

ಶಿವಮೊಗ್ಗ: ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ಕರಾಳ ದಿನಾಚರಣೆ ಅಂಗವಾಗಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರೈತರು ಬುಧವಾರ ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ವರ್ಷದಿಂದ ವರ್ಷಕ್ಕೆ ರೈತರ ಸಮಸ್ಯೆಗಳು ಹೆಚ್ಚಾಗುತ್ತಿವೆ. ಸರ್ಕಾರ ನೀಡಿದ ಭರವಸೆಗಳನ್ನು ಈಡೇರಿಸುತ್ತಿಲ್ಲ. ಡಾ. ಸ್ವಾಮಿನಾಥನ್ ವರದಿ ಅನುಷ್ಠಾನಕ್ಕೆ ಯಾವ ಸರ್ಕಾರಗಳೂ ಆಸಕ್ತಿ ತೋರಿಲ್ಲ. ಸರ್ಕಾರ ರೂಪಿಸುವ ಬೆಂಬಲ ಬೆಲೆಗೆ ಯಾವುದೇ ಮಾನದಂಡ ಇಲ್ಲದಂತಾಗಿದೆ ಎಂದು ದೂರಿದರು.
ಕೇಂದ್ರ ಸರ್ಕಾರ ರೈತರಿಗೆ ಸ್ಪಂದಿಸುತ್ತಿಲ್ಲ. 10 ವರ್ಷಗಳ ಹಿಂದೆಯೇ ಬಿಜೆಪಿ ರೈತರ ಸಾಲ ಮನ್ನಾ ಹಾಗೂ ಡಾ. ಸ್ವಾಮಿನಾಥನ್ ವರದಿ ಜಾರಿ ಭರವಸೆ ನೀಡಿತ್ತು. ಅದಿನ್ನೂ ಕಾರ್ಯರೂಪಕ್ಕೆ ಬಂದಿಲ್ಲ. ಕೃಷಿಯ ಉತ್ಪಾದನಾ ವೆಚ್ಚ ಪ್ರತಿ ವರ್ಷ ಹೆಚ್ಚುತ್ತಲೇ ಇದೆ. ಯಾವ ಸರ್ಕಾರಗಳೂ ರೈತರ ನೆರವಿಗೆ ಮುಂದಾಗಿಲ್ಲ ಎಂದು ಆರೋಪಿಸಿದರು.
ವರ್ಷದಿಂದ ವರ್ಷಕ್ಕೆ ರೈತರ ಸಾಲ ಹೆಚ್ಚುತ್ತಿದೆ. ವಿದ್ಯುತ್ ಪೂರೈಕೆ ಖಾಸಗೀಕರಣದ ಆತಂಕ ರೈತ ಸಮೂಹವನ್ನು ಕಾಡುತ್ತಿದೆ. ಪಂಪ್‌ಸೆಟ್‌ಗಳಿಗೆ ಆಧಾರ್ ಲಿಂಕ್ ಮಾಡುವ ನಿರ್ಧಾರವನ್ನು ಸರ್ಕಾರ ಕೈ ಬಿಡಬೇಕು. ಕನಿಷ್ಠ ಬೆಂಬಲ ಬೆಲೆಗೆ ಕಾನೂನಿನ ಚೌಕಟ್ಟು ರೂಪಿಸಬೇಕು ಎಂದು ಒತ್ತಾಯಿಸಿದರು.
ಕಂದಾಯ ಇಲಾಖೆಯಲ್ಲಿ ಅಧಿಕಾರಿಗಳೇ ಸರಿಪಡಿಸಬಹುದಾದ ಸಣ್ಣ ಪುಟ್ಟ ತಿದ್ದುಪಡಿಗಳಿಗೆ ತಿಂಗಳುಗಟ್ಟಲೇ ಜನಸಾಮಾನ್ಯರನ್ನು ಅಲೆಸಲಾಗುತ್ತದೆ. ಎರಡು ರೂ. ವೆಚ್ಚದಲ್ಲಿ ನೀಡಬಹುದಾದ ಪಹಣಿಗೆ 25 ರೂ. ಪಡೆಯಲಾಗುತ್ತಿದೆ. ಸಾಲ ನೀಡುವ ಸಂದರ್ಭ ರೈತರನ್ನು ಸಿಬಿಲ್ ವ್ಯಾಪ್ತಿಯಲ್ಲಿ ಪರಿಗಣಿಸಲಾಗುತ್ತಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಜಿಂದಾಲ್ ಕಂಪನಿಗೆ ಅತ್ಯಂತ ಕಡಿಮೆ ಬೆಲೆಯಲ್ಲಿ ಭೂಮಿ ನೀಡಲು ಮುಂದಾಗಿರುವ ರಾಜ್ಯ ಸರ್ಕಾರ ತನ್ನ ನಿರ್ಧಾರದಿಂದ ಹಿಂದಕ್ಕೆ ಸರಿಯಬೇಕು. ವಿದ್ಯುತ್ ವಲಯವನ್ನು ಖಾಸಗೀಕರಣ ಮಾಡುವ ನಿರ್ಧಾರ ಬಿಡಬೇಕು. ಅತಿವೃಷ್ಟಿಯಿಂದ ಬೆಳೆ ಕಳೆದುಕೊಂಡ ಎಲ್ಲ ರೈತರಿಗೂ ಕೂಡಲೇ ಪರಿಹಾರ ನೀಡಬೇಕು. ಬಗರ್‌ಹುಕುಂ ಸಾಗುವಳಿದಾರರನ್ನು ಒಕ್ಕಲೆಬ್ಬಿಸದೆ ಹಕ್ಕುಪತ್ರ ನೀಡಬೇಕು. ರೈತರಿಂದ ಬಲವಂತದ ಸಾಲ ವಸೂಲಾತಿ ನಿಲ್ಲಿಸಬೇಕು. ಶರಾವತಿ ನೀರನ್ನು ಬೆಂಗಳೂರಿಗೆ ಕೊಂಡೊಯ್ಯುವ ನಿರ್ಧಾರ ಕೈಬಿಡಬೇಕು ಎಂದು ಆಗ್ರಹಿಸಿದರು.
ರೈತ ಸಂಘದ ರಾಜ್ಯಾಧ್ಯಕ್ಷ ಎಚ್.ಆರ್.ಬಸವರಾಜಪ್ಪ, ಜಿಲ್ಲಾಧ್ಯಕ್ಷ ಕೆ.ರಾಘವೇಂದ್ರ, ರಾಜ್ಯ ಉಪಾಧ್ಯಕ್ಷ ಟಿ.ಎಂ.ಚಂದ್ರಪ್ಪ, ಭದ್ರಾವತಿ ತಾಲೂಕು ಅಧ್ಯಕ್ಷ ಜಿ.ಎನ್.ಪಂಚಾಕ್ಷರಿ, ಪ್ರಧಾನ ಕಾರ್ಯದರ್ಶಿ ಹನುಮಂತಪ್ಪ, ಪ್ರಮುಖರಾದ ಜ್ಞಾನೇಶ್, ಸಿ.ಚಂದ್ರಪ್ಪ, ಕಸಟ್ಟಿ ರುದ್ರೇಶ್, ಇ.ಬಿ.ಜಗದೀಶ್ ಇತರರಿದ್ದರು.