ನನ್ನ ತಂಗಿ ಬೆಂಕಿಯಲ್ಲಿ ಬೇಯುತ್ತಿದ್ರೂ ನಾನು ವಿಡಿಯೋ ಮಾಡಿದೆ ಏಕೆಂದರೆ... ಮನಕಲಕುವಂತಿದೆ ಅಕ್ಕನ ಹೇಳಿಕೆ! Dowry Murder Case

Dowry Murder Case
Published on

Dowry Murder Case : ದಿನದಿಂದ ದಿನಕ್ಕೆ ತಂತ್ರಜ್ಞಾನ ಬೆಳೆಯುತ್ತಿದ್ದು, ಮಹಿಳೆಯರು ಎಲ್ಲ ವಿಚಾರದಲ್ಲೂ ಜಾಗೃತರಾಗುತ್ತಿದ್ದಾರೆ. ಪುರುಷರಿಗೆ ಸಮಾನವಾಗಿ ಎಲ್ಲಾ ಕ್ಷೇತ್ರಗಳಲ್ಲಿಯೂ ಸಾಧನೆ ಮಾಡುತ್ತಿದ್ದಾರೆ. ಮಹಿಳೆಯರ ಬಗ್ಗೆ ಪುರುಷರ ಮನೋಭಾವ ಕ್ರಮೇಣ ಬದಲಾಗುತ್ತಿದೆ. ಈ ಹಿಂದೆ, ಅನೇಕ ಮಹಿಳೆಯರು ತಮ್ಮ ಅತ್ತೆ-ಮಾವನ ಮನೆಯಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದರು. ಗಂಡ ಮತ್ತು ಆತನ ಕುಟುಂಬದಿಂದ ಉಂಟಾಗುವ ಸಮಸ್ಯೆಗಳಿಂದ ಮಹಿಳೆಯರು ಆತ್ಮಹತ್ಯೆ ಮಾಡಿಕೊಂಡ ಪ್ರಕರಣಗಳಿವೆ. ವರದಕ್ಷಿಣೆ ಕಿರುಕುಳದಿಂದಾಗಿ ಅನೇಕ ಮಹಿಳೆಯರು ಪ್ರಾಣ ಕಳೆದುಕೊಂಡಿದ್ದಾರೆ. ಆದರೆ, ಇಂದು ಬದಲಾಗುತ್ತಿರುವ ಕಾಲದೊಂದಿಗೆ ವರದಕ್ಷಿಣೆ ಕಿರುಕುಳದ ಸಮಸ್ಯೆಗಳು ಕೂಡ ಕಡಿಮೆಯಾಗುತ್ತಿವೆ. ಆದಾಗ್ಯೂ, ಕೆಲವು ಪ್ರದೇಶಗಳಲ್ಲಿ, ಈ ಸಮಸ್ಯೆ ಮಹಿಳೆಯರನ್ನು ಇಂದಿಗೂ ಕಾಡುತ್ತಿದೆ. ಅದಕ್ಕೆ ತಾಜಾ ಉದಾಹರಣೆಯೇ ಉತ್ತರ ಪ್ರದೇಶದಲ್ಲಿ ನಡೆದಿರುವ ಈ ಒಂದು ಘಟನೆ.

ಹಣದ ದಾಹಕ್ಕೆ ಗಂಡನೊಬ್ಬ ತನ್ನ ಕುಟುಂಬದೊಂದಿಗೆ ಸೇರಿ ಪತ್ನಿಗೆ ಬೆಂಕಿ ಹಚ್ಚಿ ಬರ್ಬರವಾಗಿ ಕೊಲೆ ಮಾಡಿದ್ದಾನೆ. ಈ ಘಟನೆ ಉತ್ತರ ಪ್ರದೇಶದ ಗ್ರೇಟರ್​ ನೋಯ್ಡಾದಲ್ಲಿ ನಡೆದಿದೆ. ಮೃತಳನ್ನು ನಿಕ್ಕಿ ಎಂದು ಗುರುತಿಸಲಾಗಿದೆ. ಈಕೆ 2016ರಲ್ಲಿ ಸಿರ್ಸಾ ಮೂಲದ ವಿಪಿಎನ್​ ಎಂಬಾತನನ್ನು ಮದುವೆಯಾಗಿದ್ದಳು. ಕಳೆದ ಗುರುವಾರ (ಆಗಸ್ಟ್​ 21) ಗಂಭೀರ ಸುಟ್ಟು ಗಾಯಗಳಿಂದ ನಿಕ್ಕಿಯನ್ನು ಗ್ರೇಟರ್​ ನೋಯ್ಡಾದ ಫೋರ್ಟೀಸ್​ ಆಸ್ಪತ್ರೆಗೆ ಕರೆತಂದಾಗ ಘಟನೆ ಬೆಳಕಿಗೆ ಬಂದಿದೆ. ಗಂಭೀರ ಗಾಯಗೊಂಡಿದ್ದ ನಿಕ್ಕಿಯನ್ನು ಪರೀಕ್ಷೆ ಮಾಡಿದ ಫೋರ್ಟೀಸ್​ ಆಸ್ಪತ್ರೆ ವೈದ್ಯರು, ಉತ್ತಮ ಚಿಕಿತ್ಸೆಗಾಗಿ ದೆಹಲಿಯ ಸಫ್ದರ್ಜಂಗ್ ಆಸ್ಪತ್ರೆಗೆ ಕರೆದೊಯ್ಯಲು ಸೂಚಿಸಿದರು. ಅದರಂತೆ, ಆಕೆಯನ್ನು ಕರೆದೊಯ್ಯುವಾಗ ಮಾರ್ಗ ಮಧ್ಯೆ ಅಸುನೀಗಿದ್ದಾರೆ.

ಮದುವೆ ಸಮಯದಲ್ಲಿ ಭಾರೀ ವರದಕ್ಷಿಣೆ ನೀಡಲಾಗಿತ್ತು. ಆದರೆ, ಅಷ್ಟಕ್ಕೆ ಗಂಡನ ಮನೆಯವರ ಹಣದಾಹ ತಣಿಸಲಿಲ್ಲ. ಮತ್ತೆ 36 ಲಕ್ಷ ರೂ. ಹಣ ತೆಗೆದುಕೊಂಡು ಬರುವಂತೆ ವಿಪಿನ್​ ಮತ್ತು ಆತನ ಕುಟುಂಬ ನಿಕ್ಕಿಯನ್ನು ಒತ್ತಾಯಿಸಿತು. ಅಷ್ಟೊಂದು ಹಣವನ್ನು ತೆಗೆದುಕೊಂಡು ಬರಲು ಸಾಧ್ಯವಾಗದಿದ್ದಾಗ, ಮನಬಂದತೆ ಥಳಿಸಿದ ಗಂಡನ ಮನೆಯವರು, ಆಕೆಯನ್ನು ಬೆಂಕಿ ಹಚ್ಚಿ ಭೀಕರವಾಗಿ ಕೊಲೆಗೈದಿರುವುದು ಸದ್ಯ ಸ್ಥಳೀಯರನ್ನು ಅಕ್ಷರಶಃ ಬೆಚ್ಚಿಬೀಳಿಸಿದೆ. ಈ ಭಯಾನಕ ಕೃತ್ಯವನ್ನು ಮೃತ ಯುವತಿಯ 6 ವರ್ಷದ ಪುಟ್ಟ ಮಗುವೇ ಮಾಧ್ಯಮಗಳ ಮುಂದೆ ಹಂಚಿಕೊಂಡಿದೆ. ನನ್ನ ಕಣ್ಣ ಮುಂದೆಯೇ ನನ್ನ ಅಪ್ಪ ನನ್ನ ತಾಯಿಯನ್ನು ಕೊಂದರು ಎಂದು ಹೇಳಿರುವುದು ಅನೇಕರ ಕಣ್ಣಂಚಲ್ಲಿ ನೀರು ತರಿಸಿದೆ.

ಸ್ಕಾರ್ಪಿಯೋ ಎಸ್‌ಯುವಿ, ಬುಲೆಟ್

ಅಂದಹಾಗೆ, ಮೃತ ನಿಕ್ಕಿ ಮತ್ತು ಆಕೆಯ ಸಹೋದರಿ ಕಾಂಚನ್, 2016, ಡಿಸೆಂಬರ್ 10 ರಂದು ಸಹೋದರರಾದ ವಿಪಿನ್ ಮತ್ತು ರೋಹಿತ್ ಅವರನ್ನು ವಿವಾಹವಾದರು. ಮದುವೆಯ ಸಮಯದಲ್ಲಿ ವರರಿಗೆ ಟಾಪ್ ಮಾಡೆಲ್ ಸ್ಕಾರ್ಪಿಯೋ ಎಸ್‌ಯುವಿ, ಬುಲೆಟ್ (ರಾಯಲ್ ಎನ್‌ಫೀಲ್ಡ್) ಬೈಕ್, ನಗದು, ಚಿನ್ನ, ಎಲ್ಲವನ್ನೂ ಉಡುಗೊರೆಯಾಗಿ ನೀಡಲಾಗಿತ್ತು. ಇದಲ್ಲದೆ, ಕರ್ವಾ ಚೌತ್‌ನಲ್ಲಿ ನಮ್ಮ ಮನೆಯಿಂದ ಉಡುಗೊರೆಗಳನ್ನು ಕಳುಹಿಸಲಾಗುತ್ತಿತ್ತು ಎಂದು ನಿಕ್ಕಿ ಸಹೋದರಿ ಕಾಂಚನ್​ ಎನ್​ಡಿಟಿವಿಗೆ ತಿಳಿಸಿದ್ದಾರೆ.

ಕೇವಲ 2 ರೂ. ಎನ್ನುತ್ತಿದ್ದರು

ನಮ್ಮ ಪಾಲಕರು ತಮ್ಮ ಕೈಲಾದಷ್ಟು ಮಾಡಿದರು. ಆದರೆ, ನಮ್ಮ ಅತ್ತೆ-ಮಾವಂದಿರು ಅದರಿಂದ ಸಂತೋಷವಾಗಿರಲಿಲ್ಲ. ಹಣದಾಹ ಇತ್ತು. ಅದರಿಂದ ನಮನ್ನು ಟೀಕಿಸುತ್ತಲೇ ಇದ್ದರು. ನನ್ನ ಪಾಲಕರು ಉಡುಗೊರೆಯಾಗಿ ನೀಡಿದ ಬಟ್ಟೆಗಳ ಬೆಲೆ ಕೇವಲ 2 ರೂ. ಎಂದು ಗಂಡನ ಮನೆಯವರು ಹೇಳುತ್ತಿದ್ದರು ಎಂದು ಕಾಂಚನ್ ಅವರು ಕಣ್ಣೀರು ಹಾಕಿದರು.

ಅನೇಕ ರಾತ್ರಿಗಳನ್ನು ಕಣ್ಣೀರಾಕುತ್ತಾ ಕಳೆದಿದ್ದೇವೆ

ಮಾತು ಮುಂದುವರಿಸಿದ ಕಾಂಚನ್​, ವಿಪಿನ್ ಮತ್ತು ರೋಹಿತ್ ಆಗಾಗ ತಡರಾತ್ರಿಯವರೆಗೆ ಹೊರಗೆ ಇರುತ್ತಿದ್ದರು ಮತ್ತು ಹೆಂಡತಿಯರ ಕರೆಗಳನ್ನು ಸ್ವೀಕರಿಸುತ್ತಿರಲಿಲ್ಲ. ಎಲ್ಲಿದ್ದೀರಿ ಎಂದು ಕೇಳಿದರೆ ಏನಾದರೂ ನೆಪ ಹೇಳುತ್ತಿದ್ದರು. ಅವರಿಬ್ಬರು ಇತರ ಮಹಿಳೆಯರೊಂದಿಗೆ ಸಮಯ ಕಳೆಯುತ್ತಿದ್ದರು. ಈ ಬಗ್ಗೆ ನಾವು ಪ್ರಶ್ನೆ ಮಾಡಿದಾಗ ನಮ್ಮ ಮೇಲೆ ಹಲ್ಲೆ ಮಾಡುತ್ತಿದ್ದರು. ಅನೇಕ ರಾತ್ರಿಗಳನ್ನು ನಾವು ಕಣ್ಣೀರಾಕುತ್ತಾ ಕಳೆದಿದ್ದೇವೆ. ಈಗ ಏನೂ ಉಳಿದಿಲ್ಲ, ನನ್ನ ತಂಗಿ ಮೃತಪಟ್ಟಿದ್ದಾಳೆ. ಅವಳು ನನಗಿಂತ ಸುಮಾರು ಎರಡು-ಮೂರು ವರ್ಷ ಚಿಕ್ಕವಳು, ಆದರೆ, ಜನರು ನಾವು ಅವಳಿ ಮಕ್ಕಳೆಂದು ಭಾವಿಸಿದ್ದರು ಎಂದು ಕಾಂಚನ್ ಹೇಳಿದರು.

ಈ ವಿಡಿಯೋವನ್ನು ಚಿತ್ರೀಕರಿಸದೇ ಇದ್ದಿದ್ದರೆ....

ಇನ್ನು ಸಹೋದರಿಯರು ಮೇಕಪ್ ಸ್ಟುಡಿಯೋ ನಡೆಸುತ್ತಿದ್ದರು. ಆದರೆ, ಅತ್ತೆ-ಮಾವಂದಿರಿಗೆ ಇದು ಇಷ್ಟವಾಗಲಿಲ್ಲ. ನಾವು ಸಂಪಾದಿಸಿದ ಎಲ್ಲ ಹಣವನ್ನು ನಮ್ಮಿಂದು ಕಸಿದುಕೊಳ್ಳುತ್ತಿದ್ದರು. ಒಂದು ವೇಳೆ ನಾನು ಈ ವಿಡಿಯೋವನ್ನು ಚಿತ್ರೀಕರಿಸದೇ ಇದ್ದಿದ್ದರೆ, ನನ್ನ ಸಹೋದರಿ ಹೇಗೆ ಸತ್ತಳು ಎಂದು ಯಾರಿಗೂ ತಿಳಿಯುತ್ತಿರಲಿಲ್ಲ. ನಾನು ನೀರು ಸುರಿದೆ, ಅವಳನ್ನು ಉಳಿಸಲು ಪ್ರಯತ್ನಿಸಿದೆ, ಆದರೆ, ಮಧ್ಯದಲ್ಲಿ ನಾನು ಮೂರ್ಛೆ ಹೋದೆ ಎಂದು ಕಾಂಚನ್​ ಹೇಳಿದರು.

ಇನ್ನು ಈ ಭೀಕರ ಘಟನೆಯ ಬಗ್ಗೆ ಮೃತ ನಿಕ್ಕಿಯ ಪುತ್ರ ಮಾತನಾಡಿದ್ದು, ನನ್ನ ತಂದೆ ಮತ್ತು ಅಜ್ಜಿ ನನ್ನ ತಾಯಿಗೆ ಕಪಾಳಮೋಕ್ಷ ಮಾಡಿ, ಆಕೆಯ ಮೇಲೆ ಒಂದು ವಸ್ತುವನ್ನು ಸುರಿದು, ಲೈಟರ್​ನಿಂದ ಬೆಂಕಿ ಹಚ್ಚಿದರು ಎಂದು ಹೇಳಿದ್ದಾನೆ. ಈ ವೇಳೆ ಮಾಧ್ಯಮದ ಯಾರೋ ಒಬ್ಬರು ನಿನ್ನ ತಂದೆಯೇ ತಾಯಿಯನ್ನು ಕೊಲೆ ಮಾಡಿದ್ದಾರಾ ಎಂದು ಕೇಳಿದಾಗ ಆ ಪುಟ್ಟ ಮಗು ತಲೆಯಾಡಿಸಿತು. ಈ ಭಯಾನಕ ಘಟನೆಯ ಎರಡು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಒಂದು ವಿಡಿಯೋದಲ್ಲಿ, ಪತಿ ಮತ್ತು ಅತ್ತೆ ಸಂತ್ರಸ್ತೆಯ ಮೇಲೆ ಹಲ್ಲೆ ಮಾಡಿ ಆಕೆಯ ಕೂದಲನ್ನು ಹಿಡಿದು ಮನೆಯಿಂದ ಹೊರಗೆ ಎಳೆದುಕೊಂಡು ಹೋಗುವುದನ್ನು ಕಾಣಬಹುದು. ಇನ್ನೊಂದು ವಿಡಿಯೋದಲ್ಲಿ ಮಹಿಳೆ ಬೆಂಕಿ ಹಚ್ಚಿದ ನಂತರ ಮೆಟ್ಟಿಲುಗಳ ಕೆಳಗೆ ಇಳಿಯುವುದನ್ನು ಕಾಣಬಹುದು.

ನಿಕ್ಕಿಯ ಅಕ್ಕ ಕಾಂಚನ್ ನೀಡಿದ ದೂರಿನ ಪ್ರಕಾರ, ಪೊಲೀಸರು ವಿಪಿನ್ (ಪತಿ), ರೋಹಿತ್ (ಅಳಿಯ), ದಯಾ (ಅತ್ತೆ) ಮತ್ತು ಸತ್ವೀರ್ (ಮಾವ) ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ವಿಪಿನ್ ಬಂಧನವನ್ನು ಗ್ರೇಟರ್ ನೋಯ್ಡಾದ ಎಡಿಸಿಪಿ ಸುಧೀರ್ ಕುಮಾರ್ ದೃಢಪಡಿಸಿದ್ದಾರೆ. ಆಗಸ್ಟ್ 21 ರ ರಾತ್ರಿ, ಫೋರ್ಟಿಸ್ ಆಸ್ಪತ್ರೆಯಿಂದ ಸುಟ್ಟ ಗಾಯಗಳೊಂದಿಗೆ ಮಹಿಳೆಯೊಬ್ಬರು ದಾಖಲಾಗಿದ್ದಾರೆ ಎಂದು ಮೆಮೊ ಬಂದಿತ್ತು. ನಂತರ ಅವರನ್ನು ಸಫ್ದರ್ಜಂಗ್‌ಗೆ ಕಳುಹಿಸಲಾಯಿತು ಆದರೆ ದಾರಿಯಲ್ಲಿಯೇ ಮೃತಪಟ್ಟರು. ಆಕೆಯ ಸಹೋದರಿಯ ದೂರಿನ ಆಧಾರದ ಮೇಲೆ, ನಾಲ್ವರು ಕುಟುಂಬ ಸದಸ್ಯರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಪತಿಯನ್ನು ಬಂಧಿಸಲಾಗಿದೆ ಮತ್ತು ಉಳಿದವರನ್ನು ಬಂಧಿಸಲು ತಂಡಗಳನ್ನು ರಚಿಸಲಾಗಿದೆ ಎಂದು ಹೇಳಿದ್ದಾರೆ.

ಈ ಘಟನೆಯು ಸ್ಥಳೀಯವಾಗಿ ಭಾರಿ ಆಕ್ರೋಶವನ್ನು ಹುಟ್ಟುಹಾಕಿದ್ದು, ಕುಟುಂಬ ಸದಸ್ಯರು ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net