

ಶಿವಮೊಗ್ಗ: ಪ್ರತಿಯೊಬ್ಬರೂ ವಾಹನ ಕೊಂಡುಕೊಳ್ಳುವಾಗ ಅದರ ಕಾಯ್ದೆ, ಕಾನೂನು ತಿಳಿದುಕೊಳ್ಳುವ ಅವಶ್ಯಕತೆ ಇದೆ ಎಂದು ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿ ಅನಿಲ್‌ಕುಮಾರ್ ಭೂಮರಡ್ಡಿ ಹೇಳಿದರು.
ನಗರದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್, ಶಿವಮೊಗ್ಗ ನಗರ ಸಂಚಾರ ಪೊಲೀಸ್ ಇಲಾಖೆಯಿಂದ ಆಯೋಜಿಸಿದ್ದ ರಸ್ತೆ ಸುರಕ್ಷತಾ ಸಪ್ತಾಹ ಉದ್ಘಾಟಿಸಿ ಮಾತನಾಡಿ, ಸಮಾಜದ ಎಲ್ಲರೂ ರಸ್ತೆ ನಿಯಮಾವಳಿಗಳನ್ನು ಪಾಲನೆ ಮಾಡುವ ಮೂಲಕ ವಾಹನ ಚಲಾವಣೆಗೆ ಮುಂದಾಗಬೇಕು. ಪರವಾನಗಿ ಇದ್ದರಷ್ಟೇ ವಾಹನ ಚಲಾಯಿಸಬೇಕು ಎಂದು ತಿಳಿಸಿದರು.
18 ವರ್ಷ ವಯಸ್ಸಿನೊಳಗೆ ಇರುವವರು ಯಾರೂ ವಾಹನ ಚಲಾಯಿಸಬಾರದು. ನಮ್ಮ ದಾರಿಯಲ್ಲಿ ನಾವು ಸರಾಗವಾಗಿ ಸಾಗಿದರೆ, ರಸ್ತೆ ಸುರಕ್ಷತೆ ಕಾಪಾಡಿದಂತಾಗುತ್ತದೆ. ಎಲ್ಲರೂ ಹೆಲ್ಮೆಟ್ ಧರಿಸಿಯೇ ವಾಹನ ಚಲಾಯಿಸಬೇಕು. ಇತರರಿಗೂ ವಾಹನ ಚಲಾವಣೆ ಬಗ್ಗೆ ಜಾಗೃತಿ ಮೂಡಿಸಿ ಎಂದರು.
ಚಿತ್ರಕಲೆ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ಸ್ಕೌಟ್ಸ್ ಮತ್ತು ಬುಲ್ಬುಲ್ಸ್ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಸ್ಕೌಟ್ಸ್ ಆಯುಕ್ತ ಎಸ್.ಜಿ.ಆನಂದ್, ಗೈಡ್ ಆಯುಕ್ತೆ ಶಕುಂತಲಾ ಚಂದ್ರಶೇಖರ, ರೋವರ್ ಜಿಲ್ಲಾ ಆಯುಕ್ತ ಕೆ.ರವಿ, ಕೇಂದ್ರ ಸ್ಥಾನಿಕ ಆಯುಕ್ತ ಜಿ.ವಿಜಯಕುಮಾರ್, ಚಂದ್ರಶೇಖರ್, ಚೂಡಾಮಣಿ ಪವಾರ್, ಇನ್‌ಸ್ಪೆಕ್ಟರ್ ಸಂಜೀವ್‌ಕುಮಾರ್, ಟ್ರಾಫಿಕ್ ಇನ್‌ಸ್ಪೆಕ್ಟರ್ ಸಂತೋಷ್‌ಕುಮಾರ್, ರಾಜೇಶ್, ಶಿವಶಂಕರ್, ಮಲ್ಲಿಕಾರ್ಜುನ್ ಕಾನೂರ್, ಗೀತಾ ಚಿಕ್ಕಮಠ, ಚಂದ್ರಶೇಖರ್, ಕಾತ್ಯಾಯಿನಿ, ರಾಮಚಂದ್ರ ಮತ್ತಿತರರಿದ್ದರು.
ಫ್ರೆಂಡ್‌ಶಿಪ್ ಬ್ಯಾಂಡ್ ಕಟ್ಟಿ ಜಾಗೃತಿ
ಸಂಚಾರ ನಿಯಮಗಳ ಜಾಗೃತಿ ಹಾಗೂ ಕಟ್ಟುನಿಟ್ಟಿನ ಪಾಲನೆ ಮಾಡುವ ಕುರಿತು ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ವಾಹನ ಸವಾರರ ಕೈಗೆ ಫ್ರೆಂಡ್‌ಶಿಪ್ ಬ್ಯಾಂಡ್ ಕಟ್ಟುವ ಮೂಲಕ ವಿನೂತನವಾಗಿ ಜಾಗೃತಿ ಮೂಡಿಸಿದರು. ರಾಷ್ಟ್ರಿಯ ರಸ್ತೆ ಸುರಕ್ಷತಾ ಮಾಸಾಚರಣೆ ಅಂಗವಾಗಿ ನಡೆದ ಜಾಗೃತಿ ಜಾಥಾದಲ್ಲಿ ವಾಹನ ಸವಾರರ ಕೈಗೆ ಬ್ಯಾಂಡ್ ಕಟ್ಟಿದ ವಿದ್ಯಾರ್ಥಿಗಳು, ಸಂಚಾರ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಮನವಿ ಮಾಡಿದರು. ಜಾಥಾವು ಬಿ.ಎಚ್.ರಸ್ತೆ ಮಾರ್ಗವಾಗಿ ಆಗಮಿಸಿ ಟಿ.ಸೀನಪ್ಪ ಶೆಟ್ಟಿ ವೃತ್ತದಲ್ಲಿ ಅಂತ್ಯಗೊಂಡಿತು.