ಚಾಲಕ, ಟೈಪಿಸ್ಟ್ ಹೊರ ಗುತ್ತಿಗೆ ಆಧಾರದಲ್ಲಿ ಮಾತ್ರ ನೇಮಕ

Vidhanasoudha
Published on

ಬೆಂಗಳೂರು: ಗ್ರೂಪ್- ಡಿ ಮತ್ತು ಸಮಾನಾಂತರ ಹುದ್ದೆ, ಗ್ರೂಪ್-ಸಿ ಹುದ್ದೆಗಳಾದ ಬೆರಳಚ್ಚುಗಾರರು, ದತ್ತಾಂಶ ನಮೂದು ಸಹಾಯಕರು (ಡಿಇಒ), ವಾಹನ ಚಾಲಕರು, ಶೀಘ್ರ ಲಿಪಿಗಾರರ ಹುದ್ದೆ ಭರ್ತಿಗೆ ಸಂಬಂಧಿಸಿದಂತೆ ಸರ್ಕಾರ ಮಹತ್ವದ ಸುತ್ತೋಲೆ ಹೊರಡಿಸಿದೆ.

ಕರ್ನಾಟಕ ಸರ್ಕಾರದ (ಕಾರ್ಯಕಲಾಪಗಳ ನಿರ್ವಹಣೆ) ನಿಯಮಗಳು, 1977ರ ಅನ್ವಯ ಆರ್ಥಿಕ ಇಲಾಖೆಯಿಂದ ಪೂರ್ವಾನುಮತಿ ಪಡೆಯದ ಹೊರತು ಅನುಮೋದಿತ ಅಲ್ಲದ ಹುದ್ದೆಗಳ ಎದುರಾಗಿ ಬ್ಯಾಕ್‌ಲಾಗ್ ಹುದ್ದೆಗಳು ಸೇರಿದಂತೆ ಖಾಲಿ ಹುದ್ದೆ ಭರ್ತಿ ಮಾಡಲು ಅವಕಾಶ ಇರುವುದಿಲ್ಲ. ಅನುಮತಿ ಕಡ್ಡಾಯವಾಗಿರುತ್ತದೆ. ಆರ್ಥಿಕ ಇಲಾಖೆ ಹುದ್ದೆ ಮಂಜೂರು ಮಾಡದ ಹೊರತು ವಿಶ್ವವಿದ್ಯಾಲಗಳು, ಇತರ ಸ್ವಾಯತ್ತ ಸಂಸ್ಥೆಗಳ ಮಟ್ಟದಲ್ಲಿ ಸೃಜಿಸಲಾದ ಹುದ್ದೆಗೆ ಯಾವುದೇ ಮಾನ್ಯತೆ ಇರುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ಅಲ್ಲದೆ ಆರ್ಥಿಕ ಇಲಾಖೆಯು ಇಂತಹ ಹುದ್ದೆ ಭರ್ತಿಗೆ ಸಹಮತಿ ನೀಡುವುದಿಲ್ಲ ಹಾಗೂ ಅನುದಾನ ಒದಗಿಸಲು ಕ್ರಮವಹಿಸುವುದಿಲ್ಲ.

ಅಲ್ಲದೇ ಗ್ರೂಪ್- ಡಿ ಮತ್ತು ಸಮಾನಾಂತರ ಹುದ್ದೆ, ಗ್ರೂಪ್-ಸಿ ಹುದ್ದೆಗಳಾದ ಬೆರಳಚ್ಚುಗಾರರು, ದತ್ತಾಂಶ ನಮೂದು ಸಹಾಯಕರು (ಡಿಇಒ), ವಾಹನ ಚಾಲಕರು, ಶೀಘ್ರ ಲಿಪಿಗಾರರ ಹುದ್ದೆಯನ್ನು ಹೊರಗುತ್ತಿಗೆ ಆಧಾರದ ಮೇಲೆ ಮಾತ್ರ ಭರ್ತಿ ಮಾಡುವುದು ಸರ್ಕಾರದ ನೀತಿಯಾಗಿದೆ ಎಂದು ಸ್ಪಷ್ಟಪಡಿಸಲಾಗಿದೆ.

ಆದ್ದರಿಂದ ಇಂತಹ ಹುದ್ದೆಗೆ ನೇರ ನೇಮಕಾತಿ ಪ್ರಶ್ನೆ ಉದ್ಭವಿಸುವುದಿಲ್ಲ. ಈ ವೃಂದಗಳಲ್ಲಿ (ಬ್ಯಾಕ್‌ಲಾಗ್ ಹುದ್ದೆ ಸೇರಿದಂತೆ) ಯಾವುದೇ ಖಾಲಿ ಹುದ್ದೆಗಳನ್ನು ಹೊರ ಗುತ್ತಿಗೆಮೂಲಕವೇ ಭರ್ತಿ ಮಾಡಬೇಕೆಂದು ಹೇಳಲಾಗಿದೆ.

ಅಷ್ಟೇ ಅಲ್ಲದೇ, ಬೆರಳಚ್ಚುಗಾರರು, ದತ್ತಾಂಶ ನಮೂದು ಸಹಾಯಕರು (ಡಿಇಒ), ವಾಹನ ಚಾಲಕರು, ಶೀಘ್ರ ಲಿಪಿಗಾರರ ಬ್ಯಾಕ್‌ಲಾಗ್ ಹುದ್ದೆಗೆ ಎದುರಾಗಿ ಹೊರಗುತ್ತಿಗೆ ಆಧಾರದ ಮೇಲೆ ನೇಮಕ ಮಾಡುವಾಗ ಆಯಾ ವರ್ಗಗಳಿಗೆ ಮೀಸಲಾದ ಅಭ್ಯರ್ಥಿ ಆಗಿದ್ದಾರೆಯೇ ಎಂದು ಆಡಳಿತ ಇಲಾಖೆಗಳು ಖಚಿತಪಡಿಸಿಕೊಳ್ಳುವಂತೆ ಆರ್ಥಿಕ ಇಲಾಖೆ ಸೂಚಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net