More

    ಜಿಲ್ಲೆಯ ಶಾಸಕರು ಕ್ಷಮೆ ಕೇಳದಿದ್ದರೆ ಹೋರಾಟ

    ಬ್ಯಾಡಗಿ: ಅಧಿವೇಶನದಲ್ಲಿ ಜಿಲ್ಲೆಯ ಮೂವರು ಶಾಸಕರು ರೈತರ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ. ಈ ಮೂವರು ಶಾಸಕರು ಕೂಡಲೇ ಬಹಿರಂಗವಾಗಿ ಕ್ಷಮೆ ಕೇಳಬೇಕು. ಇಲ್ಲವಾದಲ್ಲಿ ಸರ್ಕಾರದ ವಿರುದ್ಧ ಹೋರಾಟ ತೀವ್ರಗೊಳಿಸಲಾಗುವುದು ಎಂದು ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ಹೇಳಿದರು.

    ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತ ಸಂಘದ ಶಾಸಕ ದರ್ಶನ ಪುಟ್ಟಣ್ಣಯ್ಯ ಅವರು ಹಾವೇರಿ ಜಿಲ್ಲೆಯಲ್ಲಿ 18 ಜನ ರೈತರು ಆತ್ಮಹತ್ಯೆ ಮಾಡಿಕೊಂಡಿರುವ ಕುರಿತು ಸರ್ಕಾರದ ಗಮನ ಸೆಳೆಯುತ್ತಿದ್ದಂತೆ, ಅವರಿಗೆ ಮಾತನಾಡಲು ಅವಕಾಶ ನೀಡದ ಜಿಲ್ಲೆಯ ಶಾಸಕರಾದ ಯು.ಬಿ. ಬಣಕಾರ, ಬಸವರಾಜ ಶಿವಣ್ಣನವರ, ಪ್ರಕಾಶ ಕೋಳಿವಾಡ ಸರ್ಕಾರದ ಪರವಾಗಿ ಧ್ವನಿ ಎತ್ತಿದ್ದಾರೆ. ಮೇ, ಜೂನ್‌ನಲ್ಲಿ ಜಿಲ್ಲೆಯ 18 ಜನ ರೈತ ಆತ್ಮಹತ್ಯೆ ಮಾಡಿಕೊಂಡಿದ್ದನ್ನು ಒಪ್ಪಿಕೊಂಡಿಲ್ಲ. ಕೃಷಿ ಸಹಾಯಕ ನಿರ್ದೇಶಕರ ಕಚೇರಿ ದಾಖಲೆಗಳಿವೆ. ಕೂಡಲೇ ಮೂವರು ಶಾಸಕರು ಪುಟ್ಟಣ್ಣಯ್ಯನವರಿಗೆ ಅಧಿವೇಶನದಲ್ಲಿ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು.

    ಜಿಲ್ಲೆಯಲ್ಲಿ 64 ರೈತ ಆತ್ಮಹತ್ಯೆ: ಕಳೆದ ಜನವರಿಯಿಂದ ಜುಲೈವರೆಗೆ ಜಿಲ್ಲೆಯಲ್ಲಿ 64 ರೈತರು ಆತ್ಮಹತ್ಯೆ ಮಾಡಿಕೊಂಡ ಪ್ರಕರಣಗಳಿದ್ದು, ಎರಡು ತಿಂಗಳಲ್ಲಿ 18 ಜನ ಜೀವ ಕಳೆದುಕೊಂಡಿದ್ದಾರೆ. ಆದರೆ, ಜಿಲ್ಲೆಯ ಶಾಸಕರಿಗೆ ರೈತರ ನೋವು ತಿಳಿದಿಲ್ಲ. ಮಾಧ್ಯಮಗಳ ವರದಿಯ ಅಂಕಿ-ಅಂಶಗಳೇ ತಪ್ಪು ಎನ್ನುವ ಇವರಿಂದ ರೈತರಿಗೆ ನ್ಯಾಯ ಸಿಗುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾದ ಬಳಿಕ ಮರನ ಪ್ರಮಾಣಪತ್ರ ತರಲು 2-3 ತಿಂಗಳು ಸಮಯ ಕಾಯಬೇಕಿದೆ. ಆದರೆ, ಜಿಲ್ಲಾಧಿಕಾರಿ 3 ತಿಂಗಳೊಳಗೆ ಪರಿಹಾರ ಕೋರಿ ಅರ್ಜಿ ಸಲ್ಲಿಸದಿದ್ದಲ್ಲಿ ತಿರಸ್ಕರಿಸುತ್ತಾರೆ. ಈ ಅವಧಿ ವಿಸ್ತರಿಸಬೇಕು ಎಂದು ಆಗ್ರಹಿಸಿದರು.

    ರೈತ ಮುಖಂಡ ಕಿರಣ ಗಡಿಗೋಳ ಮಾತನಾಡಿ, ಹಾವೇರಿ 3, ಬ್ಯಾಡಗಿ 4, ರಾಣೆಬೆನ್ನೂರು 3, ಹಿರೇಕೆರೂರು 1, ಶಿಗ್ಗಾಂವಿ 4, ಹಾನಗಲ್ಲ ತಾಲೂಕಿನ 3 ಸೇರಿ ಒಟ್ಟು 18 ರೈತರು ಎರಡು ತಿಂಗಳಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಬ್ಯಾಡಗಿ ತಾಲೂಕಿನಲ್ಲಿ ಎರಡು ತಿಂಗಳಲ್ಲಿ ನಾಲ್ಕು ಜನ ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಸ್ಥಳೀಯ ಶಾಸಕರು ಮೃತಪಟ್ಟ ಕುಟುಂಬಗಳಿಗೆ ಧೈರ್ಯ, ಸಾಂತ್ವನ ಹೇಳಲು ಹೋಗಿಲ್ಲ. ಅಂಕಿ-ಅಂಶಗಳು ತಿಳಿಯದ ಜಿಲ್ಲೆಯ ಶಾಸಕರು ಅಧಿವೇಶನದಲ್ಲಿ ತಪ್ಪು ಮಾಹಿತಿ ನೀಡುತ್ತಿದ್ದಾರೆ. ನೈಜವಾಗಿ ರೈತರ ನೋವು ಅರಿತವರು ಈ ರೀತಿಯಾಗಿ ಹೇಳುವುದಿಲ್ಲ. ಶಾಸಕರ ಕ್ಷೇತ್ರಕ್ಕೆ ಬಂದ ಬಳಿಕ ದಾಖಲೆ ನೀಡಲಾಗುವುದು ಎಂದರು.

    ರೈತರು ಆತ್ಮಹತ್ಯೆ ಪ್ರಕರಣದ ಪರಿಹಾರಕ್ಕೆ ಅರ್ಜಿ ಸಲ್ಲಿಸಿದ ಬಳಿಕ ಕೃಷಿ ಇಲಾಖೆ ನಿರ್ದೇಶಕರೇ ಖುದ್ದಾಗಿ ರೈತರ ಮನೆಗೆ ತೆರಳಿ ಎಲ್ಲ ದಾಖಲೆ ಸಂಗ್ರಹಿಸಿಕೊಂಡು ಜಿಲ್ಲಾಧಿಕಾರಿಗೆ ವರದಿ ಸಲ್ಲಿಸಬೇಕು. ಆದರೆ, ರೈತನ ಕುಟುಂಬದವರನ್ನು ಎರಡ್ಮೂರು ತಿಂಗಳು ದಾಖಲೆಗಾಗಿ ಅಲೆದಾಡಿಸುತ್ತಿದ್ದಾರೆ. ಮೃತ ರೈತ ಕುಟುಂಬ ಸಂಕಷ್ಟದಲ್ಲಿರುವಾಗ ವಿವಿಧ ದಾಖಲೆ ಸಂಗ್ರಹಿಸಲು ಸಾಧ್ಯವೇ ಎಂದು ಪ್ರಶ್ನಿಸಿದ ಅವರು ಬ್ಯಾಂಕ್‌ಗಳಿಂದ ರೈತರಿಗೆ ಆಗುತ್ತಿರುವ ದಬ್ಬಾಳಿಕೆ ನಿಲ್ಲಬೇಕು. ನೋಟಿಸ್ ನೀಡಬಾರದು ಎಂದು ಒತ್ತಾಯಿಸಿದರು. ರೈತರ ಆತ್ಮಹತ್ಯೆ ತಡೆಯಲು ರೈತ ಸಂಘ ಸಹಾಯವಾಣಿ ತೆರೆಯಲಿದೆ ಎಂದು ತಿಳಿಸಿದರು.

    ಸುದ್ದಿಗೋಷ್ಠಿಯಲ್ಲಿ ಆತ್ಮಹತ್ಯೆಗೆ ಶರಣಾದ ರೈತರ ಭಾವಚಿತ್ರ ಪ್ರದರ್ಶಿಸಲಾಯಿತು. ರೈತ ಮುಖಂಡರಾದ ಗಂಗಣ್ಣ ಎಲಿ, ಶೇಖಪ್ಪ ಕಾಶಿ, ಕರಬಸಪ್ಪ ಶಿರಗಂಬಿ, ಮೌನೇಶ ಕಮ್ಮಾರ, ಹನುಮಂತಪ್ಪ ಮಲ್ಲೇಶಪ್ಪ ಡಂಬಳ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts