More

    ಕನ್ನಡಿಗರಲ್ಲಿ ಕ್ಷಮೆ ಯಾಚಿಸಿದ ಡ್ರೋನ್ ಪ್ರತಾಪ್

    ಬೆಂಗಳೂರು: ಡ್ರೋನ್ ಪ್ರತಾಪ್…. ಇತ್ತೀಚಿನ ದಿನಗಳಲ್ಲಿ ಎಲ್ಲೆಲ್ಲೂ ಕೇಳಿಬರುತ್ತಿರುವ ಹೆಸರು. ‘ತ್ಯಾಜ್ಯವಸ್ತುಗಳಿಂದಲೇ 600 ಡ್ರೋನ್ ತಯಾರಿಸಿದ್ದೇನೆ. 80 ದೇಶಗಳನ್ನು ಸುತ್ತಿ ಲೆಕ್ಚರ್ ಕೊಟ್ಟಿದ್ದೇನೆ. ಜಪಾನ್‌ನಲ್ಲಿ ನಡೆದ ಪ್ರದರ್ಶನದಲ್ಲಿ ಚಿನ್ನದ ಪದಕ ಗೆದ್ದಿದ್ದೇನೆ’ ಎಂದೆಲ್ಲ ಹೇಳಿ ಪ್ರಸಿದ್ಧನಾಗಿದ್ದ ಈತ, ಇತ್ತೀಚೆಗೆ ಫ್ಯಾಕ್ಟ್‌ಚೆಕ್‌ನಲ್ಲಿ ಸತ್ಯ ಬಹಿರಂಗಗೊಂಡು ತೀವ್ರ ಟ್ರೋಲ್‌ಗೆ ಒಳಗಾಗಿದ್ದಾನೆ. ಈ ಹಿನ್ನೆಲೆಯಲ್ಲಿ ಗುರುವಾರ ದಿಢೀರನೆ ಖಾಸಗಿ ವಾಹಿನಿಯೊಂದರ ಸ್ಟುಡಿಯೋದಲ್ಲಿ ಕಾಣಿಸಿಕೊಂಡು ತನ್ನ ವಿರುದ್ಧದ ಆರೋಪಗಳಿಗೆ ಉತ್ತರ ಕೊಡಲು ಪ್ರಯತ್ನಿಸಿದ್ದಾನೆ.

    ‘‘ನಾನು ಹೈದರಾಬಾದ್‌ನಲ್ಲಿ ಕ್ವಾರಂಟೈನ್‌ನಲ್ಲಿದ್ದೆ. ಅವಧಿ ಮುಗಿಯದಿದ್ದರೂ ಅಲ್ಲಿನ ಅಧಿಕಾರಿಗಳಿಗೆ ರಿಕ್ವೆಸ್ಟ್ ಮಾಡಿ ಬಿಡಿಸಿಕೊಂಡು ಬಂದಿದ್ದೇನೆ. ಜನರ ಮನಸ್ಸಿನಲ್ಲಿ ಮೂಡಿರುವ ಸಂಶಯಗಳಿಗೆ ಸಾಕ್ಷಾೃಧಾರ ಸಮೇತ ಉತ್ತರ ನೀಡುತ್ತೇನೆ’’ ಎಂದು ಹೇಳಿ, ತನ್ನ ಬಳಿಯಿದ್ದ ವಿವಿಧ ಸಂಸ್ಥೆಗಳ ಪ್ರಮಾಣಪತ್ರಗಳು, ಮೆಡಲ್‌ಗಳು, ಪಾಸ್‌ಪೋರ್ಟ್‌ನಲ್ಲಿ ದಾಖಲಾದ ಪ್ರಯಾಣದ ವಿವರಗಳು ಮುಂತಾದವುಗಳನ್ನು ಹಾಜರುಪಡಿಸಿದ್ದಾನೆ.

    ಇದನ್ನೂ ಓದಿ: ಸ್ನೇಹಿತನ ಪ್ರಶ್ನೆಗಳಿಗೆ ಉತ್ತರಿಸಲು ತಡಬಡಾಯಿಸಿದ ಪ್ರತಾಪ್!

    ‘‘ಶಿಫಾರಸುಪತ್ರವೊಂದಕ್ಕೆ ಪ್ರೊಫೆಸರೊಬ್ಬರ ಸಹಿ ಮಾಡಿಸಲು ಚೆನ್ನೈಗೆ ಹೋಗಿದ್ದಾಗ ಬೇಗ ಕೆಲಸವಾಗದೆ, ಕೈಯಲ್ಲಿ ಕಾಸೂ ಇಲ್ಲದೆ 7 ದಿನ ಉಪವಾಸವಿದ್ದೆ. ರೈಲ್ವೆ ಸ್ಟೇಷನ್‌ನಲ್ಲೇ ಮಲಗಿದ್ದೆ.

    ಜಪಾನ್‌ಗೆ ಹೋದಾಗ 20-25 ಕಿಲೋ ತೂಕದ ಲಗೇಜ್ ಪೆಟ್ಟಿಗೆಗಳನ್ನು ಹೆಗಲ ಮೇಲೆ, ಸೂಟ್‌ಕೇಸ್ ಮೇಲೆ ಮತ್ತು ಕೈಯಲ್ಲಿ ಇಟ್ಟುಕೊಂಡು ಎಂಟೆಂಟು ಕಿಮೀ ನಡೆದುಕೊಂಡೇ ಸಾಗಿಸಿದ್ದೇನೆ. ಆ ರೀತಿ 3-4 ದಿನಗಳಲ್ಲಿ ಒಟ್ಟು 360 ಕಿಲೋ ಲಗೇಜನ್ನು ನಾನೊಬ್ಬನೇ ಸಾಗಿಸಿದ್ದೇನೆ. ಒಮ್ಮೆಲೇ 360 ಕಿಲೋ ಲಗೇಜ್ ಹೊತ್ತುಕೊಂಡು ಸಾಗಿಸಿದೆ ಅಂತ ನಾನೆಲ್ಲೂ ಹೇಳಿಲ್ಲ’’ ಎಂದು ಸಮಜಾಯಿಷಿ ನೀಡಿದ್ದಾನೆ.

    ‘‘ದಕ್ಷಿಣ ಆಫ್ರಿಕಾದಲ್ಲಿ ರಸ್ತೆ ಮೂಲಕ ಹೋದರೆ 8-10 ಗಂಟೆ ತಗಲುವ ದಾರಿಯನ್ನು ನನ್ನ ಡ್ರೋನ್ 7 ನಿಮಿಷಗಳಲ್ಲಿ ಕ್ರಮಿಸಿತು ಅಂತ ಹೇಳಿದ್ದು ಸ್ವಲ್ಪ ಉತ್ಪ್ರೇಕ್ಷೆಯಾಯಿತು. ಶಾಲಾ-ಕಾಲೇಜು ಮಕ್ಕಳೆದುರು ಭಾಷಣ ಮಾಡುವ ಭರಾಟೆಯಲ್ಲಿ ಸ್ವಲ್ಪ ಸುಳ್ಳುಗಳು ನುಸುಳಿರುವುದು ನಿಜ. ಆದರೆ ಈ ರೀತಿ ಹೇಳಿ, ದಾನಿಗಳಿಂದ ನಾನು ಕೋಟ್ಯಂತರ ರೂ. ಹಣ ಪಡೆದಿದ್ದೇನೆ ಎಂಬುದು ಸುಳ್ಳು. ಸುತ್ತೂರಿನವರು 8 ಲಕ್ಷ ಕೊಟ್ಟಿರುವುದು ಮಾತ್ರ ನಿಜ. ನನ್ನ ಬ್ಯಾಂಕ್ ಖಾತೆಯಲ್ಲಿ ಈಗಲೂ ಹೆಚ್ಚೆಂದರೆ 40 ಸಾವಿರ ರೂ. ಇರಬಹುದು’’ ಎಂದು ಹೇಳಿದ ಪ್ರತಾಪ್, ಬ್ಯಾಂಕ್ ಖಾತೆ ವಿವರವನ್ನೂ ಈಗಲೇ ಮೊಬೈಲ್‌ನಲ್ಲಿ ತೋರಿಸುತ್ತೇನೆ ಎಂದು ತೋರಿಸಲು ಮುಂದಾದಾಗ ಅದರಲ್ಲಿ 9 ಸಾವಿರ ರೂ. ಮಾತ್ರ ಇತ್ತು!

    ‘‘ದೊಡ್ಡ ಸಂಖ್ಯೆಯಲ್ಲಿ ಡ್ರೋನ್‌ಗಳನ್ನು ಅಭಿವೃದ್ಧಿಪಡಿಸುತ್ತಿರುವುದು ನಿಜ. ಅದಕ್ಕೆ ಈಗಲ್ 1.0, ಈಗಲ್ 1.1, ಈಗಲ್ 1.2… ಹೀಗೆ ಹೆಸರು ಇಟ್ಟಿದ್ದೇನೆ. ನಾನು ಹದ್ದುಗಳ ಹಾರಾಟದಿಂದ ಪ್ರಭಾವಿತನಾದ ಕಾರಣ ಡ್ರೋನ್‌ಗಳಿಗೆ ಈಗಲ್ ಅಂತ ಹೆಸರಿಟ್ಟಿದ್ದೇನೆ. ರಕ್ಷಣಾ ಪಡೆಗಳಿಗಾಗಿ ಇವುಗಳನ್ನು ತಯಾರಿಸುತ್ತಿದ್ದೇನೆ. ನನಗಿನ್ನೂ 23 ವರ್ಷ ವಯಸ್ಸು. ನಾನು ಮಾತಿನ ಭರಾಟೆಯಲ್ಲಿ ಕೆಲವು ಉತ್ಪ್ರೇಕ್ಷೆಯ ಮಾತುಗಳನ್ನು, ಸುಳ್ಳನ್ನು ಹೇಳಿರಬಹುದು. ಅದಕ್ಕಾಗಿ ಕನ್ನಡಿಗರ ಕ್ಷಮೆ ಯಾಚಿಸುತ್ತೇನೆ’’ ಎಂದು ಹೇಳಿದ್ದಾನೆ.

    ಸಾಕು ಇದನ್ನು ಇಲ್ಲಿಗೆ ನಿಲ್ಲಿಸಿ, ನನ್ನ ಕುಟುಂಬ ಚಿಂತೆಗೀಡಾಗಿದೆ ಎಂದು ಡ್ರೋನ್​ ಪ್ರತಾಪ್​ ಮನವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts