

ಒಂದು ಊರಿನಲ್ಲಿ ಒಬ್ಬ ಸಜ್ಜನ ವ್ಯಾಪಾರಿ ಇದ್ದ. ಅವನು ತನ್ನ ವ್ಯಾಪಾರವನ್ನು ನೀತಿ, ನಿಯಮ, ಧರ್ಮ, ಸತ್ಯ ಹಾಗೂ ಪ್ರಾಮಾಣಿಕತೆಯಿಂದ ನಡೆಸುತ್ತಿದ್ದ. ಭಗವಂತನ ಅನುಗ್ರಹಕ್ಕಾಗಿ ನಿತ್ಯ ನೈಮಿತ್ತಿಕವಾಗಿ ಪ್ರ್ರಾರ್ಥನೆ, ಪೂಜೆ, ದಾನ, ಧ್ಯಾನಾದಿಗಳನ್ನು ಮಾಡುತ್ತಿದ್ದ. ಒಳ್ಳೆಯ ವ್ಯಾಪಾರ ಕೂಡ ನಡೆಯುತ್ತಿತ್ತು.
ಒಮ್ಮೆ ಆತ ಬೆಲ್ಲದ ವ್ಯಾಪಾರ ಮಾಡೋಣ ಎಂದು ನಿರ್ಣಯಿಸಿದ. ತನ್ನ ಇಷ್ಟದೇವರನ್ನು ಮನಸಾರೆ ಪ್ರಾರ್ಥಿಸಿ, ಭಕ್ತಿಯಿಂದ ಪೂಜಾ-ಪ್ರಸಾದಗಳನ್ನು ಮುಗಿಸಿ ತನ್ನ ವ್ಯಾಪಾರವನ್ನು ಆರಂಭಿಸಿದ. ಸ್ವಲ್ಪ ದೂರದ ಊರಿಗೆ ಹೋಗಿ ವ್ಯಾಪಾರ ಮಾಡ್ಬೇಕು, ಮಧ್ಯೇ ಮಾರ್ಗದಲ್ಲಿ ಅರಣ್ಯ ಸಿಗುತ್ತೆ. ಒಬ್ಬನೇ ಹೋಗೋದಕ್ಕೆ ಭಯವಾಗುತ್ತೆ ಅಂತ ಇತರ ವ್ಯಾಪಾರಿಗಳ ಜೊತೆ ಸೇರ್ಕೊಂಡ. ಅವರೆಲ್ಲ ಲೋಹದ ಪಾತ್ರೆ, ದವಸ-ಧಾನ್ಯಗಳು, ವಸ್ತ್ರಗಳು, ಕಬ್ಬಿಣದ ಸಾಮಗ್ರಿ ಹೀಗೆ ಬೇರೆ ಬೇರೆ ವಸ್ತುಗಳನ್ನು ಮಾರೋಕೆ ಹೊರಟಿದ್ರು. ಕೆಲ ದೂರ ಸಾಗಿದ ಮೇಲೆ ದಟ್ಟವಾದ ಕಾಡು ಸಿಕ್ತು, ಒಮ್ಮೆಲೇ ಇದ್ದಕ್ಕಿದ್ದಂತೆ ಧಾರಾಕಾರವಾಗಿ ಮಳೆ ಸುರಿಯತೊಡಗಿತು.
ಈ ವ್ಯಾಪಾರಿ ಖರೀದಿಸಿ ತಂದಿದ್ದ ಬೆಲ್ಲ ಸಂಪೂರ್ಣವಾಗಿ ನೀರಲ್ಲಿ ಕರಗಿಹೋಯ್ತು. ಈ ನಷ್ಟದಿಂದ ವ್ಯಾಪಾರಿಗೆ ಭ್ರಮನಿರಸನವಾಯಿತು. ನಿರಾಶನಾಗಿ ತನ್ನನ್ನೂ ತನ್ನ ಭಾಗ್ಯವನ್ನೂ ಹಳಿದುಕೊಳ್ಳುತ್ತ ಕುಳಿತ. ಕೊನೆಗೆ ಕೋಪದಿಂದ ಅಳುತ್ತ, ‘ಭಗವಂತನೇ ಇಲ್ಲ. ಎಷ್ಟೊಂದು ಭಕ್ತಿಯಿಂದ, ಪೂಜೆ ಮಾಡಿದ್ದೆ, ದೀನನಾಗಿ ಬೇಡ್ಕೊಂಡಿದ್ದೆ, ಕೊನೆಗೂ ನನಗೆ ಹೀಗಾಗ್ಹೋಯ್ತಲ್ಲ’ ಅಂತ ಕಿರುಚಾಡಿದ. ಇತರ ವ್ಯಾಪಾರಿಗಳ ವಸ್ತುಗಳು ಹಾಗೆಯೇ ಇದ್ದವು. ಸಂಜೆಯಾದಂತೆ ನಿಧಾನವಾಗಿ ಕತ್ತಲೆ ಆವರಿಸಿತು, ರಾತ್ರಿಯಾಯಿತು. ಸ್ವಲ್ಪ ಹೊತ್ತಿನಲ್ಲೇ ಡಕಾಯಿತರು ಅಲ್ಲಿಗೆ ಬಂದರು. ಈ ಬೆಲ್ಲದ ವ್ಯಾಪಾರಿಯನ್ನು ನೋಡಿ, ‘ನೀನು ತಂದಿರುವ ಎಲ್ಲ ಬೆಲ್ಲವನ್ನೂ ಮಾರಿದ್ದೀಯಾ ಅಂತ ನಮಗೆ ಗೊತ್ತು, ಎಲ್ಲಿ ಆ ಹಣ? ತಡಮಾಡದೇ ಕೊಟ್ಟುಬಿಡು. ಇಲ್ಲದಿದ್ದರೆ ನಿನ್ನನ್ನು ಕೊಂದು ಬಿಡುತ್ತೇವೆ’ ಎಂದು ಹೆದರಿಸಿದರು. ಕಳ್ಳರಿಗೆ ನಡೆದುದೆಲ್ಲವನ್ನೂ ಹೇಳಿದ. ಕಳ್ಳರಿಗೆ ಕೋಪ ಬಂದು ಆತನನ್ನು ಹಿಗ್ಗಾಮುಗ್ಗಾ ಬೈದರು. ಅನಂತರ ಕಳ್ಳರ ದೃಷ್ಟಿ ಇತರ ವ್ಯಾಪಾರಿಗಳತ್ತ ತಿರುಗಿತು. ಒಬ್ಬೊಬ್ಬ ವ್ಯಾಪಾರಿಯನ್ನು ಸುಲಿಗೆ ಮಾಡಿದರು, ವಸ್ತುಗಳನ್ನು, ಹಣವನ್ನು ಕೊಡದವರನ್ನು ಗುಂಡು ಹಾರಿಸಿ ಕೊಂದೇ ಬಿಟ್ಟರು, ನಂತರ ದೋಚಿದ ವಸ್ತುಗಳನ್ನೆಲ್ಲ ಮೂಟೆ ಕಟ್ಟಿದ ಕಳ್ಳರು ಮತ್ತದೇ ದಟ್ಟವಾದ ಕಾಡಿನಲ್ಲಿ ಸೇರಿಕೊಂಡರು.
ಒಂದು ವೇಳೆ ಆ ವ್ಯಾಪಾರಿ ತಾನು ತಂದ ಎಲ್ಲ ಬೆಲ್ಲವನ್ನೂ ಮಾರಿ ಬಂದ ಹಣವನ್ನು ತನ್ನ ಬಳಿಯಲ್ಲಿಟ್ಟುಕೊಂಡಿದ್ದರೆ! ಮಳೆ ಸುರಿಯದಿದ್ದರೆ! ಖಂಡಿತವಾಗಿಯೂ ಕಳ್ಳರ ಗುಂಡಿಗೆ ಬಲಿಯಾಗಿರುತ್ತಿದ್ದ. ಭಗವಂತ ಮಳೆಯ ರೂಪದಲ್ಲಿ ಬಂದು ಅವನನ್ನು ಬದುಕಿಸಿ ಕಾಪಾಡಿದ್ದ.
ಇದೊಂದು ಹಳೆಯ ಕಥೆ. ಆದರೆ ಪ್ರತಿಯೊಬ್ಬರ ಜೀವನದಲ್ಲೂ ಆಗಾಗ ನಡೆಯುವ ಕಥೆ. ಒಮ್ಮೊಮ್ಮೆ ಭಗವಂತನ ಬಗ್ಗೆಯೇ ಸಂದೇಹ ಬರುತ್ತದೆ, ಆದರೆ ನಿಶ್ಚಲವಾದ ನಂಬಿಕೆಯಿದ್ದರೆ, ಲಾಭ ಮಾಡಿಸಿಯೋ ಇಲ್ಲವೇ ನಷ್ಟ ಮಾಡಿಸಿಯೋ ಅಂತೂ ಭಗವಂತ ನಮ್ಮನ್ನು ಕಾಪಾಡುತ್ತಾನೆ ಅನ್ನೋದು ಸತ್ಯ. ಅದಕ್ಕೆ ದಾಸರು ‘ನಂಬಿ ಕೆಟ್ಟವರಿಲ್ಲವೋ’ ಎಂದು ಹೇಳಿದ್ದು.
(ಲೇಖಕರು ಸಂಸ್ಕೃತ ಉಪನ್ಯಾಸಕರು)
(ಪ್ರತಿಕ್ರಿಯಿಸಿ: manollasavv@gmail.com)