ಉಡುಪಿ: ಭಾರತದಲ್ಲಿ ನನಗೆ 1 ರೂ. ಸಾಲವಿಲ್ಲ. ಆದರೆ ವಿದೇಶದ ಬ್ಯಾಂಕ್‌ಗಳಲ್ಲಿ ಸಾಲಪಡೆದಿದ್ದು, ಶೀಘ್ರದಲ್ಲಿ ಎಲ್ಲಾ ಸಮಸ್ಯೆಗಳಿಂದ ಮುಕ್ತನಾಗುತ್ತೇನೆ ಎಂದು ಅನಿವಾಸಿ ಭಾರತೀಯ ಉದ್ಯಮಿ ಡಾ. ಬಿ.ಆರ್. ಶೆಟ್ಟಿ ಹೇಳಿದರು.
ಕೂಸಮ್ಮ ಶಂಭು ಶೆಟ್ಟಿ ಸ್ಮಾರಕ ಹಾಜಿ ಅಬ್ದುಲ್ಲಾ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2018ರಲ್ಲಿ ನಮ್ಮ ಸಂಸ್ಥೆ ಆಸ್ತಿ ಮೌಲ್ಯ 12.8 ಬಿಲಿಯನ್ ಡಾಲರ್ ಇತ್ತು. ಆದರೆ ನಂಬಿಕಸ್ಥರೇ ನನಗೆ ಮೋಸ ಮಾಡಿದ್ದರಿಂದ ಸಮಸ್ಯೆ ಸುಳಿಯಲ್ಲಿ ಸಿಲುಕಿದ್ದೇನೆ. ಒಂದು ಕಾಲದಲ್ಲಿ ದೇಶದ 84 ಬ್ಯಾಂಕ್‌ಗಳು ಸಾಲ ನೀಡಲು ಮುಂದೆಬರುತ್ತಿದ್ದವು. ತಮ್ಮಲ್ಲಿ ವ್ಯವಹಾರ ನಡೆಸುವಂತೆ ದಂಬಾಲು ಬೀಳುತ್ತಿದ್ದವು. ಆದರೆ ಈಗ ದೇಶದ ಯಾವುದೇ ಬ್ಯಾಂಕ್‌ಗಳು ಸಾಲ ನೀಡುತ್ತಿಲ್ಲ. ಟ್ರಂಪ್ ಕೂಡ ಒಂದು ಕಾಲದಲ್ಲಿ ಸುಸ್ಥಿದಾರರಾಗಿದ್ದರು. ನಂತರ ಸ್ವಂತ ಪರಿಶ್ರಮದಿಂದ ಅಮೇರಿಕಾದ ಅಧ್ಯಕ್ಷರಾಗಿದ್ದಾರೆ. ಅದೇ ರೀತಿ ನಾನೂ ಆತ್ಮವಿಶ್ವಾಸ ಹೊಂದಿದ್ದೇನೆ ಎಂದರು.