ಮುಡುಕುತೊರೆ ಜಾತ್ರೆಗೆ ಚಾಲನೆ

20200128_120813 (1)
Published on

ತಲಕಾಡು: ಇತಿಹಾಸ ಪ್ರಸಿದ್ಧ ಮುಡುಕುತೊರೆ ಜಾತ್ರೆಗೆ ಚಾಲನೆ ದೊರೆತಿದ್ದು, ಹಳ್ಳಿಕಾರ್ ಜೋಡಿ ರಾಸುಗಳ ಆಗಮನದಿಂದ ಮತ್ತಷ್ಟು ಕಳೆಗಟ್ಟಿದೆ.

ಕನಕಪುರ ತಾಲೂಕಿನ ಅಚ್ಚಲು ಗ್ರಾಮದ ರೈತ ಗೋವಿಂದರಾಜು ಎಂಬುವರು 6.5ಲಕ್ಷ ರೂ.ಮೌಲ್ಯದ ರಾಸು ಜಾತ್ರೆಯಲ್ಲಿ ಗಮನ ಸೆಳೆಯುತ್ತಿದೆ. ರಾಸುಗಳ ಆಗಮನ ಈಗಷ್ಟೇ ಶುರುವಾಗಿದ್ದು, ಮಂಗಳವಾರದಿಂದ ವ್ಯಾಪಾರ ಚಟುವಟಿಕೆ ಪ್ರಾರಂಭವಾಗಿದೆ.

ದುಬಾರಿ ದರದ ರಾಸುಗಳು ಪ್ರದರ್ಶನದಲ್ಲಿ ಕಣ್ಮನ ಸೆಳೆಯುತ್ತಿವೆ. ರೈತರು ವರ್ಣರಂಜಿತ ಅಲಂಕಾರಿಕ ಚಪ್ಪರಗಳನ್ನು ನಿರ್ಮಿಸಿ ಎತ್ತುಗಳನ್ನು ಮಾರಾಟಕ್ಕಿಟ್ಟಿದ್ದಾರೆ.

ರಾಸುಗಳಿಗೆ ಬಹುಮಾನ: ಉತ್ತಮ ರಾಸುಗಳಿಗೆ ಮುಜರಾಯಿ ಇಲಾಖೆಯಿಂದ ಪ್ರಶಸ್ತಿ ಪತ್ರ ಹಾಗೂ ಬಹುಮಾನ ನೀಡಲಾಗುತ್ತದೆ. ಆಯ್ಕೆ ಪ್ರಕ್ರಿಯೆ ಫೆ.2ರಂದು ನಡೆಯಲಿದ್ದು ಬಹುಮಾನ ವಿತರಣೆ ಕಾರ್ಯಕ್ರಮ ಫೆ.3ರಂದು ನಡೆಯಲಿದೆ.

ನೀರಿನ ಕಾರಂಜಿ: ಮುಡುಕುತೊರೆ ಏತನೀರಾವರಿ ಘಟಕದ ಮೂಲಕ ಬೆಟ್ಟದ ಮೇಲಿಂದ ರೈತರ ಜಮೀನಿಗೆ ನೀರು ಹರಿಸಲಾಗುತ್ತಿದೆ. ಪರಿಣಾಮ ಬೆಟ್ಟದ ಕೆಳಭಾಗದಲ್ಲಿ ಜಾನುವಾರುಗಳ ಮೈತೊಳೆಯಲು ಕಾರಂಜಿ ರೂಪದಲ್ಲಿ ಸಣ್ಣ ನೀರಾವರಿ ಇಲಾಖೆ ನೀರಿನ ವ್ಯವಸ್ಥೆ ಮಾಡಿದೆ.

ನಾಲೆಯಲ್ಲಿ ನೀರಿಲ್ಲ: ಪ್ರತಿವರ್ಷ ಜಾತ್ರೆ ಸಂದರ್ಭ ಇಲ್ಲಿನ ರಾಮಸ್ವಾಮಿ ನಾಲೆಯಿಂದ ಜಾನುವಾರುಗಳಿಗೆ ಕುಡಿಯಲು ನೀರು ಹರಿಸಲಾಗುತ್ತಿತ್ತು. ಈ ವರ್ಷ ನಾಲೆಯಿಂದ ನೀರು ಹರಿಸದ ಕಾರಣ ಜಾನುವಾರುಗಳಿಗೆ ತೊಂದರೆಯಾಗಿದೆ. ಪರಿಣಾಮ ಕುಡಿಯಲು ಅಳವಡಿಸಿರುವ ನಲ್ಲಿಯಿಂದ ರೈತರು ಬಕೆಟ್‌ಗಳಲ್ಲಿ ಹಿಡಿದು ತಂದು ರಾಸುಗಳಿಗೆ ಕುಡಿಸುತ್ತಿದ್ದಾರೆ.

ಭದ್ರತೆ ದೃಷ್ಟಿಯಿಂದ ಪೊಲೀಸ್ ಉಪಠಾಣೆ ತೆರೆಯಲಾಗಿದೆ. ಸ್ವಚ್ಛತೆ ನಿರ್ವಹಣೆಯನ್ನು ಬಿ.ಶೆಟ್ಟಹಳ್ಳಿ ಗ್ರಾಪಂಗೆ ವಹಿಸಲಾಗಿದ್ದು, ಕುಡಿವ ನೀರು, ಶೌಚಗೃಹ ನಿರ್ವಹಣೆಯನ್ನು ಜಿಲ್ಲಾ ಪಂಚಾಯಿತಿ ವಹಿಸಿಕೊಂಡಿದೆ. ಕಾವೇರಿ ನದಿಯ ಸೋಪಾನ ಕಟ್ಟೆ ಬಳಿ ಪುಣ್ಯಸ್ನಾನ ಮಾಡುವ ಮಹಿಳೆಯರಿಗೆ ದಾನಿಗಳ ನೆರವಿನಿಂದ ಐದು ಶಾಶ್ವತ ವಸ್ತ್ರ ಬದಲಾವಣೆ ಕೊಠಡಿಗಳನ್ನು ನಿರ್ಮಿಸಲಾಗಿದೆ.

ಸಾಂಸ್ಕೃತಿಕ ಕಾರ್ಯಕ್ರಮ: ತಾಲೂಕು ಆಡಳಿತ ಹಾಗೂ ಧಾರ್ಮಿಕ ದತ್ತಿ ಇಲಾಖೆ ಸಹಯೋಗದಲ್ಲಿ 10 ದಿನ ವಿವಿಧ ಸಾಂಸ್ಕೃತಿಕ ಮನರಂಜನಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ಇಲ್ಲಿನ ಜಾತ್ರಾ ರಂಗ ಮಂಟಪದಲ್ಲಿ ಜ.29ರ ಸಂಜೆ ಯೋಗ ಪ್ರದರ್ಶನ ನೃತ್ಯ, ಸಾಂಸ್ಕೃತಿಕ ಕಾರ್ಯಕ್ರಮ, 30ರಂದು ಸುಗಮ ಸಂಗೀತ, 31ರಂದು ಜನಪದೋತ್ಸವ, ಫೆ.1ರಂದು ನೃತ್ಯರೂಪಕ, 2ರಂದು ಜನಪದ ಗೀತೆ, ಸುಗಮ ಸಂಗೀತ, 3ರಂದು ಟಿ.ಬೆಟ್ಟಹಳ್ಳಿ ಡಾ.ಬಿ.ಆರ್.ಅಂಬೇಡ್ಕರ್ ಕಲಾ ಬಳಗದಿಂದ ದಕ್ಷಯಜ್ಞ ಎಂಬ ಪೌರಾಣಿಕ ನಾಟಕ ಪ್ರದರ್ಶನ, 4ರಂದು ಕೊಳತೂರು ಮಹದೇವ ಸ್ವಾಮಿ ತಂಡದಿಂದ ಜನಪದ ಗೀತೆಗಳ ಗಾಯನ, 5ರಂದು ಸುಗಮ ಸಂಗೀತ, ಜನಪದ ಗೀತೆಗಳು, 6ರಂದು ಭಕ್ತಿ, ಭಾವಗೀತೆ, 7ರಂದು ತಿ.ನರಸೀಪುರ ಕಲಾ ಬಳಗದಿಂದ ದಕ್ಷ ಯಜ್ಞ ಎಂಬ ಪೌರಾಣಿಕ ನಾಟಕ ಏರ್ಪಡಿಸಲಾಗಿದೆ.

ಸುಮಾರು 1.10ಲಕ್ಷ ರೂ. ಮೌಲ್ಯದ ರಾಸನ್ನು ಮಾರಾಟ ಮಾಡಲೆಂದು ಇಲ್ಲಿ ಕಟ್ಟಿದ್ದೇನೆ. ರಾಸುಗಳ ವ್ಯಾಪಾರ ಈಗಷ್ಟೇ ಪ್ರಾರಂಭವಾಗಬೇಕಿದೆ. ಬೆಟ್ಟದ ಕೆಳಭಾಗದಲ್ಲಿ ರಾಸುಗಳ ಮೈತೊಳೆಯಲು ಕಾರಂಜಿ ನೀರಿನ ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ ಕುಡಿಯುವ ನೀರು ಹಾಗೂ ನೆರಳಿನ ಸೌಕರ್ಯ ಚೆನ್ನಾಗಿದೆ.
> ಮರಿಸ್ವಾಮಿ ಶಾಸ್ಲಾಪುರ ಗ್ರಾಮ, ಕನಕಪುರ ತಾಲೂಕು

 6.50 ಲಕ್ಷ ರೂ. ಮೌಲ್ಯದ ರಾಸನ್ನು ಜಾತ್ರೆಯಲ್ಲಿ ಪ್ರದರ್ಶನಕ್ಕೆ ಕಟ್ಟಿದ್ದೇನೆ. ಕಳೆದ ವರ್ಷದ ಜಾತ್ರೆಯಲ್ಲಿ ಸಿಮೆಂಟ್ ತೊಟ್ಟಿ ನಿರ್ಮಿಸಿ ಜಾನುವಾರುಗಳಿಗೆ ನೀರು ಕುಡಿಸಲು ವ್ಯವಸ್ಥೆ ಮಾಡಲಾಗಿತ್ತು. ಆದರೆ ಈಗ ಸಿಮೆಂಟ್ ತೊಟ್ಟಿ ಹಾಳಾಗಿದೆ. ಹಾಗಾಗಿ ನೀರು ತುಂಬಿಸಿಲ್ಲ. ಅಲ್ಲದೆ ಪಕ್ಕದ ರಾಮಸ್ವಾಮಿ ನಾಲೆಯಲ್ಲೂ ನೀರಿಲ್ಲ. ಪರಿಣಾಮ ದೂರದಿಂದ ನೀರು ಹಿಡಿದು ತಂದು ರಾಸುಗಳಿಗೆ ಕುಡಿಸುತ್ತಿದ್ದೇನೆ.
> ಗೋವಿಂದರಾಜು ಅಚ್ಚಲು ಗ್ರಾಮ, ಕನಕಪುರ ತಾಲೂಕು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net