

ಬೆಂಗಳೂರು: ಚೆನ್ನೈ ಮೂಲದ ಉದ್ಯಮಿಯೊಬ್ಬರ ವಜ್ರದ ಆಭರಣ ಮತ್ತು ಚಿನ್ನಾಭರಣ ಕಳ್ಳತನ ಮಾಡಿದ್ದ ಕ್ಯಾಬ್ ಚಾಲಕನನ್ನು ಯಲಹಂಕ ನ್ಯೂಟೌನ್ ಪೊಲೀಸರು ಬಂಧಿಸಿದ್ದಾರೆ.
ರಾಜಾನುಕುಂಟೆ ಮೂಲದ ಕ್ಯಾಬ್ ಚಾಲಕ ನಂದೀಶ್ (೩೬) ಬಂಧಿತ. ಆರೋಪಿಯಿಂದ ೩೦ ಲಕ್ಷ ರೂ. ಮೌಲ್ಯದ ೪೮೫ ಗ್ರಾಂ ಚಿನ್ನಾಭರಣ, ೧೭.೫ ಕ್ಯಾರೆಟ್ ತೂಕದ ವಜ್ರದ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಉದ್ಯಮಿಯೊಬ್ಬರು ಸಂಬಂಧಿಕರ ಮದುವೆಗೆಂದು ಆ.೧೭ ರಂದು ಚೆನ್ನೈನಿಂದ ಬೆಂಗಳೂರಿಗೆ ಬಂದಿದ್ದರು. ಈ ವೇಳೆ ಆರೋಪಿ ನಂದೀಶನ ಕಾರನ್ನು ಬಾಡಿಗೆ ಪಡೆದಿದ್ದರು. ಉದ್ಯಮಿ ನಗರದ ಯಲಹಂಕ ನ್ಯೂಟೌನ್ ಬಳಿಯ ಹೊಟೇಲ್ನಲ್ಲಿ ಉಳಿದುಕೊಂಡಿದ್ದರು. ಮದುವೆ ಮುಗಿಸಿ ಉದ್ಯಮಿ ವಾಪಸು ತೆರಳುವ ವೇಳೆ ಒಡವೆಗಳಿದ್ದ ಸೂಟ್‌ಕೇಸ್ ಅನ್ನು ಕಾರಿನಲ್ಲಿರಿಸಿ, ರೂಮ್ ಕೀ ಹಿಂದಿರುಗಿಸಿ ಬರಲು ಹೋದಾಗ ಆರೋಪಿಯು ಅವರ ಸೂಟ್‌ಕೇಸ್ ಕದ್ದುಕೊಂಡು ಸ್ಥಳದಿಂದ ಪರಾರಿಯಾಗಿದ್ದ. ಈ ಬಗ್ಗೆ ಉದ್ಯಮಿ ಯಲಹಂಕ ನ್ಯೂ ಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆರೋಪಿ ನಂದೀಶ್ ಈ ಹಿಂದೆ ಕಳ್ಳತನ ಪ್ರಕರಣಗಳಲ್ಲಿಯೂ ಭಾಗಿಯಾಗಿರುವುದು ಪತ್ತೆಯಾಗಿದೆ. ಸದ್ಯ ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.