ಹಸಿದವರಿಗೆ ಅನ್ನದಾಸೋಹಕ್ಕೆ 13ರಂದು ಚಾಲನೆ

anna dasoha yojane
ಅಮೃತ ಅನ್ನದಾಸೋಹ ಪ್ರತಿಷ್ಠಾನದ ಅಧ್ಯಕ್ಷ ಡಾ. ಎ.ಸತೀಶ್ ಕುಮಾರ್ ಶೆಟ್ಟಿ ಮಾತನಾಡಿದರು. ಎಸ್‌ಎಲ್‌ಎನ್ ಕ್ಯಾಟಿರಿಂಗ್ ಮಾಲೀಕ ಪ್ರಭಾಕರ್, ಸುರೇಶ್‌ಕುಮಾರ್, ದಿನೇಶ್ ಹರಿಗೆ, ಐಟಿ ಕಂಪನಿಯ ನೇತ್ರಾವತಿ, ಕಲ್ಯಾಣಿ, ರೂಪಾ, ಬಬಿತಾ ಸುದ್ದಿಗೋಷ್ಠಿಯಲ್ಲಿದ್ದರು.
Published on

ಶಿವಮೊಗ್ಗ: ಹಸಿದವರ ಹೊಟ್ಟೆ ತುಂಬಿಸುವ ಅಮೃತ ಅನ್ನದಾಸೋಹ ಯೋಜನೆ ಸೆ.13ರಿಂದ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಆರಂಭಗೊಳ್ಳಲಿದೆ ಎಂದು ಅಮೃತ ಅನ್ನದಾಸೋಹ ಪ್ರತಿಷ್ಠಾನದ ಅಧ್ಯಕ್ಷ ಡಾ. ಎ.ಸತೀಶ್ ಕುಮಾರ್ ಶೆಟ್ಟಿ ಹೇಳಿದರು.

ಅಂದು ಬೆಳಗ್ಗೆ 11.30ಕ್ಕೆ ಕಾರ್ಯಕ್ರಮಕ್ಕೆ ಎಂಎಲ್‌ಸಿ ಡಾ. ಧನಂಜಯ ಸರ್ಜಿ ಚಾಲನೆ ನೀಡುವರು. ಮೆಗ್ಗಾನ್ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ. ತಿಮ್ಮಪ್ಪ ಹಾಗೂ ನಾಗರೀಕ ಹಿತರಕ್ಷಣಾ ವೇದಿಕೆಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಕೆ.ವಿ.ವಸಂತ್‌ಕುಮಾರ್ ಮುಖ್ಯ ಅತಿಥಿಗಳಾಗಿದ್ದು ಪ್ರತಿಷ್ಠಾನದ ಕಾರ್ಯದರ್ಶಿ ಟಿ.ಆರ್. ಸತ್ಯನಾರಾಯಣ, ಖಜಾಂಜಿ ಮುರುಳಿ ಉಪಸ್ಥಿತರಿರುವರು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಮೆಗ್ಗಾನ್ ಆಸ್ಪತ್ರೆಗೆ ಪ್ರತಿನಿತ್ಯ 10 ಸಾವಿರಕ್ಕೂ ಅಧಿಕ ರೋಗಿಗಳು ಹಾಗೂ ಅವರ ಅವಲಂಬಿತರು ಬರುತ್ತಾರೆ. ಆಸ್ಪತ್ರೆಯಲ್ಲಿ ಒಳ ರೋಗಿಗಳಾಗಿ ಚಿಕಿತ್ಸೆ ಪಡೆಯುವವರಿಗೆ ಆಸ್ಪತ್ರೆಯಿಂದಲೇ ಊಟ ಉಪಹಾರವನ್ನು ನೀಡಲಾಗುತ್ತಿದೆ. ಹೊರರೋಗಿಗಳಾಗಿ ಬರುವವರಿಗೆ ಇದರ ಅವಶ್ಯಕತೆ ಇದ್ದು, ಈ ಹಿನ್ನೆಲೆಯಲ್ಲಿ ಸಮಾನ ಮನಸ್ಕರ ತಂಡ ಉಚಿತ ಅನ್ನದಾಸೋಹ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದರು.
ಆರಂಭಿಕ ಹಂತವಾಗಿ ವಾರದಲ್ಲಿ ಬುಧವಾರ ಮತ್ತು ಶುಕ್ರವಾರ 200 ಜನರಿಗೆ ಈ ದಾಸೋಹ ಏರ್ಪಡಿಸಲಾಗುವುದು. ತದನಂತರದಲ್ಲಿ ಈ ಸಂಖ್ಯೆಯನ್ನು ಹಾಗೂ ದಿನಗಳನ್ನು ಹೆಚ್ಚಿಸಲಾಗುವುದು. ಒಂದು ದಿನಕ್ಕೆ 5 ಸಾವಿರ ರೂ. ವೆಚ್ಚ ತಗಲಿದೆ. ದಾನಿಗಳ ನೆರವೆನಿಂದ ಈ ಕಾರ್ಯವನ್ನ ಹಮ್ಮಿಕೊಳ್ಳಲಾಗಿದೆ.ಬೆಂಗಳೂರಿನಂತಹ ಮಹಾನಗರದಲ್ಲಿ ಇದರ ಬಗ್ಗೆ ಅಧ್ಯಯನ ನಡೆಸಿ ಇಲ್ಲಿ ಇದನ್ನು ಅನುಷ್ಠಾನಗೊಳಿಸಲು ಯೋಜನೆ ರೂಪಿಸಲಾಗಿದೆ. 150ರಿಂದ 200 ದಾನಿಗಳ ಪಟ್ಟಿ ಮಾಡಿಕೊಂಡಿದ್ದು ಹಲವರು ಈಗಾಗಲೇ ಕೈಜೋಡಿಸಿದ್ದಾರೆ ಎಂದು ಹೇಳಿದರು. ಎಸ್‌ಎಲ್‌ಎನ್ ಕ್ಯಾಟಿರಿಂಗ್ ಮಾಲೀಕ ಪ್ರಭಾಕರ್, ಸುರೇಶ್‌ಕುಮಾರ್, ದಿನೇಶ್ ಹರಿಗೆ, ಐಟಿ ಕಂಪನಿಯ ನೇತ್ರಾವತಿ, ಕಲ್ಯಾಣಿ, ರೂಪಾ, ಬಬಿತಾ ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net