

ಚಿತ್ರದುರ್ಗ: ವಿಶ್ವಕ್ಕೆ ಮಾದರಿಯಾದ ವಚನ ಸಾಹಿತ್ಯದ ಸಂಶೋಧನೆಗೆ ಡಾ.ಫ.ಗು. ಹಳಕಟ್ಟಿ ತಮ್ಮ ಜೀವನವನ್ನೇ ಮುಡುಪಾಗಿಟ್ಟಿದ್ದರು ಎಂದು ಬಾಪೂಜಿ ಸಂಯುಕ್ತ ಪಪೂ ಕಾಲೇಜು ಪ್ರಾಚಾರ್ಯೆ ಡಾ.ಎನ್. ಮಮತಾ ಹೇಳಿದರು.
ಜಿಲ್ಲಾಡಳಿತ, ಜಿಪಂ, ನಗರಸಭೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಡಾ.ಫ.ಗು. ಹಳಕಟ್ಟಿ ಜನ್ಮದಿನದ ಪ್ರಯುಕ್ತ ಡಿಸಿ ಕಚೇರಿಯಲ್ಲಿ ಬುಧವಾರ ಆಯೋಜಿಸಿದ್ದ ವಚನ ಸಂರಕ್ಷಣಾ ದಿನಾಚರಣೆಯಲ್ಲಿ ಅವರು ಮಾತನಾಡಿದರು.
ವಕೀಲಿ ವೃತ್ತಿ ತೊರೆದು ಸತತ 60 ವರ್ಷಗಳ ಕಾಲ ವಚನಗಳ ಸಂಶೋಧನೆ ಹಾಗೂ ಪ್ರಕಟಣೆ ಕಾರ್ಯ ಕೈಗೊಳ್ಳುವ ಮೂಲಕ 250ಕ್ಕೂ ಅಧಿಕ ವಚನಕಾರರನ್ನು ನಾಡಿಗೆ ಪರಿಚಯಿಸಿದ ಕೀರ್ತಿ ಹಳ್ಳಕಟ್ಟಿ ಅವರಿಗೆ ಸಲ್ಲುತ್ತದೆ ಎಂದರು.
ವಚನ ಸಾಹಿತ್ಯವನ್ನು ಪುನರುಜ್ಜೀವನಗೊಳಿಸಿದ ಅವರನ್ನು ಸಾಹಿತಿ ಸಿಂಪಿ ಲಿಂಗಣ್ಣ ಕರ್ನಾಟಕದ ಮ್ಯಾಕ್ಸ್‌ಮುಲ್ಲರ್ ಎಂದು ಕರೆದಿದ್ದಾರೆ. ಸಾಹಿತಿ ಬಿ.ಎಂ. ಶ್ರೀಕಂಠಯ್ಯ ಅವರು ವಚನಗುಮ್ಮಟ ಎಂದು ಹೊಗಳಿದ್ದಾರೆ ಎಂದರು.
ಉತ್ತರ ಕರ್ನಾಟಕದ ಮನೆಗಳಲ್ಲಿ ಪೂಜಿಸುತ್ತಿದ್ದ ವಚನ ಸಾಹಿತ್ಯದ ತಾಳೆಗರಿಗಳನ್ನು ಸಂಗ್ರಹಿಸಿ ಅಧ್ಯಯನ ಮಾಡಿ ಪ್ರಕಟಿಸುವ ಮೂಲಕ ವಚನಕಾರರ ಚಿಂತನೆಯನ್ನು ಜಗತ್ತಿಗೆ ಪರಿಚಯಿಸಿದ್ದಾರೆ. 12ನೇ ಶತಮಾನದ ವಚನ ಚಳವಳಿ ವಿಶ್ವಕ್ಕೆ ಮಾದರಿಯಾದ ಸಾಮಾಜಿಕ ಕ್ರಾಂತಿಯಾಗಿದೆ. ಇದನ್ನು ಜಗತ್ತಿಗೆ ತಿಳಿಯಪಡಿಸಿದ ಹಳಕಟ್ಟಿ ಅವರನ್ನು ವಚನ ಸಾಹಿತ್ಯದ ಪಿತಾಮಹಾ ಎಂದು ಬಣ್ಣಿಸಲಾಗಿದೆ ಎಂದರು.
ಅವರು ಹಣಕ್ಕಾಗಿ ಸಂಶೋಧನೆ ಕೈಗೊಂಡವರಲ್ಲ. ಅವರ ಪುತ್ರ ಮರಣ ಹೊಂದಿದರೂ ಧೃತಿಗೆಡದೆ ಸಂಶೋಧನೆ ಮುಂದುವರಿಸಿದ್ದರು. ಅವರ ವ್ಯಕ್ತಿತ್ವ ನಾಡಿಗೆ ಮಾದರಿಯಾಗಿದೆ. ದುರ್ಧೈವದ ಸಂಗತಿಯಂದರೆ ಅವರ ಜೀವಿತ ಕಾಲದಲ್ಲಿ ಅವರ ಸಾಧನೆಯನ್ನು ಜನ ಗುರುತಿಸಲಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.
ವಿಜಯಪುರದಲ್ಲಿದ್ದ ಹಳಕಟ್ಟಿ ಅವರ ನಿವಾಸಕ್ಕೆ ಅಂದಿನ ರಾಜ್ಯಪಾಲ ಜಯಚಾಮರಾಜೇಂದ್ರ ಒಡೆಯರ್ ಭೇಟಿ ನೀಡಿ ಗೌರವಿಸಿದ್ದರು. ಮಠಗಳು ಹಳಕಟ್ಟಿ ಅವರನ್ನು ಸ್ಮರಿಸುವ ಕೆಲಸ ಮಾಡಬೇಕು. ಇವತ್ತಿನ ಪೀಳಿಗೆಗೆ ಅವರ ಕೊಡುಗೆ ಮತ್ತು ವ್ಯಕ್ತಿತ್ವವನ್ನು ಪರಿಚಯಿಸಬೇಕಿದೆ ಎಂದು ಮಮತಾ ಹೇಳಿದರು.
ಎಸಿ ಮೆಹಬೂಬ್ ಜಿಲಾನಿ ಖುರೇಷಿ ಮಾತನಾಡಿ, ವಿಶ್ವ ಸಾಹಿತ್ಯಕ್ಕೆ ಅಮೂಲ್ಯ ಕೊಡುಗೆ ನೀಡಿರುವ ಹಳಕಟ್ಟಿ ಅವರ ಸಾಹಿತ್ಯ ಸೇವೆ ಅವಿಸ್ಮರಣೀಯ. ವಚನ ಸಾಹಿತ್ಯ ಮತ್ತು ವಚನಕಾರರ ಬಗ್ಗೆ ಅಮೂಲಾಗ್ರವಾಗಿ ತಿಳಿಯಲು ಇವರಿಂದ ಸಾಧ್ಯವಾಗಿದೆ ಎಂದರು.
ಜಿಲ್ಲಾ ಗ್ಯಾರಂಟಿ ಯೋಜನಾ ಪ್ರಾಧಿಕಾರ ಅಧ್ಯಕ್ಷ ಆರ್. ಶಿವಣ್ಣ, ಕುಡಾ ಅಧ್ಯಕ್ಷ ಎಂ.ಕೆ. ತಾಜ್‌ಪೀರ್, ಕಸಾಪ ಜಿಲ್ಲಾಧ್ಯಕ್ಷ ಕೆ. ಎಂ. ಶಿವಸ್ವಾಮಿ ಮಾತನಾಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಬಿ.ಎಂ. ಗುರುನಾಥ, ಎಸಿ ಕಚೇರಿ ತಹಸೀಲ್ದಾರ್ ನರಸಿಂಹಮೂರ್ತಿ, ಕಸಾಪ ಜಿಲ್ಲಾ ಕಾರ್ಯದರ್ಶಿ ಮಳಲಿ ಶ್ರೀನಿವಾಸ್, ನಿಜಲಿಂಗಪ್ಪ ಸ್ಮಾರಕ ಟ್ರಸ್ಟ್ ಕಾರ್ಯದರ್ಶಿ ಕೆಇಬಿ ಷಣ್ಮುಖಪ್ಪ, ಉಪನ್ಯಾಸಕರ ಸಂಘದ ಮಾಜಿ ಜಿಲ್ಲಾಧ್ಯಕ್ಷ ಎಸ್. ಲಕ್ಷ್ಮಣ್, ಸಾಹಿತಿ ಆನಂದ ಮೂರ್ತಿ ಇತರರು ಇದ್ದರು.
ಶಿಕ್ಷಕಿ ಗೀತಾ ಭರಮಸಾಗರ ನಿರೂಪಿಸಿದರು.
,,,,,,,,ಕೋಟ್,,,,,,,,,,,,,
ಡಾ.ಫ.ಗು ಹಳಕಟ್ಟಿ ಅವರು ವಿಧಾನ ಪರಿಷತ್ ಸದಸ್ಯರು,ವಕೀಲರು ಹಾಗೂ ಪತ್ರಕರ್ತರಾಗಿಯೂ ಕೆಲಸ ಮಾಡಿದ್ದಾರೆ. ಇಂತಹ ಮಹನೀಯರ ಸೇವೆಯನ್ನು ಸ್ಮರಿಸುವುದು ಅಗತ್ಯವಿದೆ ಎಂದರು.
ಕೆ.ಎಂ.ಶಿವಸ್ವಾಮಿ,ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ,ಚಿತ್ರದುರ್ಗ.
--------