

ಮಂಡ್ಯ: ವಿಶೇಷ ಡ್ರೋನ್ ಸಂಶೋಧನೆ ಮಾಡಿರುವುದಾಗಿ ‘ಕಂಬಿ ಇಲ್ಲದೆ ರೈಲು ಬಿಟ್ಟ’ ಪ್ರತಾಪ್ ಬಣ್ಣ ಬಯಲಾದ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಬಿಸಿಬಿಸಿ ಚರ್ಚೆ ಶುರುವಾಗಿದ್ದು, ಆತನ ಹೆತ್ತವರು ‘ಹೋಮ್ ಕ್ವಾರಂಟೈನ್’ ಆಗಿಬಿಟ್ಟಿದ್ದಾರೆ.
‘ಡ್ರೋನ್ ತಯಾರಿಸಿದ್ದಾಗಿ ರೈಲು ಬಿಟ್ಟ ಪ್ರತಾಪ್!’ ಶೀರ್ಷಿಕೆಯಲ್ಲಿ ವಿಜಯವಾಣಿ ಭಾನುವಾರದ ಸಂಚಿಕೆಯಲ್ಲಿ ವರದಿ ಪ್ರಕಟಿಸಿತ್ತು. ಆತ ಎಂಥ ಮೋಡಿಗಾರ, ಮೋಸಗಾರ, ದೇಶದ ಹೆಸರಿನಲ್ಲಿ ಜನರನ್ನು ವಂಚಿಸಿದ್ದಾನೆ. ಆತನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಆತನಿಗೆ ನೀಡಿರುವ ನೆರವನ್ನು ವಾಪಸ್ ಪಡೆಯಬೇಕು ಎಂಬ ಮಾತು ಎಲ್ಲೆಡೆ ಕೇಳಿಬರುತ್ತಿವೆ. ಆತ ಮಾಡಿರುವ ವಂಚನೆ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ. ಸಾವಿರಾರು ಸುಳ್ಳುಗಳನ್ನು ಹೇಳಿ ಜನರನ್ನು ಲೂಟಿ ಮಾಡುವವರ ಮಧ್ಯೆ ಇಲ್ಲೊಬ್ಬ ಕೆಲ ಸುಳ್ಳುಗಳನ್ನು ಹೇಳಿ ಸ್ಪೂರ್ತಿಯಾದ, ಇಷ್ಟು ದಿನ ಹಾರಿಸಿದ್ದು ಡ್ರೋನ್ ಅಲ್ಲ ಕಾಗೆ, ಡ್ರೋನ್ ಪ್ರತಾಪ್ ಅಲ್ಲ ಡೌ ಪ್ರತಾಪ್... ಹೀಗೆ ವಿಭಿನ್ನ ರೀತಿಯಲ್ಲಿ ವ್ಯಂಗ್ಯವಾಡುತ್ತಿದ್ದಾರೆ.
ಹಲವರು ಕರೆ ಮಾಡಿ, ಆತನನ್ನು ಸುಮ್ಮನೆ ಬಿಡಬಾರದು. ದೇಶದ ಹೆಸರು ಹೇಳಿಕೊಂಡು ಜೆಎಸ್ಎಸ್ ಸಂಸ್ಥೆ ಸೇರಿ ಹಲವರಿಗೆ ಮಂಕು ಬೂದಿ ಎರಚಿರುವ ಆತನ ವಿರುದಟಛಿ ಕಾನೂನು ಕ್ರಮ ಕೈಗೊಳ್ಳಬೇಕು. ಅಕ್ರಮವಾಗಿ ಮಾಡಿರುವ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು ಎನ್ನುತ್ತಿದ್ದಾರೆ.
ಪ್ರತಾಪ್ ಬಗ್ಗೆ ‘ವಿಜಯವಾಣಿ’ಯಲ್ಲಿ ತನಿಖಾ ವರದಿ ಪ್ರಕಟವಾದ ಹಿನ್ನೆಲೆಯಲ್ಲಿ ಮಳವಳ್ಳಿ ತಾಲೂಕಿನ ನೆಟ್ಕಲ್ ಗ್ರಾಮದ ಆತನ ತಂದೆ, ತಾಯಿ ಮನೆಯಿಂದ ಹೊರಗೆ ಬರುತ್ತಿಲ್ಲ. ಮಗ ಏನೋ ಸಾಧನೆ ಮಾಡಿದ್ದಾನೆ ಎಂದು ಸಂಭ್ರಮದಲ್ಲಿ ಇದ್ದ ಅವರಿಗೆ, ಆತ ಮಂಕುಬೂದಿ ಎರಚಿದ್ದಾನೆ ಎಂಬ ಸತ್ಯ ಅರಗಿಸಿಕೊಳ್ಳಲಾಗದ ಸ್ಥಿತಿ ನಿರ್ವಣವಾಗಿದೆ.
ಬಕ್ರಾ ಆಗಿಬಿಟ್ಟೆ: ಡ್ರೋನ್ ಪ್ರತಾಪ್ಗೆ ಸಾಕಷ್ಟು ಪ್ರೋತ್ಸಾಹ ನೀಡಿದ ನಟ ಜಗ್ಗೇಶ್ ‘ಹಲವರನ್ನು ಬಕ್ರಾ ಮಾಡಿದ್ದ ನಾನೇ 57ನೇ ವಯಸ್ಸಿನಲ್ಲಿ ಬಕ್ರಾ ಆಗಿಬಿಟ್ಟೆ’ ಎಂದು ಟ್ವೀಟ್ ಮಾಡಿ ಬೇಸರ ವ್ಯಕ್ತಪಡಿಸಿದ್ದಾರೆ. ದೇಶಕ್ಕೆ ಏನೋ ಒಳ್ಳೆಯದು ಮಾಡುತ್ತಾನೆ ಎಂಬ ನಂಬಿಕೆಯಿಂದ ಪ್ರೋತ್ಸಾಹ ನೀಡಿದೆ. ನನ್ನ ಸ್ನೇಹಿತರಿಂದ ನೆರವು ಕೊಡಿಸಿದೆ. ಆದರೆ, ಆತನ ಬಗ್ಗೆ ಈಗ ಕೇಳಿ ತುಂಬ ನೋವಾಗುತ್ತಿದೆ. ಯಾರನ್ನು ನಂಬಬೇಕು, ಯಾರನ್ನು ನಂಬಬಾರದು ಎಂದು ಗೊತ್ತಾಗುತ್ತಿಲ್ಲ ಎಂದು ಹೇಳಿಕೊಂಡಿದ್ದಾರೆ. ದೇಶಾಭಿಮಾನ ಇರುವ ಅನೇಕ ಉದ್ಯಮಿಗಳು ಲಕ್ಷಾಂತರ ರೂ. ನೀಡಿದ್ದಾರೆ ಎನ್ನಲಾಗುತ್ತಿದೆ. ಸಮಗ್ರವಾಗಿ ತನಿಖೆ ಮಾಡಿದಲ್ಲಿ ಎಲ್ಲೆಲ್ಲಿಂದ ಹಣ ಬಂದಿದೆ ಎಂಬುದು ಗೊತ್ತಾಗಲಿದೆ. ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕೆಂಬ ಆಗ್ರಹ ಕೇಳಿಬರುತ್ತಿದೆ.
12-13 ದಿನದೊಳಗೆ ಸ್ಪಷ್ಟನೆ ನೀಡುತ್ತೇನೆ: 12ರಿಂದ 13 ದಿನದ ಒಳಗೆ ಜನತೆ ಮುಂದೆ ಬಂದು ದಾಖಲೆ ಸಮೇತ ಸ್ಪಷ್ಟಪಡಿಸುತ್ತೇನೆ ಎಂದು ಡ್ರೋನ್ ಪ್ರತಾಪ್ ತಿಳಿಸಿದ್ದಾರೆ. ಸದ್ಯ, ಕ್ವಾರಂಟೈನಲ್ಲಿದ್ದೇನೆ. ಮುಗಿದ ತಕ್ಷಣ ಸುದ್ದಿಗೋಷ್ಠಿ ನಡೆಸಿ ಸ್ಪಷ್ಟನೆ ಕೊಡುತ್ತೇನೆ ಎಂದು ದಿಗ್ವಿಜಯ 247 ನ್ಯೂಸ್ಗೆ ತಿಳಿಸಿದ್ದಾರೆ. ಆದರೆ, ತಾವು ಯಾವ ಪ್ರದೇಶದಲ್ಲಿದ್ದೇನೆ ಎಂಬುದನ್ನು ತಿಳಿಸಲು ನಿರಾಕರಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸುದ್ದಿಗಳೆಲ್ಲ ಸುಳ್ಳು. ಜಪಾನ್ ಹಾಗೂ ಜರ್ಮನಿಯಲ್ಲಿ ನಡೆದ ಸ್ಪರ್ಧೆಯಲ್ಲಿ ಭಾಗವಹಿಸಿರುವ ಬಗ್ಗೆ ನನ್ನ ಬಳಿ ಪ್ರಮಾಣ ಪತ್ರಗಳು ಇವೆ ಎಂದಿದ್ದಾರೆ. ಇದುವರೆಗೆ ನಾನು ಹಾಗೂ ನನ್ನ ವಿದ್ಯಾರ್ಥಿಗಳು ಸೇರಿ 600ಕ್ಕೂ ಅಧಿಕ ಡ್ರೋನ್ಗಳನ್ನು ತಯಾರಿಸಿದ್ದೇವೆ. 87 ದೇಶಗಳು ನನಗೆ ಆಫರ್ ಕೊಟ್ಟಿವೆ ಎಂದು ಎಲ್ಲೂ ಹೇಳಿಕೊಂಡಿಲ್ಲ. ನನ್ನ ಹೇಳಿಕೆ ತಿರುಚಲಾಗಿದೆ ಎಂದಿದ್ದಾರೆ.