ಸಾಧುಗಳ ವೇಷದಲ್ಲಿ ಗ್ಯಾಂಗ್​ಸ್ಟರ್​ ಹತ್ಯೆ

kanwariyas
ಸಾಂದರ್ಭಿಕ ಚಿತ್ರ
Published on

ರಾಂಚಿ: 30ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ ಗ್ಯಾಂಗ್​ಸ್ಟರ್​ನನ್ನು ಸಾಧುಗಳ ವೇಷದಲ್ಲಿ ಬಂದು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಜಾರ್ಖಂಡ್​ನ ದುಮ್ಕಾ ಜಿಲ್ಲೆಯಲ್ಲಿ ನಡೆದಿದೆ.

ಹತ್ಯೆಯಾದವನನ್ನು ಅಮರನಾಥ್​ ಸಿಂಗ್​ ಎಂದು ಗುರುತಿಸಲಾಗಿದ್ದು, ಶ್ರಾವಣ ಮಾಸದ ಪ್ರಯುಕ್ತ ದುಮ್ಕಾದಲ್ಲಿರುವ ಬಸುಕಿನಾಥ್​ ದೇವಾಲಯಕ್ಕೆ ಕುಟುಂಬಸ್ಥರ ಜೊತೆ ಪೂಜೆ ಸಲ್ಲಿಸಲು ಬಂದಿದ್ದ ವೇಳೆ ಕೊಲೆ ಮಾಡಲಾಗಿದೆ.

ಘಟನೆಯ ಕುರಿತು ಪ್ರತಿಕ್ರಿಯಿಸಿರುವ ದುಮ್ಕಾ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಅಂಬರ್​ ಲಕ್ರಾ ಘಟನೆಯು ಬಸುಕಿನಾಥ್​ ದೇವಾಲಯ ಬಳಿ ಇರುವ ನಂದಿ ಚೌಖ್​ ಬಳಿ 12:45ರ ಸುಮಾರಿಗೆ ಸಂಭವಿಸಿದೆ. ಹತ್ಯೆಯಾದ ಅಮರನಾಥ್​ ವಿರುದ್ಧ 30ಕ್ಕೂ ಹೆಚ್ಚು ಕ್ರಿಮಿನಲ್​ ಪ್ರಕರಣಗಳ ವಿಚಾರಣೆ ಬಾಕಿಯಿದ್ದವು.

Gangster Amarnath
ಹತ್ಯೆಯಾದ ಗ್ಯಾಂಗ್​ಸ್ಟರ್​

ಇದು ಪೂರ್ವ ನಿಯೋಜಿತ ಕೊಲೆಯಾಗಿದ್ದು, ಹಳೇ ವೈಷಮ್ಯದ ವಿಚಾರವಾಗಿ ಹತ್ಯೆ ಮಾಡಿರಬಹುದು. ಘಟನೆ ನಡೆದ ಸ್ಥಳದ ಸುತ್ತ ಸಿಸಿಟಿವಿ ಕ್ಯಾಮರಾಗಳ ಪರಿಶೀಲಿಸಲಾಗುತ್ತಿದ್ದು, ಆರು ಕಾಟ್ರಿಡ್ಜ್​ಗಳನ್ನು ವಶಕ್ಕೆ ಪಡೆಯಲಾಗಿದೆ.

ಶ್ರಾವಣ ಮಾಸದ ಪ್ರಯುಕ್ತ ಬಸುಕಿನಾಥ್​ ದೇವಾಲಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾಧು ಸಂತರು ಆಗಮಿಸುತ್ತಾರೆ. ಇದರ ಪ್ರಯೋಜನ ಪಡೆದ ಆರೋಪಿಗಳು ಅವರಂತೆ ವೇಷ ತೊಟ್ಟು ಕೃತ್ಯ ಎಸಗಿದ್ದಾರೆ. ತನಿಖೆ ಪ್ರಗತಿಯಲ್ಲಿದ್ದು ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸಲಾಗುವುದು ಎಂದು ದುಮ್ಕಾ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಅಂಬರ್​ ಲಕ್ರಾ ತಿಳಿಸಿದ್ಧಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net