

ಲಖನೌ: ವರದಕ್ಷಿಣೆ ಕೇಳುವುದು ಮತ್ತು ಕೊಡುವುದು ಎರಡೂ ಅಪರಾಧವೆನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೂ ಅಲ್ಲೊಂದು ಇಲ್ಲೊಂದು ವರದಕ್ಷಿಣೆ ಪ್ರಕರಣಗಳು ದಾಖಲಾಗುತ್ತಲೇ ಇರುತ್ತವೆ. ಅದೇ ರೀತಿ ಬುಲೆಟ್ ಬೈಕೇ ವರದಕ್ಷಿಣೆಯಾಗಿ ಬೇಕೆಂದು ಹಠ ಹಿಡಿದ ಅಳಿಮಯ್ಯನಿಗೆ ಗ್ರಾಮಸ್ಥರೆಲ್ಲ ಸೇರಿ ಹುಚ್ಚು ಬಿಡಿಸಿರುವ ಘಟನೆ ಉತ್ತರ ಪ್ರದೇಶದ ಅಮೇತಿ ಜಿಲ್ಲೆಯಲ್ಲಿ ನಡೆದಿದೆ.
ಆ ಹೆಣ್ಣು ಮಗಳಿಗೆ ಮೇ 17ಕ್ಕೆ ಮೊಹಮದ್ ಅಮೀರ್ ಹೆಸರಿನ ಯುವಕನೊಂದಿಗೆ ಮದುವೆ ನಿಶ್ಚಯವಾಗಿತ್ತು. ಸಂಭ್ರಮದಿಂದ ಮದುವೆ ಏರ್ಪಾಟು ಮಾಡಲಾಗಿತ್ತು. ವರದಕ್ಷಿಣೆಯಾಗಿ ವೈಕ್ ಕೇಳಿದ್ದ ವರನ ಕುಟುಂಬಕ್ಕೆ ವಧುವಿನ ಕುಟುಂಬ ಬೈಕ್ ಕೊಡುವ ಸಿದ್ಧತೆಯಲ್ಲಿತ್ತು. ಆದರೆ ಮದುವೆ ಊಟದಲ್ಲಿ ಕುಳಿತ ವರ ಹೊಸ ವರಸೆ ತೆಗೆದಿದ್ದಾನೆ. ನನಗೆ ಮಾಮೂಲಿ ಬೈಕ್ ಬೇಡ, ಬುಲೆಟ್ ಬೈಕೇ ಬೇಕೆಂದಿದ್ದಾನೆ. ಅದಕ್ಕೆ ಒಪ್ಪಿದ ವಧುವಿನ ಕುಟುಂಬ 2 ಲಕ್ಷ ರೂಪಾಯಿಯ ಚೆಕ್ ಅನ್ನೂ ಕೊಟ್ಟಿದೆ.
ಆದರೆ ಚೆಕ್ ನೋಡಿ ಸಿಟ್ಟಿಗೆದ್ದ ವರ ಮತ್ತು ಆತನ ತಂದೆ ಚೆಕ್ ಅನ್ನು ಅಲ್ಲಿಯೇ ಹರಿದೆಸೆದಿದ್ದಾರೆ. ಈಗಲೇ ಬುಲೆಟ್ ತಂದು ನಿಲ್ಲಿಸಿ ಎಂದು ಹಠ ಹಿಡಿದಿದ್ದಾರೆ. ಇದರಿಂದಾಗಿ ತಾಳ್ಮೆ ಕಳೆದುಕೊಂಡ ವಧುವಿನ ಕುಟುಂಬ ಮತ್ತು ಗ್ರಾಮಸ್ಥರು, ವರ ಹಾಗೂ ಆತನ ತಂದೆಗೆ ಸರಿಯಾಗಿ ಬಾರಿಸಿದ್ದಾರೆ. ಅವರಿಬ್ಬರನ್ನು ಕೂಡಿ ಹಾಕಿ ಪೊಲೀಸರಿಗೆ ಕರೆ ಮಾಡಿ ವಿಚಾರ ತಿಳಿಸಿದ್ದಾರೆ.
ಸ್ಥಳಕ್ಕೆ ಬಂದ ಪೊಲೀಸರು ವರ, ಆತನ ತಂದೆ ಸೇರಿ ಏಳು ಜನರ ಮೇಲೆ ವರದಕ್ಷಿಣೆ ಕೇಸ್ ದಾಖಲಿಸಿಕೊಂಡಿದೆ. ವರದಕ್ಷಿಣೆ ಭೂತವಾಗಿರುವ ಮನೆಗೆ ತಾನು ಸೊಸೆಯಾಗಿ ಹೋಗುವುದಿಲ್ಲವೆಂದು ವಧು ತನ್ನ ಮನೆಯಲ್ಲೇ ಉಳಿದಿರುವುದಾಗಿ ಹೇಳಲಾಗಿದೆ. (ಏಜೆನ್ಸೀಸ್)