ಕಾರಿನಲ್ಲೇ ಕೂತು ಲಸಿಕೆ ಪಡೆಯಿರಿ ! ಪ್ರತಿ ವಲಯದಲ್ಲೂ ಡ್ರೈವ್​ಇನ್ ಲಸಿಕಾ ಕೇಂದ್ರಗಳ ಸ್ಥಾಪನೆ

drive
Published on

ಮುಂಬೈ: ಕರೊನಾ ಲಸಿಕೆ ಪಡೆಯಲು ಜನರು ಸಾಮಾಜಿಕ ಅಂತರ ಮರೆತು ಸಾಲುಗಟ್ಟಿ ನಿಲ್ಲುವುದನ್ನು ತಪ್ಪಿಸಲು ಮತ್ತು ಹಿರಿಯ ನಾಗರೀಕರಿಗೆ - ಅಂಗವಿಕಲರಿಗೆ ಅನುಕೂಲ ಕಲ್ಪಿಸಲು ಮುಂಬೈನಲ್ಲಿ ಡ್ರೈವ್​ಇನ್ ಲಸಿಕಾ ಕೇಂದ್ರಗಳು ಕಾರ್ಯನಿರ್ವಹಿಸಲಿವೆ. ಈಗಾಗಲೇ ನಗರದ ದಾದರ್​ನಲ್ಲಿ ಈ ತೆರನ ಮೊದಲ ಕೇಂದ್ರ ಆರಂಭವಾಗಿದ್ದು, ಸದ್ಯದಲ್ಲೇ ಪ್ರತಿಯೊಂದು ವಲಯದಲ್ಲೂ ಸ್ಥಾಪಿಸಲಾಗುವುದು ಎನ್ನಲಾಗಿದೆ.

ದೊಡ್ಡ ತೆರೆದ ಮೈದಾನಗಳಲ್ಲಿ ಈ ಡ್ರೈವ್​ಇನ್ ಲಸಿಕಾ ಕೇಂದ್ರಗಳನ್ನು ಸ್ಥಾಪಿಸಲಾಗುವುದು. ಅದಕ್ಕಾಗಿ ಅಂಧೇರಿ ಸ್ಪೋರ್ಟ್ಸ ಕ್ಲಬ್ ಗ್ರೌಂಡ್, ಕೋಆಪರೇಜ್ ಗ್ರೌಂಡ್, ಶಿವಾಜಿ ಕ್ರೀಡಾಂಗಣ, ರಿಲಯನ್ಸ್​ ಜಿಯೊ ಗಾರ್ಡನ್, ವಾಂಖೇಡೆ ಕ್ರೀಡಾಂಗಣದಂತಹ ಸ್ಥಳಗಳನ್ನು ಬಳಸಿಕೊಳ್ಳಲು ಉದ್ದೇಶಿಸಲಾಗಿದೆ. ಸಾಧ್ಯವಾದಷ್ಟೂ ಇನ್ನು 24 ಗಂಟೆಗಳಲ್ಲಿ ಈ ಲಸಿಕಾ ಕೇಂದ್ರಗಳಿಗೆ ಸವಲತ್ತು ಸೃಷ್ಟಿಸುವಂತೆ ಮುಂಬೈ ನಗರ ಪಾಲಿಕೆ ತನ್ನ ಅಧಿಕಾರಿಗಳಿಗೆ ಸೂಚಿಸಿದೆ ಎನ್ನಲಾಗಿದೆ.

ತಕ್ಷಣಕ್ಕೆ ಲಸಿಕೆಗಳ ಕೊರತೆಯಿದ್ದರೂ, ಮುಂದಿನ ಯೋಜನೆಯಾಗಿ ಈ ಕೇಂದ್ರಗಳನ್ನು ಸೃಷ್ಟಿಸಲು ಪಾಲಿಕೆ ಮುಂದಾಗಿದೆ. ಈ ಕೇಂದ್ರಗಳಲ್ಲಿ ಲಸಿಕೆ ನೀಡಲಾಗುವ ಸ್ಥಳದಲ್ಲಿ ಆರೋಗ್ಯ ಸಿಬ್ಬಂದಿ ಕೂರಲು, ಲಸಿಕೆ ಪಡೆದ ಮೇಲೆ ಯಾವುದೇ ಅಡ್ಡಪರಿಣಾಮಗಳಾದಲ್ಲಿ ಚಿಕಿತ್ಸೆ ನೀಡಲು ತಾತ್ಕಾಲಿಕ ಶೆಲ್ಟರ್​ ರೂಪಿಸಲಾಗುವುದು. ಜೊತೆಗೆ ಒಂದು ಆ್ಯಂಬುಲೆನ್ಸ್​ಅನ್ನು ಕೂಡ ನಿಯುಕ್ತಿ ಮಾಡಲಾಗುವುದು ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.

ದಾದರ್​ನಲ್ಲಿ ಈ ವಾರ ಆರಂಭವಾದ ಮೊದಲ ಡ್ರೈವ್​ ಇನ್ ಲಸಿಕಾ ಕೇಂದ್ರವು ದಿನವೊಂದಕ್ಕೆ 5,000 ಜನರಿಗೆ ಲಸಿಕೆ ನೀಡುವ ಸಾಮರ್ಥ್ಯ ಹೊಂದಿದೆ. ಆಸ್ಪತ್ರೆಗಳೊಳಗೆ ಉದ್ದ ಸಾಲುಗಳಲ್ಲಿ ಜನಜಂಗುಳಿ ಉಂಟಾಗುವುದಕ್ಕೆ ಬದಲಾಗಿ ತೆರೆದ ಜಾಗದಲ್ಲಿ ಸೋಂಕು ತಗುಲುವ ಅತಿ ಕಡಿಮೆ ಸಾಧ್ಯತೆಯೊಂದಿಗೆ ಜನರಿಗೂ ವಾಹನದಲ್ಲೇ ಕೂತು ಲಸಿಕೆ ಪಡೆಯುವ ಅವಕಾಶ ಲಭ್ಯವಾಗಲಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net