600 ರೂಪಾಯಿ ಬಾಡಿಗೆಗೆ 6,000 ಕೇಳಿದ ಡ್ರೈವರ್​; ಆಟೋ ಚಾಲಕನ ಕಳ್ಳಾಟ ಬಯಲು! | Delhi auto overcharging

ವಿದೇಶಿಗನಂತೆ ನಟಿಸಿದ ಪ್ರಯಾಣಿಕನಿಗೆ 600 ರೂಪಾಯಿ ಬಾಡಿಗೆಗೆ 6,000 ರೂ. ಕೇಳಿದ ದೆಹಲಿ ಆಟೋ ಚಾಲಕನ ಬಣ್ಣ ಬಯಲಾಗಿದೆ.
Driver demanded a higher auto fare
600 ರೂಪಾಯಿ ಬಾಡಿಗೆಗೆ 6,000 ಕೇಳಿದ ಚಾಲಕ
Published on: 

Delhi auto driver viral video: ದೆಹಲಿಯಲ್ಲಿ ಆಟೋ ಚಾಲಕನೊಬ್ಬ ನಿಗದಿಯಾಗಿದ್ದ ಬಾಡಿಗೆಗಿಂತ ಹತ್ತು ಪಟ್ಟು ಹೆಚ್ಚು ಹಣ ಪಡೆಯಲು ಒಪ್ಪಿಕೊಂಡಿದ್ದಾನೆ ಎನ್ನಲಾದ ಘಟನೆ ನಡೆದಿದೆ. ವಿದೇಶಿ ಪ್ರವಾಸಿಗನಂತೆ ನಟಿಸಿದ ವ್ಯಕ್ತಿಯೊಬ್ಬರು ಈ ಚಾಲಕನ ವರ್ತನೆಯನ್ನ ವಿಡಿಯೋದಲ್ಲಿ ಸೆರೆಹಿಡಿದಿದ್ದು, ಈಗ ಆ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಈ ಘಟನೆ ಮಾರ್ಚ್‌ನಲ್ಲಿ ನಡೆದಿತ್ತು ಎನ್ನಲಾಗಿದ್ದು, ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಬಿಎಲ್‌ಕೆ ಕಿಂಗ್ (BLK King) ಎಂಬ ಬಳಕೆದಾರರು ವಿಡಿಯೋ ಹಂಚಿಕೊಂಡಿದ್ದು, ಭಾರತದಲ್ಲಿ ಪ್ರಾಮಾಣಿಕತೆ ಕಣ್ಮರೆಯಾಗುತ್ತಿದೆಯೇ ಎಂಬ ಪ್ರಶ್ನೆಯನ್ನೂ ಎತ್ತಿದ್ದಾರೆ.

600 ರೂಪಾಯಿ ಬಾಡಿಗೆಗೆ 6,000 ಕೇಳಿದ ಚಾಲಕ

ವಿಡಿಯೋದಲ್ಲಿರುವ ಮಾಹಿತಿಯ ಪ್ರಕಾರ, ಪ್ರಯಾಣಿಕ ಕನ್ನಾಟ್ ಪ್ಲೇಸ್‌ನ ಒಳ ವೃತ್ತಕ್ಕೆ (Inner Circle) ಹೋಗಲು ಆಟೋ ಚಾಲಕನನ್ನು ಸಂಪರ್ಕಿಸಿದ್ದಾನೆ. ಈ ಪ್ರಯಾಣಕ್ಕೆ ಚಾಲಕ 600 ರೂಪಾಯಿ ಬಾಡಿಗೆ ಹೇಳಿದ್ದು, ಪ್ರಯಾಣಿಕನೂ ಅದಕ್ಕೆ ಒಪ್ಪಿಕೊಂಡಿದ್ದಾನೆ.

ಬಳಿಕ ಪ್ರಯಾಣಿಕ ವಿದೇಶಿಯಂತೆ ಇಂಗ್ಲಿಷ್​ನಲ್ಲಿ ಮಾತನಾಡಿದ್ದಾನೆ. ಇದನ್ನೇ ನಂಬಿದ ಚಾಲಕ, ಆತನಿಗೆ ಭಾರತೀಯ ಹಣದ ಬಗ್ಗೆ ಸರಿಯಾಗಿ ತಿಳಿದಿಲ್ಲ ಎಂದುಕೊಂಡು ಹೆಚ್ಚು ಹಣ ಪಡೆಯಲು ಮುಂದಾಗಿದ್ದಾನೆ ಎನ್ನಲಾಗಿದೆ. ಡಿಜಿಟಲ್ ಪಾವತಿ ವೇಳೆ ಪ್ರಯಾಣಿಕ 600 ರೂಪಾಯಿ ಬದಲು 6,000 ರೂಪಾಯಿ ನಮೂದಿಸಿ, ಮೊತ್ತ ಸರಿಯಾಗಿದೆಯೇ ಎಂದು ಹಲವು ಬಾರಿ ಕೇಳಿದ್ದಾನೆ.

ತಪ್ಪನ್ನು ಸಮರ್ಥಿಸಿಕೊಂಡ ಡ್ರೈವರ್​

ಕೊನೆಗೆ ಪ್ರಯಾಣಿಕ ಚಾಲಕನನ್ನು ತರಾಟೆಗೆ ತೆಗೆದುಕೊಂಡಿದ್ದಾನೆ. 600 ರೂಪಾಯಿ ಬಾಡಿಗೆಗೆ ಒಪ್ಪಿಕೊಂಡು, 6,000 ರೂಪಾಯಿ ಪಡೆಯಲು ಮುಂದಾಗಿದ್ದೇಕೆ ಎಂದು ಪ್ರಶ್ನಿಸಿದ್ದಾನೆ. ಇಂತಹ ವರ್ತನೆಯಿಂದ ಭಾರತದ ಹೆಸರಿಗೆ ಧಕ್ಕೆ ಬರುತ್ತೆ ಎಂದೂ ಹೇಳಿದ್ದಾನೆ. ಆದರೂ ಚಾಲಕ ತನ್ನ ತಪ್ಪನ್ನು ಒಪ್ಪಿಕೊಳ್ಳದೆ, ಪ್ರಯಾಣಿಕನೇ ಅಷ್ಟು ಹಣ ಕೊಡಲು ಮುಂದಾಗಿದ್ದರಿಂದ ಒಪ್ಪಿಕೊಂಡಿದ್ದಾಗಿ ಸಮರ್ಥಿಸಿಕೊಂಡಿದ್ದಾನೆ. ಅಲ್ಲಿದ್ದ ಮತ್ತೊಬ್ಬ ಆಟೋ ಚಾಲಕನಿಗೂ ಇದು ಗೊತ್ತಾಗಿದ್ದರೂ, ಆತ ಮಾತ್ರ ಸುಮ್ಮನಿದ್ದ ಎಂದು ವಿಡಿಯೋದಲ್ಲಿ ಹೇಳಲಾಗಿದೆ.

ಇದನ್ನೂ ಓದಿ: ಕುರ್ಚಿ ಬಿಟ್ಟರೂ ಕಡಿಮೆಯಾಗದ ಸಿದ್ದು ಕ್ರೇಜ್‌! ಮಗನಿಗೆ ‘ಅನ್ನರಾಮಯ್ಯ’ ಎಂದು ಹೆಸರಿಟ್ಟ ಅಭಿಮಾನಿ | Annaramayya

ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ

ವಿಡಿಯೋ ವೈರಲ್ ಆಗುತ್ತಿದ್ದಂತೆ, ಇಂತಹ ಘಟನೆಗಳಿಂದ ಪ್ರವಾಸಿಗರ ಎದುರು ದೆಹಲಿಯ ಹೆಸರು ಹಾಳಾಗುತ್ತೆ ಎಂದು ಹಲವರು ಬೇಸರ ವ್ಯಕ್ತಪಡಿಸಿದ್ದಾರೆ. ಪ್ರಯಾಣಿಕರಿಂದ ಹೆಚ್ಚು ಹಣ ಪಡೆಯಲು ಯತ್ನಿಸುವ ಇಂತಹ ವರ್ತನೆಗೆ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net