

ಬೇಲೂರು: ತ್ರಿವಿಧ ದಾಸೋಹಿ ಡಾ.ಶ್ರೀ ಶಿವಕುಮಾರ ಸ್ವಾಮೀಜಿ ಅವರ 118ನೇ ಜನ್ಮದಿನದ ಅಂಗವಾಗಿ ತಾಲೂಕು ವೀರಶೈವ ಸಂಘ, ಪುಷ್ಪಗಿರಿ ಗ್ರಾಮೀಣಾಭಿವೃದ್ಧಿ ಮಹಿಳಾ ಸ್ವಸಹಾಯ ಸಂಘ ಹಾಗೂ ಡಾ.ಶ್ರೀ ಶಿವಕುಮಾರ ಸ್ವಾಮೀಜಿ ಪ್ರತಿಮೆ ನಿರ್ಮಾಣ ಸಮಿತಿಯಿಂದ ಅರೇಹಳ್ಳಿಯ ಡಾ.ಶ್ರೀ ಶಿವಕುಮಾರ ಸ್ವಾಮೀಜಿ ವೃತ್ತದಲ್ಲಿ ಸ್ವಾಮೀಜಿ ಅವರ ಭಾವಚಿತ್ರಕ್ಕೆ ಬುಧವಾರ ಪುಷ್ಪನಮನದ ಮೂಲಕ ಪೂಜೆ ಸಲ್ಲಿಸಲಾಯಿತು.
ವೀರಶೈವ ಸಂಘದ ಅರೇಹಳ್ಳಿ ಹೋಬಳಿ ಅಧ್ಯಕ್ಷ ತೇಜ್‌ಪಾಲ್ ಮಾತನಾಡಿ, ಯಾವುದೇ ಜಾತಿ,ಮತ, ಧರ್ಮ ಭೇದವಿಲ್ಲದೆ ಸರ್ವರಿಗೂ ತ್ರಿವಿಧ ದಾಸೋಹದ ಮೂಲಕ ಬದುಕು ಕಟ್ಟಿಕೊಟ್ಟವರು ಡಾ.ಶ್ರೀ ಶಿವಕುಮಾರ ಸ್ವಾಮೀಜಿ ಅವರು. ಸಿದ್ಧಗಂಗೆಯಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳು ಇಂದು ಪ್ರಪಂಚಾದ್ಯಂತ ಇರುವುದನ್ನು ಕಾಣಬಹುದಾಗಿದೆ. ಸ್ವಾಮೀಜಿ ಅವರ ಆದರ್ಶ ಬದುಕು ಮತ್ತು ಅವರು ನೀಡಿದ ಸಂದೇಶಗಳು ನಮ್ಮ ಮುಂದಿನ ಪೀಳಿಗೆಗೆ ಬೆಳಕಾಗಿದೆ. ಈಗಾಗಲೇ ಅರೇಹಳ್ಳಿಯಲ್ಲಿ ಡಾ.ಶ್ರೀ ಶಿವಕುಮಾರ ಸ್ವಾಮೀಜಿ ಅವರ ಹೆಸರಿನಲ್ಲಿ ವೃತ್ತ ನಿರ್ಮಿಸಿದ್ದು, ಮುಂದಿನ ದಿನಗಳಲ್ಲಿ ಶಿವಕುಮಾರ ಸ್ವಾಮೀಜಿ ಅವರ ಪ್ರತಿಮೆ ಪ್ರತಿಷ್ಠಾಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಪುಷ್ಪಗಿರಿ ಗ್ರಾಮೀಣ ಅಭಿವೃದ್ಧಿ ಮಹಿಳಾ ಸ್ವಸಹಾಯ ಸಂಘದ ಪ್ರತಿನಿಧಿ ಗೀತಾ ಮಾತನಾಡಿ, ರಾಜ್ಯದ ಮಠ ಪರಂಪರೆಯಲ್ಲಿ ಸಿದ್ಧಗಂಗಾ ಮಠ ನೀಡಿದ ಕೊಡುಗೆ ಅಪಾರವಾಗಿದೆ. ಜಾತಿ, ಧರ್ಮ ಮೀರಿದ ತತ್ವಗಳ ಮೂಲಕ ಮಾನವ ಧರ್ಮಕ್ಕೆ ವಿಶೇಷವಾಗಿ ಸಕಲ ಜೀವಾತ್ಮರಿಗೆ ಲೇಸನ್ನು ಬಯಸಿದ ಬಸವ ತತ್ವದಡಿಯಲ್ಲಿ ಸಿದ್ಧಗಂಗಾ ಪೂಜ್ಯರು ತಮ್ಮ ಬದುಕನ್ನು ಅರ್ಪಿಸಿ, ಆಧುನಿಕ ಬಸವಣ್ಣರಾಗಿದ್ದಾರೆ. ಕಾಯಕ ಮತ್ತು ದಾಸೋಹಕ್ಕೆ ಪ್ರಾಶಸ್ತ್ಯ ನೀಡಿದ ಸುಕ್ಷೇತ್ರವಾಗಿದೆ. ಸ್ವಾಮೀಜಿ ಅವರು ನೀಡಿದ ಸಂದೇಶಗಳನ್ನು ಎಲ್ಲರೂ ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡಾಗ ಮಾತ್ರ ಇಂತಹ ಜಯಂತಿಗೆ ಅರ್ಥ ಬರುತ್ತದೆ ಎಂದರು.
ತಾಲೂಕು ವೀರಶೈವ ಲಿಂಗಾಯತ ಮಹಾಸಭಾ ನಿರ್ದೇಶಕರಾದ ಪ್ರಕಾಶ್, ಪ್ರಸಾದ್, ಮಹಿಳಾ ಘಟಕದ ಅಧ್ಯಕ್ಷೆ ವಿಂಪು, ಪುಷ್ಪಗಿರಿ ಗ್ರಾಮೀಣ ಅಭಿವೃದ್ಧಿ ಮಹಿಳಾ ಸ್ವ ಸಸಾಯ ಸಂಘದ ಸದಸ್ಯರಾದ ಮಂಜುಳಾ, ರತ್ನ, ಜ್ಯೋತಿ ಹಾಗೂ ಮುಖಂಡರಾದ ನಟರಾಜ್, ಚಂದ್ರು, ಗಂಗಾಧರ್, ಸಂತೋಷ್, ತ್ಯಾಗರಾಜ್, ಗಂಗಣ್ಣ ಮುಜುಬತ್ ರೆಹಮಾನ್ ಸೇರಿದಂತೆ ಇತರರಿದ್ದರು.