

ಬೆಂಗಳೂರು: ಇಂದು ಬೆಳಗ್ಗೆ 11.58ರ ಹೊತ್ತಿಗೆ ಮತ್ತು ಮಧ್ಯಾಹ್ನ 12.12ರ ಹೊತ್ತಿಗೆ ಎರಡೆರಡು ಬಾರಿ ರಾಜ್ಯದ ಬಹುತೇಕರ ಮೊಬೈಲ್ಗೆ ಬೀಪ್ ಸೌಂಡ್ ಜತೆಯಲ್ಲಿ ಎಚ್ಚರಿಕೆ ಸಂದೇಶವೊಂದು ಬಂದಿದೆ. ಇದರ ಬಗ್ಗೆ ಯಾರಿಗೆ ಮೊದಲೇ ಅರಿವು ಇರಲಿಲ್ಲವೋ ಅವರು ಒಮ್ಮೆ ಗಾಬರಿಯಾಗಿರುವುದಂತೂ ಸತ್ಯ. ಆದರೆ, ಗಾಬರಿ ಪಡುವ ಅವಶ್ಯಕತೆ ಇಲ್ಲ. ಈ ಅಲರ್ಟ್ ಮೆಸೇಜ್ ಯಾಕೆ ಬಂತು ಎಂಬುದನ್ನು ನಾವೀಗ ತಿಳಿದುಕೊಳ್ಳೋಣ.
ಅಲರ್ಟ್ ಮೆಸೇಜ್ನಲ್ಲಿ ಏನಿದೆ?
ಇದು ಭಾರತ ಸರ್ಕಾರದ ದೂರಸಂಪರ್ಕ ಇಲಾಖೆಯಿಂದ ಸೆಲ್ ಬ್ರಾಡ್ ಕಾಸ್ಟಿಂಗ್ ಸಿಸ್ಟಮ್ ಮೂಲಕ ಕಳುಹಿಸಲಾದ ಮಾದರಿ ಪರೀಕ್ಷಾ ಸಂದೇಶವಾಗಿದೆ. ನಿಮ್ಮ ಕಡೆಯಿಂದ ಯಾವುದೇ ಕ್ರಿಯೆಯ ಅಗತ್ಯವಿಲ್ಲದ ಕಾರಣ ದಯವಿಟ್ಟು ಈ ಸಂದೇಶವನ್ನು ನಿರ್ಲಕ್ಷಿಸಿ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ಜಾರಿಗೊಳಿಸುತ್ತಿರುವ ಪ್ಯಾನ್-ಇಂಡಿಯಾ ತುರ್ತು ಎಚ್ಚರಿಕೆ ವ್ಯವಸ್ಥೆಯನ್ನು ಪರೀಕ್ಷಿಸಲು ಈ ಸಂದೇಶವನ್ನು ಕಳುಹಿಸಲಾಗಿದೆ. ಇದು ಸಾರ್ವಜನಿಕ ಸುರಕ್ಷತೆಯನ್ನು ಹೆಚ್ಚಿಸಲು ಮತ್ತು ತುರ್ತು ಸಂದರ್ಭಗಳಲ್ಲಿ ಸಕಾಲಿಕ ಎಚ್ಚರಿಕೆಗಳನ್ನು ಒದಗಿಸುವ ಗುರಿಯನ್ನು ಹೊಂದಿದೆ ಎಂದು ಸಂದೇಶ ಮೆಸೇಜ್ನಲ್ಲಿದೆ.
ಮೊದಲೇ ಎಚ್ಚರಿಕೆ ಕೊಡಲಾಗಿತ್ತು
ಈ ಅಲರ್ಟ್ ಮೆಸೇಜ್ ಈ ಬಗ್ಗೆ ಕೇಂದ್ರ ಸರ್ಕಾರದ ದೂರಸಂಪರ್ಕ ಇಲಾಖೆ ಮೊದಲೇ ಸ್ಪಷ್ಟನೆ ನೀಡಿತ್ತು. ಇದು ರಾಷ್ಟ್ರೀಯ ವಿಪತ್ತು ನಿರ್ವಹಣ ಪ್ರಾಧಿಕಾರದ ಸಹಯೋಗದಲ್ಲಿ ನಡೆದ ಸೆಲ್ ಬ್ರಾಡ್‌ಕಾಸ್ಟ್ ಅಲರ್ಟ್ ಸಿಸ್ಟಮ್ ಪರೀಕ್ಷೆಯಾಗಿದೆ. ಅ. 12ರಂದು ಕರ್ನಾಟಕದಾದ್ಯಂತ ನಡೆಸುವುದಾಗಿ ರಾಜ್ಯದ ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಪತ್ರಿಕಾ ಪ್ರಕಟಣೆಯಲ್ಲಿ ಅ.10ರಂದು ತಿಳಿಸಿತ್ತು. ಮೊಬೈಲ್ಗೆ ತುರ್ತು ಎಚ್ಚರಿಕೆಯ ಸಂದೇಶ ಬರಲಿದೆ. ಹೀಗಾಗಿ ಯಾರೂ ಗಾಬರಿ ಪಡಬೇಕಿಲ್ಲ. ಇದು ಸರ್ಕಾರದ ವತಿಯಿಂದಲೇ ನಡೆಯುತ್ತಿರುವ ಪರೀಕ್ಷೆಯಾಗಿದೆ ಎಂದು ಹೇಳಿತ್ತು.
ಏನಿದು ಸೆಲ್ ಬ್ರಾಡ್‌ಕಾಸ್ಟ್ ಅಲರ್ಟ್ ಸಿಸ್ಟಮ್?
ಪ್ರಾಕೃತಿಕ ವಿಕೋಪದ ಸಂದರ್ಭದಲ್ಲಿ ನಮ್ಮ ನಾಗರಿಕರ ಅಮೂಲ್ಯವಾದ ಪ್ರಾಣವನ್ನು ಉಳಿಸಲು ತುರ್ತು ಸಂವಹನ ಅಭಿವೃದ್ಧಿಗಾಗಿ ಈ ಸೆಲ್ ಬ್ರಾಡ್‌ಕಾಸ್ಟ್ ಅಲರ್ಟ್ ಸಿಸ್ಟಮ್ ಪರೀಕ್ಷೆಯನ್ನು ನಡೆಸಲಾಗುತ್ತಿದೆ. ಭಾರತದ ನಾಗರಿಕರು ಮತ್ತು ಸಮುದಾಯಗಳ ಸುರಕ್ಷತೆಗೆ ಪ್ರತಿ ಟೆಲಿಕಾಂ ಸೇವಾ ಪೂರೈಕೆದಾರರ ಮೇಲೆ ಸೆಲ್ ಬ್ರಾಡ್‌ಕಾಸ್ಟ್ ಅಲರ್ಟ್ ಸಿಸ್ಟಮ್‌ನ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಇದು ನಮ್ಮ ಬದ್ಧತೆಯೂ ಹೌದು ಎಂದು ದೂರಸಂಪರ್ಕ ಇಲಾಖೆ ತಿಳಿಸಿದೆ.
ಪ್ರಾಕೃತಿಕ ವಿಕೋಪಗಳ ಬಗ್ಗೆ ತುರ್ತು ಸಂದೇಶ
ವಿವಿಧ ಮೊಬೈಲ್ ಆಪರೇಟರ್‌ಗಳು ಮತ್ತು ಸೆಲ್ ಬ್ರಾಡ್‌ಕಾಸ್ಟ್ ಸಿಸ್ಟಮ್‌ಗಳ ತುರ್ತು ಎಚ್ಚರಿಕೆ ಪ್ರಸಾರದ ದಕ್ಷತೆ ಮತ್ತು ಪರಿಣಾಮಕಾರಿತ್ವವನ್ನು ಅಳೆಯಲು ಈ ಪರೀಕ್ಷೆಗಳನ್ನು ಕಾಲಕಾಲಕ್ಕೆ ದೇಶದಾದ್ಯಂತ ವಿವಿಧ ಪ್ರದೇಶಗಳಲ್ಲಿ ನಡೆಸಲಾಗುತ್ತದೆ. ಸೆಲ್ ಬ್ರಾಡ್‌ಕಾಸ್ಟ್ ಅಲರ್ಟ್ ಸಿಸ್ಟಮ್ ಅತ್ಯಾಧುನಿಕ ತಂತ್ರಜ್ಞಾನವಾಗಿದ್ದು, ಸಂದೇಶ ಸ್ವೀಕರಿಸುವವರು ನಿವಾಸಿಗಳು ಅಥವಾ ಪ್ರವಾಸಿಗರು ಎಂಬುದನ್ನು ಲೆಕ್ಕಿಸದೆ, ಗೊತ್ತುಪಡಿಸಿದ ಭೌಗೋಳಿಕ ಪ್ರದೇಶದ ಎಲ್ಲ ಮೊಬೈಲ್ ಸಾಧನಗಳಿಗೆ ವಿಪತ್ತು ನಿರ್ವಹಣೆಗಾಗಿ ನಿರ್ಣಾಯಕ ಮತ್ತು ಸಮಯ-ಸೂಕ್ಷ್ಮ ಸಂದೇಶಗಳನ್ನು ಕಳುಹಿಸಲು ಅನುಮತಿ ನೀಡುತ್ತದೆ. ಪ್ರಮುಖ ತುರ್ತು ಮಾಹಿತಿಯು ಸರಿಯಾದ ಸಮಯಕ್ಕೆ ಅನೇಕ ಜನರನ್ನು ತಲುಪುವುದನ್ನು ಈ ಸಿಸ್ಟಮ್ ಖಚಿತಪಡಿಸಲಿದೆ. ಸಂಭಾವ್ಯ ಬೆದರಿಕೆಗಳ ನಿರ್ಣಾಯಕ ಸಂದರ್ಭಗಳಲ್ಲಿ ಸಾರ್ವಜನಿಕರಿಗೆ ತಿಳಿಸಲು ಸರ್ಕಾರಿ ಏಜೆನ್ಸಿಗಳು ಮತ್ತು ತುರ್ತು ಸೇವೆಗಳು ಇದನ್ನು ಬಳಸುತ್ತವೆ. ಸುನಾಮಿ, ದಿಢೀರ್ ಪ್ರವಾಹ, ಭೂಕಂಪನಗಳು ಮುಂತಾದ ಗಂಭೀರ ಸ್ವರೂಪದ ಹವಾಮಾನ ಎಚ್ಚರಿಕೆ ಸಂದೇಶಗಳನ್ನು ಕಳುಹಿಸಲು ಸೆಲ್ ಬ್ರಾಡ್‌ಕಾಸ್ಟ್ ಅನ್ನು ಸಾಮಾನ್ಯವಾಗಿ ಬಳಸಲಾಗುತ್ತದೆ. ಎಚ್ಚರಿಕೆ ಸಂದೇಶದಲ್ಲಿ ಸಾರ್ವಜನಿಕ ಸುರಕ್ಷತಾ ಕ್ರಮಗಳು, ಸ್ಥಳಾಂತರದ ಸೂಚನೆ ಮತ್ತು ಇತರೆ ಮಹತ್ವದ ಮಾಹಿತಿಗಳು ಇರಲಿವೆ.
ಪರೀಕ್ಷಾ ಹಂತದಲ್ಲಿ ಅನೇಕ ಜನರು ತಮ್ಮ ಮೊಬೈಲ್ ಸಾಧನಗಳಲ್ಲಿ ಈ ತುರ್ತು ಎಚ್ಚರಿಕೆ ಸಂದೇಶಗಳನ್ನು ಪಡೆಯಬಹುದು. ಈ ಎಚ್ಚರಿಕೆಗಳು ಕೇವಲ ಪರೀಕ್ಷಾ ಪ್ರಕ್ರಿಯೆಯ ಭಾಗವಾಗಿದೆ ಹೊರತು ನಿಜವಾದ ತುರ್ತು ಪರಿಸ್ಥಿತಿಯನ್ನು ಸೂಚಿಸುವುದಿಲ್ಲ. ಈ ಬಗ್ಗೆ ಮೆಸೇಜ್ನಲ್ಲೇ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ ಎಂದು ದೂರ ಸಂಪರ್ಕ ಇಲಾಖೆ ತನ್ನ ಮೆಸೇಜ್ನಲ್ಲಿ ತಿಳಿಸಿದೆ.