ಹಸು ಸಾಗಿಸುತ್ತಿದ್ದ ವಾಹನ ಡಿಕ್ಕಿಯಾಗಿ ಚಾಲಕ ಸಾವು

Published on

ಬಿಡದಿ: ಬೆಂಗಳೂರು - ಮೈಸೂರು ಹೆದ್ದಾರಿಯ ಕೇತಿಗಾನಹಳ್ಳಿಯ ಸ್ಟೀಲ್ ಬ್ರಿಡ್ಜ್ ಬಳಿ ಪಂಕ್ಚರ್ ಆಗಿದ್ದ ಕಾರಿನ ಟೈಯರ್ ಬದಲಿಸುತ್ತಿದ್ದವನಿಗೆ ಕ್ಯಾಂಟರ್ ವಾಹನ ಡಿಕ್ಕಿಯಾಗಿ ಚಾಲಕ ಹಾಗೂ ವಾಹನದಲ್ಲಿದ್ದ ಹಸು ಮೃತಪಟ್ಟಿದೆ.

ನಂಜನಗೂಡಿನ ಚಾಲಕ ಮುದ್ದಯ್ಯ (55) ಮೃತ.

ಬೆಂಗಳೂರಿನಲ್ಲಿ ನಡೆಯುತ್ತಿದ್ದ ಮದುವೆಗೆ 6-7 ಮಂದಿ ಕಾರಿನಲ್ಲಿ ತೆರಳುತ್ತಿದ್ದರು. ಈ ವೇಳೆ ಕೇತಿಗಾನಹಳ್ಳಿಯ ಸ್ಟೀಲ್ ಬ್ರಿಡ್ಜ್ ಬಳಿ ಕಾರಿನ ಚಕ್ರ ಪಂಕ್ಚರ್ ಆಗಿದೆ. ವಾಹನವನ್ನು ರಸ್ತೆ ಬದಿಗೆ ನಿಲ್ಲಿಸಿದ್ದ ಚಾಲಕ ಮುದ್ದಯ್ಯ ಟೈಯರ್ ಬಿಚ್ಚುತ್ತಿದ್ದ ವೇಳೆಗೆ ಅದೇ ಮಾರ್ಗದಲ್ಲಿ ಬಂದ ಕ್ಯಾಂಟರ್ ಕಾರಿನ ಚಾಲಕನಿಗೆ ಡಿಕ್ಕಿ ಹೊಡೆದಿದೆ. ಪರಿಣಾಮವಾಗಿ ಮುದ್ದಯ್ಯ ಸ್ಥಳದಲ್ಲೇ ಅಸುನೀಗಿದ್ದಾರೆ. ಕ್ಯಾಂಟರ್‌ನಲ್ಲಿ ಅಕ್ರಮವಾಗಿ 12 ಸೀಮೆ ಹಸುಗಳನ್ನು ಕಸಾಯಿಖಾನೆಗೆ ಸಾಗಾಟ ಮಾಡಲಾಗುತಿತ್ತು ಎನ್ನಲಾಗಿದ್ದು, ಡಿಕ್ಕಿ ಹೊಡೆದ ರಭಸಕ್ಕೆ ಕ್ಯಾಂಟರ್ ಪಲ್ಟಿಯಾಗಿದೆ. ಹಸುವೊಂದು ಮೃತಪಟ್ಟಿದೆ. ಮತ್ತೊಂದು ಹಸುವಿಗೆ ಗಂಭೀರ ಗಾಯವಾಗಿದೆ.

ಚಾಲಕ ಕ್ಯಾಂಟರ್ ಬಿಟ್ಟು ಪರಾರಿಯಾಗಿದ್ದಾನೆ. ಹಸುಗಳನ್ನು ಕೆಲವರು ಹಗ್ಗ ಬಿಚ್ಚಿ ಓಡಿಸಿದ್ದಾರೆ. ವಿಷಯ ತಿಳಿದ ಬಿಡದಿಯ ಬಜರಂಗದಳದ ಕಾರ್ಯಕರ್ತರು ಸ್ಥಳಕ್ಕೆ ತೆರಳಿ ಗಾಯಗೊಂಡಿದ್ದ ಹಸುವಿಗೆ ಚಿಕಿತ್ಸೆ ಕೊಡಿಸಿ ನಂತರ ಕುಂಬಳಗೂಡು ಬಳಿ ಇರುವ ಬಿಜಿಎಸ್ ಶಾಖಾ ಮಠದ ಗೋಶಾಲೆಗೆ ಬಿಟ್ಟರು. ಬಿಡದಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net