ಸ್ಕ್ರೀನಿಂಗ್ ಕಮಿಟಿಯಲ್ಲಿ ಪರಂಗೆ ಸ್ಥಾನ; ಹೈಕಮಾಂಡ್ ಟಿಕೆಟ್ ಆಕಾಂಕ್ಷಿಗಳ ದುಂಬಾಲು

7_Krt_ph_01
Published on

ತುಮಕೂರು: ಕಾಂಗ್ರೆಸ್ ಹಿರಿಯ ಮುಖಂಡ ಡಾ.ಜಿ.ಪರಮೇಶ್ವರ ಕಾಂಗ್ರೆಸ್ ಕೇಂದ್ರ ಚುನಾವಣಾ ಸಮಿತಿಯಲ್ಲಿ ಸ್ಥಾನ ಪಡೆದಿದ್ದು, ತುಮಕೂರಿನ ಸಿದ್ಧಾರ್ಥ ನಗರದ ಅವರ ನಿವಾಸಕ್ಕೀಗ ಟಿಕೆಟ್ ಆಕಾಂಕ್ಷಿಗಳ ದಂಡು ಬರಲಾರಂಭಿಸಲಿದೆ.

ಎಐಸಿಸಿ ಸಂಘಟನೆ ಪ್ರಧಾನ ಕಾರ್ಯದರ್ಶಿ ಫೆ.6ರಂದು ಪ್ರಕಟಿಸಿರುವ ಸ್ಕ್ರೀನಿಂಗ್ ಕಮಿಟಿಯಲ್ಲಿ ರಾಜ್ಯದಿಂದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ, ಬಿ.ಕೆ.ಹರಿಪ್ರಸಾದ್, ಎಂ.ಬಿ.ಪಾಟೀಲ್ ಹಾಗೂ ಡಾ.ಜಿ.ಪರಮೇಶ್ವರಗೆ ಸ್ಥಾನ ನೀಡಲಾಗಿದೆ.

ಡಾ.ಜಿ.ಪರಮೇಶ್ವರ್ ಕಮಿಟಿಯಲ್ಲಿ ಸ್ಥಾನ ಪಡೆದಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಮಟ್ಟಿಗಂತೂ ಅವರ ನೇತೃತ್ವದ ಏಕನಾಯಕತ್ವಕ್ಕೆ ಮನ್ನಣೆ ಸಿಗಲಿದೆ. 11 ಕ್ಷೇತ್ರಗಳಲ್ಲಿಯೂ ಅವರು ಸೂಚಿಸುವವರೇ ಟಿಕೆಟ್ ಪಡೆಯಲಿದ್ದಾರೆ.

ಅಡ್ಡಗಾಲು ಹಾಕಿದವರಿಗೆ ಆತಂಕ: 2013ರಲ್ಲಿ ಡಾ.ಜಿ.ಪರಮೇಶ್ವರ ಚುನಾವಣೆ ಸೋತ ಸಂದರ್ಭದಲ್ಲಿ ಅವರು ವಿಧಾನ ಪರಿಷತ್ ಸದಸ್ಯರಾಗಲು ಅಂದು ಜಿಲ್ಲೆಯಲ್ಲಿ ಅಧಿಕಾರದಲ್ಲಿದ್ದ ಸಚಿವರು, ಶಾಸಕರು ಅಡ್ಡಗಾಲು ಹಾಕಿ ಎಐಸಿಸಿಗೆ ಪತ್ರ ಬರೆದಿದ್ದ ಬಗ್ಗೆ ಅವರ ಆಪ್ತರ ಬಳಿ ಸಾಕಷ್ಟು ಸಲ ಹೇಳಿಕೊಂಡಿದ್ದಾರೆ.

ಈಗ ಕಾಲಚಕ್ರ ಉರುಳಿದ್ದು ಅಂದು ಅಡ್ಡಗಾಲು ಹಾಕಿದ್ದವರೆಲ್ಲರೂ ಈಗ ಟಿಕೆಟ್‌ಗಾಗಿ ಪರಮೇಶ್ವರಗೆ ದುಂಬಾಲು ಬೀಳಬೇಕಾದ ಸ್ಥಿತಿ ಬಂದೊದಗಿದೆ. ಪಕ್ಷನಿಷ್ಠ ಪರಮೇಶ್ವರ್ ಭವಿಷ್ಯದ ದೃಷ್ಟಿಯಿಂದ ಯುವಕರಿಗೆ ಟಿಕೆಟ್ ಕೊಡಿಸುತ್ತಾರೊ ಅಥವಾ ಹಳೆಯ ಸ್ನೇಹಿತರಿಗೆ ಕೊನೆಯ ಅವಕಾಶಗಳನ್ನು ನೀಡುತ್ತಾರೋ ಕಾದುನೋಡಬೇಕಾಗಿದೆ.

ಕೊರಟಗೆರೆ ಕ್ಷೇತ್ರದ ಅಭಿವೃದ್ಧಿಯ ಹೆಜ್ಜೆ ಗುರುತು ಪುಸ್ತಕವನ್ನು ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಬಿಡುಗಡೆ ಮಾಡಿದರು.

ನನ್ನ 35ವರ್ಷದ ರಾಜಕೀಯ ಜೀವನದಲ್ಲಿ ನಿರಂತರವಾಗಿ ಜನರೊಂದಿಗೇ ಇದ್ದೇನೆ. ಆದರೂ ನನ್ನ ವಿರೋಧಿಗಳು ನನ್ನನ್ನು ಸಾಮಾನ್ಯ ಜನರಿಂದ ದೂರ, ವೈಟ್ ಕಾಲರ್, ಯಾರೊಂದಿಗೂ ಬೆರೆಯುವುದಿಲ್ಲ ಎನ್ನುವ ಹಲವು ಸಲ್ಲದ ಆರೋಪಗಳನ್ನು ಮಾಡುತ್ತಾರೆ. | ಡಾ.ಜಿ.ಪರಮೇಶ್ವರ, ಶಾಸಕ

ಕೊರಟಗೆರೆ ಅಭಿವೃದ್ಧಿಯ ಹೆಜ್ಜೆ ಗುರುತು ಅನಾವರಣ

ಕೊರಟಗೆರೆ: ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಯ ಹೆಜ್ಜೆ ಗುರುತು ಪುಸ್ತಕವನ್ನು ಮಂಗಳವಾರ ಪಟ್ಟಣದ ಪ್ರವಾಸಿ ಮಂದಿರದ ಬಳಿಯ ಲಕ್ಷ್ಮಿನರಸಿಂಹಸ್ವಾಮಿ ಸಮುದಾಯ ಭವನದಲ್ಲಿ ಶಾಸಕ ಡಾ.ಜಿ.ಪರಮೇಶ್ವರ ಬಿಡುಗಡೆ ಮಾಡಿದರು.

ಜನರ ನಿರೀಕ್ಷೆಯಂತೆ ಕೆಲಸ ಮಾಡಿದ್ದೇನೆ. ಕ್ಷೇತ್ರದ ಸಮಗ್ರ ಅಭಿವೃದ್ಧಿಯ ಒಟ್ಟು 4080 ವಿವಿಧ ಕಾಮಗಾರಿಗೆ 2573ಕೋಟಿ ರೂಪಾಯಿ ವಿಶೇಷ ಅನುದಾನ ತಂದಿದ್ದೇನೆ. 2018ರಿಂದ 2023ರ ಅವಧಿಯ ಅಭಿವೃದ್ಧಿಯ ಅಂಕಿ-ಅಂಶದ ದಾಖಲೆಯ ಪುಸ್ತಕವನ್ನು ಮತದಾರರಿಗೆ ನೀಡುತ್ತೇನೆ ಎಂದರು.

ಮತದಾರರಿಗೆ ನಾನು ಈ ಅವಧಿಯಲ್ಲಿ ಮಾಡಿರುವಂತಹ ಎಲ್ಲ ಕೆಲಸಗಳು ನೆನಪಿಗೆ ಬರಲಿದೆ ಎಂದು ಶಾಸಕ ಡಾ.ಜಿ.ಪರಮೇಶ್ವರ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕ್ಷೇತ್ರಕ್ಕಷ್ಟೇ ಅಲ್ಲ, ಜಿಲ್ಲಾದ್ಯಂತ ಶಿಕ್ಷಣ, ಆರೋಗ್ಯ, ಉದ್ಯೋಗ, ನೀರಾವರಿ, ಮೂಲಸೌಲಭ್ಯ ಸೇರಿ ಎಲ್ಲ ಕ್ಷೇತ್ರಗಳಿಗೂ ಆದ್ಯತೆ ನೀಡಲಾಗಿದೆ ಎಂದರು.

ಸರ್ಕಾರಕ್ಕೆ ಛಿಮಾರಿ: ರಾಜ್ಯಾದ್ಯಂತ ಬಹುತೇಕ ಕುಡಿಯುವ ನೀರಿನ ಘಟಕಗಳು ಕೆಟ್ಟಿವೆ. ದುರಸ್ತಿ ಮಾಡಿಸಲು ಬಿಜೆಪಿ ಸರ್ಕಾರದಲ್ಲಿ ಹಣವಿಲ್ಲ ಎಂದು ಹೇಳುತ್ತಿದ್ದಾರೆ. ಆದರೆ ಮನೆ ಮನೆಗೆ ನೀರು ಪೂರೈಸುತ್ತೇವೆ ಎನ್ನುವ ಜಲಜೀವನ್ ಮಿಷನ್ ಅನುಷ್ಠಾನ ಯಾವ ರೀತಿ ಮಾಡುತ್ತಾರೆ ಎಂದು ಪರಮೇಶ್ವರ ಪ್ರಶ್ನಿಸಿದರು.

ಪರಮ್ ಕಾಡುತ್ತಿರುವ 2013ರ ಸೋಲು!: ಡಾ.ಜಿ.ಪರಮೇಶ್ವರ ಅವರಿಗೆ ಕೊರಟಗೆರೆ ಕ್ಷೇತ್ರದಲ್ಲಿ 2013ರಲ್ಲಿ ಕಂಡ ಸೋಲು ಪದೇಪದೆ ಕಾಡಲಾರಂಭಿಸಿದೆ.

ರಾಜ್ಯದಲ್ಲಿ ಪ್ರಭಾವಿ ನಾಯಕನಾಗಿ ಸಾಕಷ್ಟು ಜನರಿಗೆ ಟಿಕೆಟ್ ಕೊಡಿಸುವ ಸಾಮರ್ಥ್ಯವಿದ್ದರೂ ಅದ್ಯಾವುದಕ್ಕೂ ತಲೆ ಕಡೆಸಿಕೊಳ್ಳದೆ ಕೊರಟಗೆರೆ ಕ್ಷೇತ್ರದಲ್ಲಿ ಗೆಲ್ಲಲು ಸಂಪೂರ್ಣ ಸಮಯ ಮೀಸಲಿಟ್ಟಿದ್ದಾರೆ. ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ನಡುವೆ ನಡೆಯುತ್ತಿರುವ ಆಂತರಿಕ ಸಂಘರ್ಷದ ಅರಿವಿರುವ ಪರಮೇಶ್ವರ ಮತ್ತೊಮ್ಮೆ ಗೆದ್ದು ಅವಕಾಶ ಸಿಕ್ಕರೆ ಸರ್ಕಾರದಲ್ಲಿ ಮಹತ್ವದ ಹುದ್ದೆ ಪಡೆಯುವ ಕನಸು ಕಟ್ಟಿಕೊಂಡು ಕ್ಷೇತ್ರದೆಲ್ಲೆಡೆ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಓಡಾಡಲಾರಂಭಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net