ಕಾರ್ವಿುಕರ ಕುಟುಂಬದಲ್ಲಿ ಆತಂಕ: ಸುರಂಗದಲ್ಲಿ ಸಿಲುಕಿ ಒಂದು ವಾರ ಪೂರ್ಣ, ತಾಂತ್ರಿಕ ಕಾರಣಕ್ಕೆ ರಕ್ಷಣೆ ವಿಳಂಬ

UK Tunnel
Published on

ಉತ್ತರಕಾಶಿ (ಉತ್ತರಾಖಂಡ): ಚಾರ್​ಧಾಮ್ ಯಾತ್ರೆ ಮಾರ್ಗದಲ್ಲಿ ನಿರ್ಮಾಣ ಹಂತದಲ್ಲಿದ್ದ ಸುರಂಗ ಕುಸಿದು ಸುಮಾರು ಒಂದು ವಾರ ಕಳೆಯುತ್ತಿದ್ದು, ಅದರಲ್ಲಿ ಸಿಲುಕಿರುವ 41 ಕಾರ್ವಿುಕರ ರಕ್ಷಣಾ ಕಾರ್ಯಾಚರಣೆ ಮಂದಗತಿಯಲ್ಲಿ ಸಾಗಿದೆ. ಈ ನಡುವೆ ಕೆಲ ಕಾರ್ವಿುಕರ ಕುಟುಂಬಸ್ಥರು ಅವರೊಂದಿಗೆ ಮಾತುಕತೆ ನಡೆಸಿದ್ದು, ಆರೋಗ್ಯದ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.

‘ಅವರ ಧ್ವನಿಗಳು ದುರ್ಬಲವಾಗಿವೆ. ಶಕ್ತಿಯು ಕ್ಷೀಣಿಸುತ್ತಿದೆ’ ಎಂದು ಕಾರ್ವಿುಕರ ಕುಟುಂಬಸ್ಥರೊಬ್ಬರು ಮಾಧ್ಯಮಕ್ಕೆ ತಿಳಿಸಿದ್ದಾರೆ. ಗಂಟೆಗಳು ಕಳೆದಂತೆ ಸುರಂಗದ ಹೊರಗೆ ಕಾಯುತ್ತಿರುವ ಕುಟುಂಬದ ಸದಸ್ಯರ ಹತಾಶೆಯೂ ಹೆಚ್ಚುತ್ತಿದೆ. ಸುರಂಗದೊಳಗೆ ಅಸಹಾಯಕ ಸ್ಥಿತಿಯಲ್ಲಿರುವ ಕಾರ್ವಿುಕರ ಆರೋಗ್ಯ ಸ್ಥಿತಿ ಹದಗೆಡುತ್ತಿದೆ. ಕುಟುಂಬಸ್ಥರು ಕೂಡ ಭಯಭೀತರಾಗುತ್ತಿದ್ದಾರೆ ಎಂದು ಸುರಂಗದ ಒಳಗೆ ಸಿಲುಕಿರುವ ಕಾರ್ವಿುಕ ಸುಶೀಲ್ ಶರ್ಮಾ ಅವರ ಸಹೋದರ ಹರಿದ್ವಾರ ಹೇಳಿದ್ದಾರೆ. ಕಾರ್ವಿುಕರನ್ನು ರಕ್ಷಿಸಲಾಗುವುದು ಎಂದು ಅಧಿಕಾರಿಗಳು ಭರವಸೆ ನೀಡುತ್ತಲೇ ಇದ್ದಾರೆ. ಇದು ಸುಮಾರು ಒಂದು ವಾರದಿಂದ ನಡೆಯುತ್ತಲೇ ಇದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸುರಂಗದೊಳಗೆ ಯಾವುದೇ ಕೆಲಸ ನಡೆಯುತ್ತಿಲ್ಲ. ಕಂಪನಿಯಾಗಲಿ, ಸರ್ಕಾರವಾಗಲಿ ಏನೂ ಮಾಡುತ್ತಿಲ್ಲ ಎಂದು ಕಾರ್ವಿುಕರ ಸಂಬಂಧಿಕರು ಕಣ್ಣೀರು ಹಾಕುತ್ತಿದ್ದಾರೆ. ಹತ್ತಾರು ಕಾರ್ವಿುಕರ ಕುಟುಂಬ ಈಗ ಸುರಂಗದ ಸಮೀಪದಲ್ಲೇ ಮೊಕ್ಕಾಂ ಹೂಡಿವೆ. ಇನ್ನೂ ಹಲವರ ಕುಟುಂಬಸ್ಥರು ಇಲ್ಲಿಗೆ ಬರುತ್ತಿದ್ದಾರೆ.

ಆಮ್ಲಜನಕವನ್ನು ಪೂರೈಸಲು ಬಳಸುವ ಪೈಪ್ ಮೂಲಕ ಕಾರ್ವಿುಕರ ಜತೆ ಕೆಲ ಕುಟುಂಬಸ್ಥರು ಮಾತುಕತೆ ನಡೆಸಿದ್ದಾರೆ. ಅವರ ಧ್ವನಿ ತುಂಬಾ ದುರ್ಬಲವಾಗಿತ್ತು. ಸಹೋದರನೊಂದಿಗೆ ಮಾತನಾಡಲು ಸಾಧ್ಯವಾಗಲಿಲ್ಲ ಎಂದು ಗಬ್ಬರ್ ಸಿಂಗ್ ನೇಗಿ ಕುಟುಂಬ ತಿಳಿಸಿದೆ. ಸಿಕ್ಕಿಬಿದ್ದ ಕಾರ್ವಿುಕರು ಭರವಸೆ ಕಳೆದುಕೊಳ್ಳಲಾರಂಭಿಸಿದ್ದಾರೆ. ಲಘು ಆಹಾರ ಪದಾರ್ಥಗಳನ್ನು ಸೇವಿಸಿ ಎಷ್ಟು ದಿನ ಉಳಿಯಬಹುದು? ಎಂದು ಅವರು ಪ್ರಶ್ನಿಸಿದ್ದಾರೆ. ಅಮೆರಿಕದಿಂದ ತರಲಾದ ಆಗರ್ ಯಂತ್ರದ ಮೂಲಕ ಪ್ರಸ್ತುತ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಕಲ್ಲುಮಣ್ಣುಗಳ ನಡುವೆ ಪೈಪ್​ಗಳನ್ನು ಕೊರೆದು, ಇದರ ಮೂಲಕ ಕಾರ್ವಿುಕರು ಪೈಪ್ ಒಳಗಿನಿಂದ ತೆವಳಿಕೊಂಡು ಹೊರಗೆ ಬರಬೇಕು. ಆದರೆ ಈ ಯಂತ್ರದಲ್ಲೂ ಈ ದೋಷ ಕಂಡುಬಂದಿದೆ. ಹೀಗಾಗಿ ಉನ್ನತ ಕಾರ್ಯಕ್ಷಮತೆಯ ಮತ್ತೊಂದು ಡ್ರಿಲ್ಲಿಂಗ್ ಯಂತ್ರವನ್ನು ತರಲಾಗುತ್ತಿದೆ.

ರಕ್ಷಣಾ ಕಾರ್ಯಾಚರಣೆ ಸ್ಥಗಿತ

ಸುರಂಗದಲ್ಲಿ ಸಿಲುಕಿರುವ ಕಾರ್ವಿುಕರನ್ನು ರಕ್ಷಿಸುವ ಕಾರ್ಯಾಚರಣೆ ಶುಕ್ರವಾರದಿಂದ ಸ್ಥಗಿತಗೊಂಡಿದೆ. ಈಗಾಗಲೇ ಕಾರ್ವಿುಕರು ಇಲ್ಲಿ ಸಿಲುಕಿ ಒಂದು ವಾರ ಕಳೆದಿದ್ದು, ಈಗ ರಕ್ಷಣಾ ಕಾರ್ಯಾಚರಣೆಗೂ ಹಿನ್ನೆಲೆ ಆಗಿರುವುದು ಆತಂಕಕ್ಕೆ ಕಾರಣವಾಗಿದೆ. ಶುಕ್ರವಾರ ಮಧ್ಯಾಹ್ನ ಕಾರ್ಯಾಚರಣೆ ಸ್ಥಗಿತಗೊಳಿಸುವ ವೇಳೆಗೆ ಸುರಂಗದ ಒಳಗಿನ ಕಲ್ಲುಮಣ್ಣುಗಳ ಮೂಲಕ ಹೆವಿ ಡ್ಯೂಟಿ ಆಗರ್ ಯಂತ್ರವು 24 ಮೀಟರ್ ವರೆಗೆ ಕೊರೆಯಿತು. ಮಧ್ಯಾಹ್ನ 2.45ರ ಸುಮಾರಿಗೆ ಸುರಂಗದಲ್ಲಿ ಜೋರಾಗಿ ಬಿರುಕು ಬಿಡುವ ಶಬ್ದ ಕೇಳಿಸಿತು. ನಂತರ ರಕ್ಷಣಾ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬಿರುಕು ಬಿಡುವ ಶಬ್ದ ರಕ್ಷಣಾ ತಂಡದಲ್ಲಿ ತಲ್ಲಣ ಮೂಡಿಸಿದೆ. ಸುರಂಗದ ಒಳಗೆ ಮತ್ತಷ್ಟು ಕುಸಿತ ಸಾಧ್ಯತೆ ಬಗ್ಗೆ ತಜ್ಞರು ಎಚ್ಚರಿಕೆ ನೀಡಿದ್ದಾರೆ. ಹೀಗಾಗಿ ಡ್ರಿಲ್ಲಿಂಗ್ ಚಟುವಟಿಕೆ ನಿಲ್ಲಿಸಲಾಗಿದೆ.

ಈವರೆಗೆ ನಡೆದಿದ್ದೇನು?

  • ಕಳೆದ ಭಾನುವಾರ ಸುರಂಗದೊಳಗೆ ಕುಸಿತ. 41 ಕಾರ್ವಿುಕರು ಅಪಾಯದಲ್ಲಿ
  • ಮುಂದಿನ ಎರಡು ದಿನ ಎಕ್ಸ್​ಕವೇಟರ್ ಮೂಲಕ ತೆರವು ಕಾರ್ಯ. ಸುರಂಗದ ದ್ವಾರದಲ್ಲಿ ಮಣ್ಣು ತೆಗೆದಷ್ಟೂ ಮತ್ತೆ ಅಷ್ಟೇ ಪ್ರಮಾಣದ ಮಣ್ಣು ಅಲ್ಲಿ ಸಂಗ್ರಹವಾಗುತ್ತಿರುವುದು ಸಮಸ್ಯೆ
  • ಬುಧವಾರದಿಂದ ಡ್ರಿಲ್ಲಿಂಗ್ ಕಾರ್ಯ ಆರಂಭ. ಆದರೆ ಡ್ರಿಲ್ಲಿಂಗ್ ಯಂತ್ರದ ಸಾಮರ್ಥ್ಯ ಕಡಿಮೆ ಇದ್ದ ಕಾರಣ ಕಾರ್ಯಾಚರಣೆಗೆ ಹಿನ್ನಡೆ
  • ಶುಕ್ರವಾರ ದೆಹಲಿಯಿಂದ ಹೊಸ ಯಂತ್ರ ತರಲಾಗಿದ್ದು, ಸುಮಾರು 22 ಮೀಟರ್ ಕೊರೆದ ನಂತರ ದೊಡ್ಡ ಶಬ್ದ ಕೇಳಿಬಂದಿದ್ದು, ಡ್ರಿಲ್ಲಿಂಗ್ ಕಾರ್ಯ ಸ್ಥಗಿತ
  • ಶನಿವಾರ ಕೇಂದ್ರದ ಅಧಿಕಾರಿಗಳು, ಅಂತಾರಾಷ್ಟ್ರೀಯ ತಜ್ಞರ ಭೇಟಿ, ಸ್ಥಳ ಪರಿಶೀಲನೆ. ಕಾರ್ಯಾಚರಣೆ ಮುಂದುವರಿಕೆಯ ಬಗ್ಗೆ ಪರಾಮರ್ಶೆ

ಯಂತ್ರ ಸಾಗಣೆಗೆ ವಾಯುಪಡೆ ವಿಮಾನ 22 ಟನ್ ಭಾರದ ಯಂತ್ರ, ಉಪಕರಣಗಳನ್ನು ಭಾರತೀಯ ವಾಯುಪಡೆಯ ಸಿ-17 ಸಾರಿಗೆ ವಿಮಾನ ಇಂದೋರ್​ನಿಂದ ಡೆಹ್ರಾಡೂನ್​ಗೆ ಹೊತ್ತೊಯ್ದಿದೆ. ನಂತರ ಇದನ್ನು ರಸ್ತೆ ಮಾರ್ಗವಾಗಿ ಉತ್ತರಕಾಶಿಗೆ ತರಲಾಗಿದೆ.

ಯೋಜನೆಯಲ್ಲಿ ಲೋಪ?

ನಿರ್ಮಾಣ ಕಾರ್ಯದಲ್ಲಿ ತೊಡಗಿರುವ ಕಂಪನಿ ಗಂಭೀರವಾದ ಲೋಪ ಎಸಗಿದೆ ಎಂಬ ಆರೋಪ ಈಗ ಕೇಳಿಬಂದಿದೆ. ನಿಯಮದ ಪ್ರಕಾರ, 3 ಕಿಮೀ ಉದ್ದದ ಎಲ್ಲಾ ಸುರಂಗದಲ್ಲಿ ತುರ್ತು ನಿರ್ಗಮನ ಮಾರ್ಗ ಇರಬೇಕು. ವಿಪತ್ತಿನ ಸಂದರ್ಭದಲ್ಲಿ ಜನರನ್ನು ರಕ್ಷಿಸಲು ಇದು ನೆರವಾಗುತ್ತದೆ. 4.5 ಕಿಮೀ ಉದ್ದ ಸಿಲ್ಕಾ್ಯರಾ ಸುರಂಗದ ಮೂಲ ನಕ್ಷೆಯಲ್ಲಿ ತುರ್ತು ನಿರ್ಗಮನ ದ್ವಾರದ ಉಲ್ಲೇಖ ಇದೆ. ಆದರೆ ಅದನ್ನು ಕಾರ್ಯಗತಗೊಳಿಸಲಾಗಿಲ್ಲ ಎಂಬ ವಿಚಾರ ಬೆಳಕಿಗೆ ಬಂದಿದೆ.

ಸ್ಥಳಕ್ಕೆ ಕೇಂದ್ರದ ತಂಡ

ಕೇಂದ್ರದ ಹೆಚ್ಚುವರಿ ಕಾರ್ಯದರ್ಶಿ ಮಹಮೂದ್ ಅಹ್ಮದ್, ಪ್ರಧಾನಿ ಸಚಿವಾಲಯದ ಉಪ ಕಾರ್ಯದರ್ಶಿ ಮಂಗೇಶ್ ಗಿಲ್ಡಿಯಾಲ್, ಇಂಜಿನಿಯರಿಂಗ್ ಮತ್ತು ಭೂವಿಜ್ಞಾನಿ ಅರ್ವಂಡೋ ಕ್ಯಾಪೆಲ್ಲನ್ ಸಹಿತ ಹಲವರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ರಕ್ಷಣಾ ಕಾರ್ಯಾಚರಣೆ ಕುರಿತು ಮಾಹಿತಿ ಪಡೆದಿದ್ದಾರೆ. ಸರ್ಕಾರವು ಕಾರ್ವಿುಕರ ಕುಟುಂಬದ ಜತೆ ನಿಂತಿದೆ. ಅವರ ಸುರಕ್ಷಿತ ಮತ್ತು ಸಕಾಲಿಕ ಸ್ಥಳಾಂತರಿಸುವಿಕೆ ನಮ್ಮ ಆದ್ಯತೆಯಾಗಿದೆ ಎಂದು ಅವರು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net