

ಬೆಂಗಳೂರು: ಕೇರಳದ ಮಾತಾ ಅಮೃತಾನಂದಮಯಿ ಮಠವು ಪ್ರಕಟಿಸಿರುವ 2023ನೇ ಸಾಲಿನ ಪ್ರತಿಷ್ಠಿತ ‘ಅಮೃತಕೀರ್ತಿ ಪ್ರಶಸ್ತಿ’ಗೆ ಹಿರಿಯ ಸಾಹಿತಿ ಡಾ. ಎಸ್.ಎಲ್.ಬೈರಪ್ಪ ಸೇರಿ ದೇಶದ ಐವರು ಸಾಹಿತಿ ಹಾಗೂ ವೇದ ಪಂಡಿತರು ಆಯ್ಕೆಯಾಗಿದ್ದಾರೆ.
ಖ್ಯಾತ ವೇದಶಾಸಜ್ಞ ಪ್ರೊ. ಶ್ರೀವರಾಹಂ ಚಂದ್ರಶೇಖರನ್ ನಾಯರ್, ಆಚಾರ್ಯ ರಾಜೇಶ್, ಶಂಕರಾಚಾರ್ಯ ಸಂಸ್ಕೃತ ವಿವಿಯ ವಿಶ್ರಾಂತ ಕುಲಪತಿ ಎದುತುಕರನ್ ಹಾಗೂ ಡಾ. ಕೆ.ಎಸ್.ರಾಧಾಕೃಷ್ಣನ್ ಅವರಿಗೆ ಪ್ರಶಸ್ತಿ ಲಭಿಸಿದೆ. ಪ್ರಶಸ್ತಿಯು ತಲಾ 1,23,456 ರೂ., ಸರಸ್ವತಿ ಸ್ಮರಣಿಕೆ ಹಾಗೂ ಸನ್ಮಾನ ಪತ್ರ ಒಳಗೊಂಡಿರುತ್ತದೆ.
ಗಾಂಧಿ ಜಯಂತಿ ಮರುದಿನವಾದ ಅ.3ರಂದು ಕೊಲಂನ ಪ್ರಶಾಂತ ಅಮೃತಪುರಿಯಲ್ಲಿ ನಡೆಯಲಿರುವ ಅಮೃತಾನಂದಮಯಿ ಅವರ 70ನೇ ಜನ್ಮದಿನಾಚರಣೆ ಸಮಾರಂಭದಲ್ಲಿ ಪುರಸ್ಕೃತರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಕಾರ್ಯಕ್ರಮದಲ್ಲಿ ಹೆಸರಾಂತ ವಿದ್ವಾಂಸರು, ಸಾಹಿತ್ಯ ಹಾಗೂ ವೇದ ಅಧ್ಯಯನದಲ್ಲಿ ಪಾಂಡಿತ್ಯ ಹೊಂದಿರುವವರು, ಸಾಹಿತ್ಯಾಸಕ್ತರು ಹಾಗೂ ಇತರ ಗಣ್ಯರು ಉಪಸ್ಥಿತರಿರಲಿದ್ದಾರೆ ಎಂದು ಮಠದ ಪ್ರಕಟಣೆಯಲ್ಲಿ ತಿಳಿಸಿದೆ.