

ಬೆಂಗಳೂರು: ವಿಶ್ವ ಪರ್ಯಟನೆ ಮಾಡುತ್ತ, 'ನಮಸ್ಕಾರ ದೇವರು' ಎನ್ನುತ್ತ, ಕನ್ನಡಿಗರಿಗೆ ಕನ್ನಡದಲ್ಲೇ ಮಾತನಾಡುತ್ತ ಜಗತ್ತನ್ನೇ ತೋರಿಸುತ್ತಿರುವ 'ಡಾ.ಬ್ರೋ' ಅವರನ್ನು ರಾಜ್ಯೋತ್ಸವ ಪ್ರಶಸ್ತಿಗೆ ಪರಿಗಣಿಸಬೇಕು ಎಂಬುದಾಗಿ ಸಾಮಾಜಿಕ ಜಾಲತಾಣದಲ್ಲಿ ಆಗ್ರಹವೊಂದು ಕೇಳಿಬಂದಿದೆ.
ಸತತ ವಿಶ್ವ ಪರ್ಯಟನೆಯಲ್ಲಿರುವ ಡಾ. ಬ್ರೋ (ಗಗನ್ ಶ್ರೀನಿವಾಸ್) ಅವರನ್ನು ಕನ್ನಡದ ಜಾಗತಿಕ ರಾಯಭಾರಿ ಎಂದರೂ ಅತಿಶಯೋಕ್ತಿ ಏನಲ್ಲ. ಏಕೆಂದರೆ ಹೋದಲ್ಲೆಲ್ಲ ಆದಷ್ಟೂ ಕನ್ನಡದಲ್ಲೇ ಮಾತನಾಡುತ್ತ, ಅಲ್ಲಿನ ಸ್ಥಳ-ವಿಶೇಷಗಳನ್ನು ಕನ್ನಡದಲ್ಲೇ ವಿವರಿಸುತ್ತ ಅಸಂಖ್ಯಾತ ಕನ್ನಡಿಗರ ಮನಗೆದ್ದಿರುವ ಡಾ.ಬ್ರೋ ಕನ್ನಡಿಗರ ಅಚ್ಚುಮೆಚ್ಚಿನ ಯೂ-ಟ್ಯೂಬರ್.
ಹೀಗೆ ವಿಶ್ವದಾದ್ಯಂತ ಕನ್ನಡದ ಕಂಪನ್ನು ಪಸರಿಸುತ್ತಿರುವ ಡಾ.ಬ್ರೋ ಅವರನ್ನು ರಾಜ್ಯೋತ್ಸವ ಪ್ರಶಸ್ತಿಗೆ ಪರಿಗಣಿಸಬೇಕು ಎಂದು ಹಲವರು ಸಾಮಾಜಿಕ ಜಾಲತಾಣದಲ್ಲಿ ಆಗ್ರಹ ವ್ಯಕ್ತಪಡಿಸಿದ್ದಾರೆ. ಕನ್ನಡಿಗರ ಈ ಅಭಿಮಾನದ ಆಗ್ರಹಕ್ಕೆ ಸಂಬಂಧಿಸಿದಂತೆ ಡಾ.ಬ್ರೋ ಅವರು ದುಬೈನಿಂದ ವಿಜಯವಾಣಿಗೆ ಪ್ರತಿಕ್ರಿಯಿಸಿದ್ದು, ಆ ಕುರಿತು ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದಾರೆ.
'ರಾಜ್ಯೋತ್ಸವ ಪ್ರಶಸ್ತಿ ಪಡೆದುಕೊಳ್ಳುವಂಥ ದೊಡ್ಡ ಕೆಲಸ ನಾನೇನೂ ಮಾಡಿಲ್ಲ. ಬೇಡ ಬೇಡ.. ಮುಂದೆ ಇನ್ನೂ ಏನಾದರೂ ಸಾಧನೆ ಮಾಡಿಬಿಟ್ಟು ತೆಗೆದುಕೊಳ್ಳೋಣ. ಆ ಪ್ರಶಸ್ತಿಗೆ ತುಂಬಾ ದೊಡ್ಡ ಗೌರವ ಇದೆ. ನಾನು ಇನ್ನೂ ಏನೂ ಮಾಡಿಲ್ಲ, ಇನ್ನು ಏನಾದರೂ ಮಾಡಿದ್ರೆ ಮುಂದೆ ಆವಾಗ ಕೊಡಲಿ, ತೆಗೆದುಕೊಳ್ಳುತ್ತೇನೆ' ಎಂದು ಅಭಿಮಾನಿಗಳ ಒತ್ತಾಯಕ್ಕೆ ಡಾ.ಬ್ರೋ ಪ್ರತಿಕ್ರಿಯೆ ನೀಡಿದ್ದಾರೆ.