ಡಾ.ಮಂಜುನಾಥ್ ಸ್ಪರ್ಧೆ ಬಗ್ಗೆ ಭಯವಿಲ್ಲ; ಸಚಿವರ ಅಭಿಪ್ರಾಯ

DR Manjunath
Published on

ಬೆಂಗಳೂರು: ಬೆಂಗಳೂರು ಗ್ರಾಮಾಂತರ ಕ್ಷೇತ್ರಕ್ಕೆ ಡಾ.ಮಂಜುನಾಥ್ ಇಲ್ಲವೇ ಯಾರನ್ನೇ ಕಣಕ್ಕಿಳಿಸಿದರೂ ಭಯವಿಲ್ಲ. ರಾಜಕೀಯ ಬಂದಾಗ ಹೋರಾಟ ಇದ್ದೇ ಇರುತ್ತದೆ ಎಂದು ಕಾಂಗ್ರೆಸ್ ತನ್ನ ನಿಲುವು ಹೊರಹಾಕಿದೆ.
ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಿಂದ ಬಿಜೆಪಿ- ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಹೃದ್ರೋಗ ತಜ್ಞ ಡಾ. ಮಂಜುನಾಥ್ ಅವರನ್ನು ಕಣಕ್ಕಿಳಿಸುವ ಪ್ರಯತ್ನ, ಚರ್ಚೆ ನಡೆದಿರುವ ಸಂದರ್ಭದಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಈ ಅಭಿಪ್ರಾಯ ಹೊರಹಾಕಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಾ. ಮಂಜುನಾಥ್ ಅವರ ಬಗ್ಗೆ ಗೌರವ ಇದೆ. ವೃತ್ತಿಯಲ್ಲಿ ನಮ್ಮ ಸರ್ಕಾರ ಕೂಡ ಅವರಿಗೆ ಸಹಕಾರ ನೀಡಿದೆ. ಈ ಹಿಂದೆ ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಮಂಜುನಾಥ್‌ರನ್ನ ವೃತ್ತಿಯಲ್ಲಿ ಮುಂದುವರೆಸಿದ್ದರು. ಈಗಲೂ ಮತ್ತೆ ನಮ್ಮ ಸರ್ಕಾರ ಬಂದಮೇಲೆಯೂ ಅವರನ್ನ ಮುಂದುವರೆಸಲಾಗಿತ್ತು. ಅವರಿಗೆ ಎಲ್ಲಾ ಗೌರವವನ್ನೂ ಕೊಟ್ಟಿದ್ದೇವೆ. ಆದರೆ, ರಾಜಕೀಯ ಅಂತಾ ಬಂದಾಗ ನೋಡೋಣ ಎಂದರು.
ಸಚಿವರ ಸ್ಪರ್ಧೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಹೈಕಮಾಂಡ್ ಸೂಚಿಸಿದರೆ ಸಚಿವರು, ಶಾಸಕರು ಯಾರೇ ಆದರೂ ಸ್ಪರ್ಧಿಸಲು ಸಿದ್ಧವಾಗಿರಬೇಕಾಗುತ್ತದೆ. ವರಿಷ್ಠರು ಯಾವುದೇ ತೀರ್ಮಾನ ತೆಗೆದುಕೊಂಡರೂ ನಾವು ರೆಡಿಯಾಗಿರಬೇಕಾಗುತ್ತೆ ಎಂದು ಹೇಳಿದರು.
ನಮ್ಮ ತಯಾರಿಯನ್ನು ನಾವು ಮಾಡುತ್ತಿದ್ದೇವೆ. ಇನ್ನೂ ಎರಡು, ಮೂರು ಹಂತಗಳಲ್ಲಿ ಪಟ್ಟಿ ಪ್ರಕಟವಾಗಲಿದೆ. ಕರ್ನಾಟಕದಲ್ಲಿ ಹೆಚ್ಚು ಸ್ಥಾನಗಳು ಬರಬೇಕು ಎಂಬ ಗುರಿ ಇದೆ. ಜನರ ಜತೆ ಯಾರು ಒಳ್ಳೆಯ ಹೆಸರು ತೆಗೆದುಕೊಂಡಿದ್ದಾರೋ ಅವರೇ ಸ್ಪರ್ಧಿಸಬೇಕಾಗುತ್ತೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net