಯಾವಾಗಿದೆ. ಆಕ್ರೋಶ ಹೊರ ಹಾಕಿದ ಎರಡೇ ದಿನದಲ್ಲಿ ಪೋಸ್ಟ್ ತೆಗೆದಿರುವುದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ಅಲ್ಲದೆ, "RIP ಪ್ರತಾಪ್" ಎನ್ನುವ ಪೋಸ್ಟ್ ಅನ್ನು ಪ್ರತಾಪ್ ಅವರೇ ತಮ್ಮ ಲಾಭಕ್ಕಾಗಿ ಸೃಷ್ಟಿ ಮಾಡಿದ್ದರು. ಜನರ ಕರುಣೆ ಗಿಟ್ಟಿಸಲು ತಾವೇ ಮಾಡಿದ ಪೋಸ್ಟ್ ಎಂಬುದಾಗಿ ಸಾಕಷ್ಟು ಕಾಮೆಂಟ್ಗಳ ಜತೆ ಆಕ್ರೋಶ ಬಂದ ಹಿನ್ನೆಲೆಯಲ್ಲಿ ಪೋಸ್ಟ್ ಡಿಲೀಟ್ ಮಾಡಿರಬಹುದು ಎಂದು ಹೇಳಲಾಗುತ್ತಿದೆ.
ಅಂದಹಾಗೆ ಡ್ರೋನ್ ಪ್ರತಾಪ್ ಅವರ ಅಸಲಿಯತ್ತು ಬಯಲಾದ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ. ಪ್ರತಾಪ್ ಅವರು ಅನೇಕ ವೇದಿಕೆಗಳಲ್ಲಿ ಮಾತನಾಡಿರುವ ವಿಡಿಯೋವನ್ನು ಟ್ರೋಲ್ ಮಾಡಲಾಗುತ್ತಿದೆ. ಅವರ ಫೋಟೋಗಳ ಮೇಲೆ ಕಮೆಂಟ್ ಮಾಡಿ ಹರಿಬಿಡಲಾಗುತ್ತಿದೆ. ನಿನ್ನೆ ಲೈವ್ ಕಾರ್ಯಕ್ರಮದಲ್ಲೂ ಗಾಳಿಯಲ್ಲಿ ಗುಂಡು ಹಾರಿಸುವ ರೀತಿ ಪ್ರತಾಪ್ ಉತ್ತರ ನೀಡಿದ್ದರು.