

ಶಿವಮೊಗ್ಗ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನಿಂದ ಫೆಬ್ರವರಿ 6 ಮತ್ತು 7ರಂದು ಸಾಹಿತ್ಯ ಗ್ರಾಮದಲ್ಲಿ 19ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಏರ್ಪಡಿಸಲಾಗುತ್ತಿದ್ದು, ಸರ್ವಾಧ್ಯಕ್ಷರಾಗಿ ಹಿರಿಯ ಸಾಹಿತಿ ಡಾ. ಜೆ.ಕೆ.ರಮೇಶ್ ಅವರನ್ನು ಆಯ್ಕೆ ಮಾಡಲಾಗಿದೆ.
ಕಸಾಪ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದ್ದು, ಹಿರಿತನ, ಸಾಹಿತ್ಯ ಸಾಧನೆ, ಕಸಾಪ ಸಂಘಟನೆಗೆ ಅವರ ಸೇವೆ ಎಲ್ಲವನ್ನೂ ಅವಲೋಕಿಸಿ ಡಾ. ಜೆ.ಕೆ.ರಮೇಶ್ ಹೆಸರು ಅಂತಿಮಗೊಳಿಸಲಾಯಿತು ಎಂದು ಜಿಲ್ಲಾ ಕಸಾಪ ಅಧ್ಯಕ್ಷ ಡಿ. ಮಂಜುನಾಥ ತಿಳಿಸಿದ್ದಾರೆ.
ಸಮ್ಮೇಳನದಲ್ಲಿ ಏರ್ಪಡಿಸುವ ಗೋಷ್ಠಿಗಳು, ತಾಲೂಕು, ಹೋಬಳಿ ಸಮಿತಿಗಳು ತಮ್ಮ ವ್ಯಾಪ್ತಿಯ ಸಾಹಿತ್ಯ, ಸಾಂಸ್ಕೃತಿಕ ಪ್ರತಿಭೆಗಳ ಮಾಹಿತಿ ನೀಡಲು ಕೇಳಲಾಗಿತ್ತು. ಮಾಹಿತಿ ಕುರಿತು ಪರಿಶೀಲನೆ ಮಾಡಿ ಅವಕಾಶ ಕಲ್ಪಿಸುವ ಪ್ರಯತ್ನ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಸಮ್ಮೇಳನಕ್ಕೆ ನಾಲ್ಕು ಸಾವಿರ ಪ್ರತಿನಿಧಿಗಳ ನೋಂದಣಿ ಕಾರ್ಯ ಮಾಡಬೇಕು. ಪ್ರತಿನಿಧಿ ಶುಲ್ಕ ಎರಡು 200 ರೂ. ನಿಗದಿ ಮಾಡಲಾಗಿದ್ದು. ಹೋಬಳಿ, ತಾಲೂಕು, ಜಿಲ್ಲಾ ಸಮಿತಿ ಪದಾಧಿಕಾರಿಗಳು ಪ್ರತಿನಿಧಿ ನೋಂದಣಿಗೆ ಸಹಕರಿಸಲು ಕೋರಲಾಯಿತು. ಪ್ರತಿನಿಧಿಗಳಿಗೆ ಎರಡು ದಿನ ಊಟ, ತಿಂಡಿ, ಕಾಫಿ, ಟೀ ಜತೆಯಲ್ಲಿ ಉತ್ತಮ ಕಾರ್ಯಕ್ರಮ ವ್ಯವಸ್ಥೆ ಮಾಡಲಾಗುವುದು. ಸಾವಿರಾರು ಸಂಖ್ಯೆಯಲ್ಲಿರುವ ಕಸಾಪ ಸದಸ್ಯರು, ಅಭಿಮಾನಿಗಳು, ಕನ್ನಡದ ಮನಸ್ಸುಗಳನ್ನು ಸಂಪರ್ಕ ಮಾಡಿ ಪ್ರತಿ ನಿಧಿಗಳನ್ನು ನೋಂದಾಯಿಸಿಕೊಳ್ಳಲು ತೀರ್ಮಾನ ಮಾಡಲಾಯಿತು. ನೋಂದಣಿಗೆ ರಶೀದಿ, ಕರ ಪತ್ರ ವಿತರಿಸಲಾಯಿತು ಎಂದರು.
ಎಲ್ಲ ತಾಲೂಕುಗಳು ತಮ್ಮ ವ್ಯಾಪ್ತಿಗೆ ಬರುವ ದತ್ತಿ ಕಾರ್ಯಕ್ರಮ ಮಾಡುವುದು. ಕೆಲಸ ಮಾಡದ ನಿರ್ಲಕ್ಷೃ ಮಾಡುವ ಎಲ್ಲ ಸಮಿತಿಗಳನ್ನು ಪುನರ್ ರಚಿಸಲಾಗುವುದು ಎಂದು ಕಾರ್ಯಕಾರಿ ಸಮಿತಿ ತೀರ್ಮಾನಿಸಿದೆ. ವಿವಿಧ ತಾಲೂಕುಗಳಲ್ಲಿ ನಿರ್ಮಾಣ ಆಗುತ್ತಿರುವ ಪರಿಷತ್ತು ಭವನಗಳ ಪ್ರಗತಿ ಕುರಿತು ಚರ್ಚೆ ಮಾಡಲಾಯಿತು. ಮೂರು ವರ್ಷದ ಆಡಿಟ್ ವರದಿ, ಕಾರ್ಯಕ್ರಮ ವರದಿ ಕೇಳಲಾಗಿದೆ ಎಂದರು.