

ಕುಷ್ಟಗಿ (ಕೊಪ್ಪಳ): ಜಗತ್ತಿನ ಎಲ್ಲ ರಾಷ್ಟ್ರಗಳಲ್ಲಿಯೂ ಈಗ ಎಲ್ಲಿ ನೋಡಿದರೂ ಕರೊನಾದ್ದೇ ಮಾತು. ಆದರೆ ಇಲ್ಲೊಂದು ಮನೆಯಲ್ಲಿ ಮಾತ್ರ ಅದರ ಬಗೆಗಿನ ಚಿಂತೆಗಿಂತ ತಮ್ಮ ಸೊಸೆ ವರದಕ್ಷಿಣೆ ತರಲಿಲ್ಲ ಎಂಬುದರದ್ದೇ ಚಿಂತೆ.
ಇಲ್ಲಿನ ನಿವಾಸಿ ನಿಂಗಮ್ಮ(20) ಸುಟ್ಟಗಾಯಗಳಿಂದ ಮೃತಪಟ್ಟಿದ್ದಾಳೆ. ಆಕೆಯ ತಂದೆ ಪರಸಾಪುರ ಗ್ರಾಮದ ಸಂಗನಗೌಡ ಬುಧವಾರ ಪೊಲೀಸರಿಗೆ ದೂರು ನೀಡಿದ್ದು, ‘‘ವರದಕ್ಷಿಣೆ ತರುವಂತೆ ಪೀಡಿಸಿ, ಕೊಲೆ ಮಾಡಲಾಗಿದೆ’’ ಎಂದು ತಿಳಿಸಿದ್ದಾರೆ. ಒಟ್ಟು ಆರು ಜನರ ವಿರುದ್ಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೃತಳ ಪತಿ ಹಿರೇನಂದಿಹಾಳ ಗ್ರಾಮದ ಚಂದಪ್ಪ, ಮಾವ ಬಸವರಾಜ ಹಾಗೂ ಅತ್ತೆ ಹನುಮವ್ವರನ್ನು ಪೊಲೀಸರು ಬಂಧಿಸಿದ್ದಾರೆ. ಉಳಿದ ಮೂವರಿಗಾಗಿ ಹುಡುಕುತ್ತಿದ್ದಾರೆ.
ನಡೆದದ್ದೇನು?:
ಮೂರು ತಿಂಗಳ ಹಿಂದೆಯಷ್ಟೆ ಹಿರೇನಂದಿಹಾಳ ಗ್ರಾಮದ ಹುಚ್ಚೀರೇಶ್ವರ ದೇವಸ್ಥಾನದಲ್ಲಿ ಜರುಗಿದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಹಿರೇನಂದಿಹಾಳ ಗ್ರಾಮದ ಚಂದಪ್ಪ ಮತ್ತು ಪರಸಾಪುರ ಗ್ರಾಮದ ನಿಂಗಮ್ಮ ಅವರ ವಿವಾಹವಾಗಿತ್ತು. ಮದುವೆಯಾದ ನಂತರ ಗಂಡನ ಮನೆಯವರು ವರದಕ್ಷ್ಷಿಣೆಗಾಗಿ ನಿಂಗಮ್ಮಳನ್ನು ಪೀಡಿಸುತ್ತಿದ್ದರು ಎನ್ನಲಾಗಿದೆ. ವಿಷಯ ತಿಳಿದ ಆಕೆಯ ತವರು ಮನೆಯವರು ಗ್ರಾಮದ ಹಿರಿಯರಿಂದ ಬುದ್ಧಿ ಹೇಳಿಸಿದ್ದರು. ಇದ್ಯಾವುದೂ ಪ್ರಯೋಜನಕ್ಕೆ ಬರಲಿಲ್ಲ. ‘‘ಕೊನೆಗೂ ನನ್ನ ಮಗಳನ್ನು ಕೊಲೆ ಮಾಡಿಯೇ ಬಿಟ್ಟರು’’ ಎಂದು ಮೃತಳ ತಂದೆ ಸಂಗನಗೌಡ ದೂರಿನಲ್ಲಿ ಆರೋಪಿಸಿದ್ದಾರೆ.