ಕೆಸರು ಗದ್ದೆಯಲ್ಲಿ ಗೆಲುವಿಗಾಗಿ ಕಸರತ್ತು

kesarugadde
ಹರಿಹರಪುರ ಸಮೀಪದ ನಾಗಲಾಪುರ ಗದ್ದೆಯಲ್ಲಿ ನಮ್ಮ ಮಲ್ನಾಡ್ ಹಮ್ಮಿಕೊಂಡಿದ್ದ ಕೆಸರುಗದ್ದೆ ಆಟೋಟ ಸ್ಪರ್ಧೆಯಲ್ಲಿ ಎರಡು ತಂಡಗಳು ಹಗ್ಗಜಗ್ಗಾಟ ನಡೆಸುತ್ತಿರುವುದು.
Published on

ಕೊಪ್ಪ: ತಾಲೂಕಿನ ನಾಗಲಾಪುರದಲ್ಲಿ ಭಾನುವಾರ ನಮ್ಮ ಮಲ್ನಾಡ್ ಆಶ್ರಯದಲ್ಲಿ ಆಯೋಜಿಸಿದ್ದ ಶೃಂಗೇರಿ ಕ್ಷೇತ್ರ ಮಟ್ಟದ ಕೆಸರುಗದ್ದೆ ಆಟೋಟ ಸ್ಪರ್ಧೆಯಲ್ಲಿ ಮೂರು ತಾಲೂಕಿನ ಹಲವು ತಂಡಗಳು ಭಾಗವಹಿಸಿದ್ದವು. ಗೆಲುವಿಗಾಗಿ ಕೆಸರು ಗದ್ದೆಯಲ್ಲಿ ಕಸರತ್ತು ನಡೆಸಿದವು.

ಪುರುಷರು, ಮಹಿಳೆಯರು, ಮಕ್ಕಳು ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಪ್ರತ್ಯೇಕ ಸ್ಪರ್ಧೆ ಆಯೋಜಿಸಲಾಗಿತ್ತು. ಹಗ್ಗ ಜಗ್ಗಾಟ, ಕಬಡ್ಡಿ, ಉಪ್ಪುಮೂಟೆ, ಮೂರು ಕಾಲು ಓಟ, ಕೆಸರು ಗದ್ದೆ ಓಟ, ಕಂಬ ಸುತ್ತು ಓಟ, ಬಾಟಲಿಗೆ ಕೆಸರು ತುಂಬುವುದು(ಮಕ್ಕಳಿಗೆ), ಮಡಕೆ ಒಡೆಯುವುದು(ಮಹಿಳೆಯರಿಗೆ), ಮೊಸರು ಕುಡಿಕೆ(ಪುರುಷರಿಗೆ), ಮಲ್ನಾಡ್ ಕಂಬಳ, ನಾಟಿ ಮಾಡುವುದು(ಕಾಲೇಜು ವಿದ್ಯಾರ್ಥಿಗಳಿಗೆ) ಸ್ಪರ್ಧೆ ನಡೆಯಿತು.
ಪ್ರತಿಯೊಂದು ಆಟವೂ ಮೈ ನವಿರೇಳಿಸುವಂತಿತ್ತು. ಇಡೀ ದಿನ ಮಕ್ಕಳು ಕೆಸರಿನಲ್ಲಿ ಮಿಂದೆದ್ದರು. ಪುರುಷ ಹಾಗೂ ಮಹಿಳೆಯರಿಗೆ ಪ್ರತ್ಯೇಕವಾಗಿ ನಡೆಸಿದ ಹಗ್ಗಜಗ್ಗಾಟ ಸ್ಪರ್ಧೆ ರೋಮಾಂಚನಕಾರಿಯಾಗಿತ್ತು. ಮೊಸರುಕುಡಿಕೆ ಒಡೆಯಲು ಪಿರಮಿಡ್ ಆಕೃತಿಯಲ್ಲಿ ಒಬ್ಬರ ಮೇಲೊಬ್ಬರು ಹತ್ತುವ ಮೂಲಕ ಸ್ಪರ್ಧಿಗಳು ಹರಸಾಹಸಪಟ್ಟರು.
ಕರಾವಳಿಯಲ್ಲಿ ಕಂಬಳ ರೀತಿಯಲ್ಲೇ ಇಲ್ಲಿ ಇಬ್ಬರು ನೊಗ ಎಳೆದುಕೊಂಡು ಓಡುವಾಗ ಅದರ ಮೇಲೆ ಒಬ್ಬ ಕುಳಿತು ಸವಾರಿ ಮಾಡಿ ಗುರಿ ತಲುಪುವ ಸ್ಪರ್ಧೆ ವಿಭಿನ್ನವಾಗಿತ್ತು. ದಾರದಲ್ಲಿ ಇಬ್ಬರ ಒಂದೊಂದು ಕಾಲನ್ನು ಒಟ್ಟಿಗೆ ಕಟ್ಟಿಕೊಂಡು ಓಡಿ ಗುರಿ ತಲುಪುವ ಮೂರು ಕಾಲು ಓಟ, ಕಂಬ ಸುತ್ತು ಓಟ ಗಮನ ಸೆಳೆಯಿತು.
ಶಾಸಕ ಟಿ.ಡಿ.ರಾಜೇಗೌಡ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಸೇರಿ ಸಾವಿರಾರು ಮಂದಿ ಆಟೋಟ ಸ್ಪರ್ಧೆ ವೀಕ್ಷಿಸಿದರು. ಆಯೋಜಕರಾದ ಶರತ್ ಕಾರಂಗಿ, ಆತ್ಮಾನಂದ, ಸುಬ್ರಹ್ಮಣ್ಯ ಹರಿಹರಪುರ ಮುಂತಾದವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net