

ಬೆಂಗಳೂರು: ನೇತ್ರ ತಜ್ಞ ಡಾ. ಎಂ.ಸಿ. ಮೋದಿ ಸ್ಥಾಪಿಸಿದ್ದ ಡಾ.ಎಂ.ಸಿ. ಮೋದಿ ಪಬ್ಲಿಕ್ ಟ್ರಸ್ಟ್‌ನಲ್ಲಿ 9 ಲಕ್ಷ ರೂ. ದುರ್ಬಳಕೆ ಸಂಬಂಧ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಹಾಲಕ್ಷ್ಮಿಪುರದ ಡಾ. ಎಂ.ಸಿ. ಮೋದಿ ಕಣ್ಣಿನ ಆಸ್ಪತ್ರೆಯ ಆಡಳಿತಾಧಿಕಾರಿ ಕಿಶೋರ್ ಪಿ. ಮಾನೆ, ನ್ಯಾಯಾಲಯದಲ್ಲಿ ಪಿಸಿಆರ್ ದಾಖಲಿಸಿದ್ದರು. ಕೋರ್ಟ್ ಆದೇಶದಂತೆ ಸುಭಾಷ್ ಚಂದ್ರ ಮೋದಿ, ಮಲ್ಲಿಕಾರ್ಜುನ, ಪ್ರಿಯದರ್ಶಿನಿ ಮತ್ತು ಾಣಿಕುಮಾರ್ ಎಂಬುವರ ವಿರುದ್ಧ ದೂರು ಸಲ್ಲಿಸಿದ್ದಾರೆ. ಈಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಡಾ. ಎಂ.ಸಿ. ಮೋದಿ ಅವರು ಬಡ ಜನರ ಸೇವೆಗಾಗಿ ಡಾ. ಎಂ.ಸಿ.ಮೋದಿ ಪಬ್ಲಿಕ್ ಟ್ರಸ್ಟ್ ಸ್ಥಾಪಿಸಿ ಉಚಿತ ಕಣ್ಣಿನ ಚಿಕಿತ್ಸೆ ಕೊಡಿಸುತ್ತಿದ್ದರು. ಇವರು ತನ್ನ ಪುತ್ರ ಡಾ. ಅಮರನಾಥ ಮೋದಿ, ಟ್ರಸ್ಟ್‌ನ ವಾರಸುದಾರರಾಗಿ ನೇಮಿಸಿದ್ದರು. ಡಾ. ಅಮರನಾಥ ಮೋದಿ, ತನಗೆ ಮಕ್ಕಳು ಇಲ್ಲದ ಕಾರಣಕ್ಕೆ ಟ್ರಸ್ಟ್‌ನ ಟ್ರಸ್ಟಿಗಳನ್ನು ನೇಮಕ ಮಾಡುವ ಅಧಿಕಾರವನ್ನು ಬೆಂಗಳೂರು ಸಿಟಿ ಸಿವಿಲ್ ನ್ಯಾಯಾಲಯ ಮತ್ತು ಬೆಂಗಳೂರು ನಗರ ಡಿಸಿಗೆ ಒಪ್ಪಿಸಿದ್ದರು.
2014ರಲ್ಲಿ ಇವರು ಸಹ ಮರಣ ಹೊಂದಿದ್ದರು. ಇದಾದ ಮೇಲೆ ಆರೋಪಿತ ವ್ಯಕ್ತಿಗಳು ನಾವೇ ವಾರಸುದಾರರು ಎಂದು ಹೇಳಿಕೊಂಡು ಆಸ್ತಿ ಲಪಟಾಯಿಸಲು ಪ್ರಯತ್ನಿಸಿದರು. ಈ ಕುರಿತು ಪೊಲೀಸ್ ಠಾಣೆಗಳಲ್ಲಿ ದೂರುಗಳು ದಾಖಲಾಗಿವೆ. ಆದರೂ, 2023ರಲ್ಲಿ 9 ಲಕ್ಷ ರೂ. ಡ್ರಾ ಮಾಡಿಕೊಂಡು ಟ್ರಸ್ಟ್‌ಗೆ ವಂಚನೆ ಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ಬಗ್ಗೆ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.