ಬಿಎಂಟಿಸಿಯಲ್ಲಿ ಕುಡಿಯುವ ನೀರಿಗೆ ಸಮಸ್ಯೆ: ಎಂಡಿಗೆ ಪತ್ರ ಬರೆದು ಸಮಸ್ಯೆ ಬಗೆಹರಿಸಿ ಎಂದ ಸಿಬ್ಬಂದಿ

bmtc
Published on

ಬೆಂಗಳೂರು: ಬಿಎಂಟಿಸಿ ನೌಕರರಿಗೆ ಕುಡಿಯುವ ನೀರಿನ ಸಮಸ್ಯೆಯಾಗಿದ್ದು, ಈ ಸಂಬಂಧ ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕರಿಗೆ ಪತ್ರ ಬರೆದು ನೀರಿನ ಸಮಸ್ಯೆ ಬಗೆಹರಿಸಿ ಎಂದು ಮನವಿ ಮಾಡಿದ್ದಾರೆ.

ಪತ್ರದಲ್ಲಿ ಏನಿದೆ?
೨೦೨೪ ರ ಏಪ್ರಿಲ್ ೮ ರಂದು ಸಮಗ್ರ ಸಾರಿಗೆ ಸಂಸ್ಥೆಯ ಸಿಬ್ಬಂದಿ ಪರವಾಗಿ ಯೋಗೇಶ್ ಗೌಡ ಬಿಎಂಟಿಸಿ ಎಂಡಿಗೆ ಪತ್ರ ಬರೆದು ಸಂಸ್ಥೆಯ ಏಳಿಗೆಗಾಗಿ ದುಡಿಯುತ್ತಿರುವ ನೌಕರರಿಗೆ ನೀರಿನ ಸಮಸ್ಯೆ ಉಂಟಾಗುತ್ತಿದೆ. ಹೀಗಾಗಿ ಪ್ರಮುಖ ನಿಲ್ದಾಣಗಳಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಿ ಅಂತ ಮನವಿ ಮಾಡಿದ್ದಾರೆ. ಪ್ರತಿನಿತ್ಯ ಕರ್ತವ್ಯ ನಿರ್ವಹಣೆ ಮಾಡುತ್ತಿರುವ ಚಾಲಕರು ಹಾಗೂ ನಿರ್ವಾಹಕರಿಗೆ ಸಂಚಾರ ದಟ್ಟಣಿ ಹಾಗೂ ಬಿಸಿಲಿನ ತಾಪಕ್ಕೆ ಕರ್ತವ್ಯ ನಿರ್ವಹಿಸುವುದು ಕಷ್ಟವಾಗುತ್ತಿದೆ. ಇದೀಗ ನೀರಿನ ಬವಣೆ ನೀಗಿಸುವ ನಿಟ್ಟಿನಲ್ಲಿ ಮನೆಯಿಂದ ಪ್ರತಿನಿತ್ಯ ತರುವ ೪ ರಿಂದ ೫ ಲೀಟರ್ ನೀರು ಸಾಕಾಗೋದಿಲ್ಲ. ಹೀಗಾಗಿ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದ್ದಾರೆ. ಹಾಗೆನೇ ಶೌಚಾಲಯದಲ್ಲೂ ಸಮರ್ಪಕ ನೀರಿನ ವ್ಯವಸ್ಥೆ ಮಾಡಬೇಕಿದೆ. ನೀರಿನ ಸಮಸ್ಯೆಯಿಂದ ಮಹಿಳಾ ಸಿಬ್ಬಂದಿಗೆ ಕರ್ತವ್ಯ ನಿರ್ವಹಿಸಲು ಕಷ್ಟವಾಗುತ್ತಿದೆ. ಆದ ಕಾರಣ ತಾವುಗಳು ಕೂಡಲೇ ಸಂಸ್ಥೆಯ ಅಧಿಕಾರಿಗಳ ಗಮನಕ್ಕೆ ತಂದು ಬಿಬಿಎಂಪಿ ವ್ಯಾಪ್ತಿಯ ಪ್ರಮುಖ ನಿಲ್ದಾಣಗಳಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಿಕೊಡಬೇಕಾಗಿ ಮನವಿ ಮಾಡಿಕೊಂಡಿದ್ದಾರೆ.

ಎಲ್ಲೆಲ್ಲಿ ನೀರಿನ ಸಮಸ್ಯೆ ಆಗಿದೆ?
ಬಿಎಂಟಿಸಿಯಲ್ಲಿ ೫೦ ಡಿಪೋಗಳಿವೆ. ಇದರ ಜತೆಗೆ ನೂರಾರು ನಿಲ್ದಾಣಗಳಿವೆ. ಬಹುತೇಕ ನಿಲ್ದಾಣಗಳಲ್ಲಿ ಹಾಗೂ ರಾತ್ರಿ ಪಾಳಿಯಲ್ಲಿ ತಂಗುವ ಸ್ಥಳಗಳಲ್ಲಿ ನೀರಿನ ಸಮಸ್ಯೆ ಸಾಕಷ್ಟಿದೆ. ಮೆಜೆಸ್ಟಿಕ್, ಕೆಂಗೇರಿ, ಕತ್ರಿಗುಪ್ಪೆ, ಕಾಳಿದಾಸ ಲೇಔಟ್ ಬಸ್ ನಿಲ್ದಾಣ, ಶ್ರೀನಗರ ಬಸ್ ನಿಲ್ದಾಣ, ಕಗ್ಗಲೀಪುರ, ನೆಲ್ಲಿಗೆರೆ ಸೇರಿ ಹಲವು ಕಡೆಗಳಲ್ಲಿ ನೀರಿನ ಸಮಸ್ಯೆ ಉಂಟಾಗಿದೆ. ಹೀಗಾಗಿ ಬಹುತೇಕ ನೌಕರರು ರಾತ್ರಿ ಪಾಳಿಯಲ್ಲಿ ನಾವು ಡ್ಯೂಟಿ ಮಾಡಲ್ಲ ಅಂತ ಹೇಳುತ್ತಿದ್ದಾರೆ ಎಂದು ಸಿಬ್ಬಂದಿ, ಅಧಿಕಾರಿಗಳ ಗಮನಕ್ಕೆ ಬಂದಿದೆ.

ಐದಾರು ಡಿಪೋಗಳಲ್ಲಿ ಸಮಸ್ಯೆಯಾಗಿದೆ:
ಬಿಎಂಟಿಸಿಯಲ್ಲಿ ೫೦ ಡಿಪೋಗಳಿವೆ ಇದರಲ್ಲಿ ಐದಾರು ಡಿಪೋಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗಿದೆ. ಶುದ್ಧ ನೀರಿನ ಘಟಕಗಳು ಕೆಟ್ಟು ಹೋಗಿದ್ದು ಅದನ್ನು ಸರಿಪಡಿಸುವ ಕೆಲಸ ಮಾಡಲಾಗುವುದು ಎಂದು ಬಿಎಂಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net