ಕನ್ನಡ ನಮ್ಮ ಹೃದಯದ ಭಾಷೆಯಾಗಲಿ

kdr kasapa
ಕಡೂರಿನ ಗಣಪತಿ ಪೆಂಡಾಲ್ ಆವರಣದಲ್ಲಿ ಏರ್ಪಡಿಸಿದ್ದ ತಾಲೂಕು 6ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಹಿರೇಮಗಳೂರು ಕಣ್ಣನ್ ಉದ್ಘಾಟಿಸಿದರು. ಕೆ.ಎಸ್.ಆನಂದ್, ಹೊಸೂರು ಪುಟ್ಟರಾಜು, ಭಂಡಾರಿ ಶ್ರೀನಿವಾಸ್, ಶರತ್ ಕೃಷ್ಣಮೂರ್ತಿ, ಸಿಂಗಟಗೆರೆ ಸಿದ್ದಪ್ಪ, ಸೂರಿ ಶ್ರೀನಿವಾಸ್ ಇತರರಿದ್ದರು.
Published on

ಕಡೂರು: ಮನಸ್ಸನ್ನು ಪ್ರುಲ್ಲಗೊಳಿಸಲು ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಮೊಬೈಲ್ ನಿಲ್ಲಿಸಿ ಪುಸ್ತಕವಾಣಿ ಆಲಿಸಬೇಕಿದೆ. ಸಾಹಿತ್ಯ ಬರವಣಿಗೆಗಳು ಮೆರವಣಿಗೆಗೆ ಸೀಮಿತವಾಗದೆ ನಿತ್ಯೋತ್ಸವವಾಗಬೇಕಿದೆ ಎಂದು ಕನ್ನಡದ ಪೂಜಾರಿ ಡಾ. ಹಿರೇಮಗಳೂರು ಕಣ್ಣನ್ ಹೇಳಿದರು.
ಪಟ್ಟಣದ ಗಣಪತಿ ಪೆಂಡಾಲ್ ಆವರಣದಲ್ಲಿ ಶನಿವಾರ ಕಸಾಪದಿಂದ ಏರ್ಪಡಿಸಿದ್ದ 6ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿ, ಕನ್ನಡ ನಮ್ಮ ಹೃದಯದ ಭಾಷೆಯಾಗಬೇಕು. ಕಡೂರು ನೆಲದಲ್ಲಿ ಅಸಂಖ್ಯಾತ ಐತಿಹಾಸಿಕ ಸ್ಮಾರಕಗಳಿವೆ. ಅವುಗಳ ರಕ್ಷಣೆಯಾಗಬೇಕು. ಕಡೂರು ನೆಲದ ಕವಿ ಲಕ್ಷ್ಮೀಶನ ದೇವನೂರಿನಲ್ಲಿರುವ ಲಕ್ಷ್ಮೀಕಾಂತ ದೇವಸ್ಥಾನದ ಜೀರ್ಣೋದ್ಧಾರ ಸಂಪೂರ್ಣವಾಗಬೇಕು ಎಂದರು.
ಕಡೂರಿನ ಡಾ. ವೆಂಕಟಲಕ್ಷ್ಮಮ್ಮ ಅವರ ಸ್ಮಾರಕ ಪೂರ್ಣಗೊಂಡು ಅವರ ಸಮಾಧಿಯ ರಕ್ಷಣೆಯೊಂದಿಗೆ ಪುನಶ್ಚೇತನಗೊಳಿಸಬೇಕಿದೆ. ಈ ಬಗ್ಗೆ ಶಾಸಕ ಕೆ.ಎಸ್.ಆನಂದ್ ಹೆಚ್ಚು ಒತ್ತು ನೀಡಬೇಕಿದೆ. ಸಾಹಿತ್ಯ ಮತ್ತು ಸಂಸ್ಕೃತಿ ಬಿಂಬಿಸುವ ಕಾರ್ಯಕ್ರಮಗಳು ಹೆಚ್ಚು ನಡೆಯಲು ಜನಪ್ರತಿನಿಧಿಗಳೂ ಪ್ರೋತ್ಸಾಹ ನೀಡಬೇಕು ಎಂದು ಹೇಳಿದರು.
ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ಮಾತನಾಡಿದ ಶಾಸಕ ಕೆ.ಎಸ್.ಆನಂದ್, ಕನ್ನಡ ಭಾಷೆಯನ್ನು ಉಳಿಸುವ ನಿಟ್ಟಿನಲ್ಲಿ ಸಾಹಿತ್ಯ ಪರಿಷತ್ ಕಾರ್ಯ ಶ್ಲಾಘನೀಯ. ಇಂಥ ಸಮ್ಮೇಳನಗಳಿಂದ ನಮ್ಮ ನೆಲದ ಹಿರಿಮೆ ಮತ್ತು ವಿಶೇಷ ಎಲ್ಲರಿಗೂ ತಿಳಿದಂತಾಗುತ್ತದೆ. ತಾಲೂಕಿನ ಅಳಿವಿನಂಚಿನಲ್ಲಿರುವ ಸ್ಮಾರಕಗಳ ರಕ್ಷಣೆಗೆ ಗಮನ ಹರಿಸುತ್ತೇನೆ. ಕಸಾಪ ಕಾರ್ಯಗಳಲ್ಲಿ ಸದಾ ಜತೆಗಿದ್ದು ನಾಡಿನ ಸೇವೆಯಲ್ಲಿ ತೊಡಗಿಸಿಕೊಳ್ಳುತ್ತೇನೆ ಎಂದರು.
ನಿರೂಪಕಿ ಅಪರ್ಣಾ ತಾಲೂಕಿನ ಉಪ್ಪಿನಹಳ್ಳಿ ಗ್ರಾಮದವರೆಂಬುದು ನಿಧನದ ಬಳಿಕ ಎಲ್ಲರಿಗೂ ತಿಳಿದಿರುವುದು ದುಃಖದ ಸಂಗತಿ. ಇಂಥ ಕಲಾವಿದೆಯನ್ನು ಕಳೆದುಕೊಂಡಿರುವುದು ನಾಡಿಗೆ ಮತ್ತು ಸಾಹಿತ್ಯ ಕ್ಷೇತ್ರಕ್ಕೆ ತುಂಬಲಾರದ ನಷ್ಟ ಎಂದು ಸಂತಾಪ ವ್ಯಕ್ತಪಡಿಸಿದರು.
ಪಟ್ಟಣದ ವೆಂಕಟೇಶ್ವರ ದೇವಾಲಯದಿಂದ ಅಲಂಕೃತ ಸಾರೋಟಿನಲ್ಲಿ ಸಮ್ಮೇಳನಾಧ್ಯಕ್ಷರನ್ನು ಮೆರವಣಿಗೆ ಮೂಲಕ ವೇದಿಕೆಯ ಮಂಟಪದವರೆಗೆ ಕರೆತರಲಾಯಿತು. ವಿವಿಧ ಶಾಲಾ ಮಕ್ಕಳ ತಂಡ ಹಾಗೂ ಕಲಾತಂಡಗಳು ಭಾಗವಹಿಸಿದ್ದವು. ಎಂ.ಆರ್.ಪ್ರಕಾಶ್, ರಾಘವೇಂದ್ರ, ಬಿ.ಪ್ರಕಾಶ್, ಎಚ್.ಎಂ.ಲೋಕೇಶ್, ಎನ್.ಎಚ್.ನಂಜುಂಡಸ್ವಾಮಿ, ಸವಿತಾ ಸತ್ಯನಾರಾಯಣ, ಲತಾ ರಾಜಶೇಖರ್, ಕೆ.ಜಿ.ಶ್ರೀನಿವಾಸಮೂರ್ತಿ, ಶೂದ್ರ ಶ್ರೀನಿವಾಸ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net