More

    ಹಮಾಸ್​ ಉಗ್ರರಿಗೆ ಪಾಕ್​ ಗೆಲುವು, ಶತಕ ಅರ್ಪಿಸಿದ ರಿಜ್ವಾನ್​ಗೆ ನೆಟ್ಟಿಗರ ಕ್ಲಾಸ್​: ಸಾಧ್ಯವಾದ್ರೆ ಗೋಧಿ ಕೊಡಪ್ಪಾ ಎಂದು ಸವಾಲು

    ಹೈದರಾಬಾದ್​​: ಅ. 10ರಂದು ಶ್ರೀಲಂಕಾ ವಿರುದ್ಧ ಹೈದರಾಬಾದ್​ನಲ್ಲಿ ನಡೆದ ಪಂದ್ಯದಲ್ಲಿ ಪಾಕಿಸ್ತಾನ ಅದ್ಭುತ ಗೆಲುವು ದಾಖಲಿಸಿತು. ಈ ಪಂದ್ಯದಲ್ಲಿ ಪಾಕ್​ ಪರ ಮೊಹಮದ್​ ರಿಜ್ವಾನ್ (131* ರನ್​, 121 ಎಸೆತ, 8 ಬೌಂಡರಿ, 3 ಸಿಕ್ಸರ್​) ಮತ್ತು ಅಬ್ದುಲ್ಲಾ ಶಫೀಕ್​ (113 ರನ್​, 103 ಎಸೆತ, 10 ಬೌಂಡರಿ, 3 ಸಿಕ್ಸರ್​) ಶತಕ ಸಿಡಿಸಿ ಸಂಭ್ರಮಿಸಿದರು. ಪಂದ್ಯದ ಬೆನ್ನಲ್ಲೇ ಶತಕ ಮತ್ತು ಪಾಕ್​ ಗೆಲುವನ್ನು ಹಮಾಸ್​ ಉಗ್ರರರಿಗೆ ಅರ್ಪಿಸಿದ ರಿಜ್ವಾನ್​ ಅವರನ್ನು ಇದೀಗ ನೆಟ್ಟಿಗರು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.

    ಗೆಲುವು ನಿಮಗೆ ಅರ್ಪಣೆ
    ಈ ಗೆಲುವು ಮತ್ತು ಶತಕ ಗಾಜಾದಲ್ಲಿರುವ ನಮ್ಮ ಸಹೋದರ ಮತ್ತು ಸಹೋದರಿಯರಿಗೆ. ಗೆಲುವನ್ನು ನಿಮಗೆ ಅರ್ಪಿಸಲು ತುಂಬಾ ಸಂತೋಷವಾಗುತ್ತದೆ. ಇಡೀ ತಂಡಕ್ಕೆ ಅದರಲ್ಲೂ ಗೆಲುವನ್ನು ತುಂಬಾ ಸುಲಭಗೊಳಿಸಿದ ಅಬ್ದುಲ್​ ಶಫೀಕ್​ ಮತ್ತು ಹಸನ್​ ಅಲಿಗೆ ಈ ಕ್ರೆಡಿಟ್​ ಸಲ್ಲುತ್ತದೆ. ಅದ್ಭುತ ಸತ್ಕಾರ ಮತ್ತು ಬೆಂಬಲ ನೀಡಿದ ಹೈದರಾಬಾದ್​ ಜನತೆಗೆ ಅತ್ಯಂತ ಕೃತಜ್ಞರಾಗಿರುತ್ತೇವೆ ಎಂದು ರಿಜ್ವಾನ್​ ಎಕ್ಸ್​ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

    ರಕ್ತಪಾತ ಸೃಷ್ಟಿಸಿರುವ ಹಮಾಸ್​
    ಈ ಟ್ವೀಟ್​ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದ್ದಂತೆ ರಿಜ್ವಾನ್​ರನ್ನು ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ. ಅ.7ರ ಶನಿವಾರದಂದು ಮುಂಜಾನೆ ಗಾಜಾ ಪಟ್ಟಿಯಿಂದ ಇಸ್ರೇಲ್​ ಮೇಲೆ ದಿಢೀರ್​ ದಾಳಿ ಮಾಡಿ, ಯುದ್ಧಕ್ಕೆ ಮುನ್ನುಡಿ ಬರೆದಿರುವ ಹಮಾಸ್​ ಉಗ್ರರು ಇಸ್ರೇಲ್​ನಲ್ಲಿ ರಕ್ತಪಾತ ಸೃಷ್ಟಿಸಿದ್ದಾರೆ. ಶಿಶುಗಳೆಂದು ನೋಡದೆ ಶಿರಚ್ಛೇದ ಮಾಡಿ ಮೃಗೀಯವಾಗಿ ನಡೆದುಕೊಳ್ಳುತ್ತಿದ್ದರೆ. ಭಾರತವೂ ಸೇರಿದಂತೆ ಜಗತ್ತಿನ ಬಹುತೇಕರು ಹಮಾಸ್​ ಉಗ್ರರರ ನಡೆಯನ್ನು ಟೀಕೆ ಮಾಡುತ್ತಿರುವ ಈ ಸಂದರ್ಭದಲ್ಲಿ ಪಾಕ್​ ಕ್ರಿಕೆಟಿಗ ರಿಜ್ವಾನ್​, ಭಾರತದ ನೆಲದಲ್ಲೇ ನಿಂತು ತಮ್ಮ ಗೆಲುವು ಮತ್ತು ಶತಕವನ್ನು ಹಮಾಸ್​ ಉಗ್ರರಿಗೆ ಅರ್ಪಿಸಿರುವುದಲ್ಲದೆ, ಅವರನ್ನು ಪ್ರೀತಿಯ ಸಹೋದರ, ಸಹೋದರಿಯರೇ ಎಂದು ಸಂಭೋದಿಸಿರುವುದು ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ.

    ರಿಜ್ವಾನ್​ಗೆ ನೆಟ್ಟಿಗರ ತರಾಟೆ
    ರಿಜ್ವಾನ್​ ಟ್ವೀಟ್​ಗೆ ಪ್ರತಿಕ್ರಿಯೆ ನೀಡಿರುವ ನೆಟ್ಟಿಗರು ಪಾಕಿಸ್ತಾನ ತಂಡವನ್ನು ವಾಪಸ್​ ಪಾಕಿಸ್ತಾನಕ್ಕೆ ಕಳುಹಿಸಬೇಕು ಎಂದಿದ್ದಾರೆ. ಅಲ್ಲದೆ, ಕ್ರಿಕೆಟ್​ ವಿಶ್ವಕಪ್​ ಟೂರ್ನಿಯನ್ನು ಹಮಾಸ್​ ಉಗ್ರರಿಗೆ ಬೆಂಬಲ ನೀಡುವ ಸಾಧನವಾಗಿ ಮಾಡಿಕೊಳ್ಳಲು ಐಸಿಸಿ ಅನುಮತಿ ನೀಡಬಾರದು ಎಂದು ಆಗ್ರಹಿಸಿದ್ದಾರೆ. ಪ್ರಸ್ತುತ ರಿಜ್ವಾನ್​ ಅವರು ಅಸಂಸ್ಕೃತ ವರ್ತನೆ ಅಥವಾ ರಕ್ತಪಾತವನ್ನು ತೀವ್ರವಾಗಿ ವಿರೋಧಿಸುವ ನೆಲದಲ್ಲಿ ಇದ್ದಾರೆ. ಎಲ್ಲಿಯವರೆಗೆ ಅವರು ಭಾರತದ ನೆಲದಲ್ಲಿ ಇರುತ್ತಾರೋ ಅಲ್ಲಿಯವರೆಗೆ ಅವರು ಈ ನೆಲದ ಭಾವನೆಗಳಿಗೆ ಗೌರವ ಸಲ್ಲಿಸಬೇಕಿದೆ ಎಂದು ನಾಗೇಶ್ವರ ಸದಾಸ್​ ಎಂಬುವರು ರಿಜ್ವಾನ್​ಗೆ ಬುದ್ಧಿ ಹೇಳಿದ್ದಾರೆ. ಹಮಾಸ್ ಅನ್ನು ಭಯೋತ್ಪಾದಕ ಸಂಘಟನೆ ಎಂದು ಪ್ರಧಾನಿ ನರೇಂದ್ರ ಮೋದಿಯವರು ಸ್ಪಷ್ಟವಾಗಿ ಹೇಳಿದ್ದಾರೆ. ಅಲ್ಲದೆ, ಭಾರತ ಇಸ್ರೇಲ್‌ ಪರ ನಿಂತಿರುವುದುನ್ನು ಉಲ್ಲೇಖಿಸಿರುವ ನೆಟ್ಟಿಗ, ಆತ್ಮೀಯ ಬಿಸಿಸಿಐ, ಭಾರತ ಮತ್ತು ಪಾಕ್ ನಡುವಿನ ಪಂದ್ಯದ ಸಮಯದಲ್ಲಿ ಇಸ್ರೇಲ್​ಗೆ ಬೆಂಬಲ ಪ್ರದರ್ಶಿಸಲು ಕಪ್ಪು ಪಟ್ಟಿಗಳನ್ನು ಧರಿಸಲು ನಮ್ಮ ಆಟಗಾರರಿಗೆ ಏಕೆ ಅವಕಾಶ ನೀಡಬಾರದು? ಎಂದು ಪ್ರಶ್ನೆ ಮಾಡಿದ್ದಾರೆ.

    ಜಾಗತಿಕ ಮುಸ್ಲಿಂ ಸಮುದಾಯ ಮತ್ತು ಇಸ್ಲಾಮಿಕ್ ಸಹೋದರತ್ವಕ್ಕಾಗಿ ರಿಜ್ವಾನ್ ಅವರು ಸಂಪೂರ್ಣ ಭಯೋತ್ಪಾದಕರ ಪರವಾಗಿ ನಿಂತಿದ್ದಾರೆ. ಈಗ ಇದನ್ನು ಸಿಎಎ ಬೆಂಬಲಿಸದ ಅಥವಾ ಪಾಕಿಸ್ತಾನ ಮತ್ತು ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ವ್ಯವಸ್ಥಿತ ಜನಾಂಗೀಯ ದೌರ್ಜನ್ಯ ವಿರುದ್ಧ ಒಂದೇ ಒಂದು ಪದವನ್ನು ಎಂದಿಗೂ ಹೇಳದ ಭಾರತೀಯ ‘ಹಿಂದೂ’ ಕ್ರಿಕೆಟಿಗರಿಗೆ ಹೋಲಿಕೆ ಮಾಡಿ ಎಂದು ರುದ್ರ ಹೆಸರಿನ ನೆಟ್ಟಿಗ ಭಾರತದ ಕ್ರಿಕೆಟಿಗರನ್ನು ಟೀಕಿಸಿದ್ದಾರೆ.

    ಕೆಲವು ನೆಟ್ಟಿಗರು ಪಾಕಿಸ್ತಾನ ತಂಡವನ್ನು ವಿಶ್ವಕಪ್​ನಿಂದ ಹೊರಗೆ ಕಳುಹಿಸಲು ಬಯಸಿದ್ದಾರೆ. ರಿಜ್ವಾನ್​ ಅವರು ವೈಯಕ್ತಿಕವಾಗಿ ಗಾಜಾಗೆ ತೆರಳಿ ತಮ್ಮ ಗೆಲುವನ್ನು ಅರ್ಪಿಸಲಿ ಎಂದು ಸವಾಲು ಹಾಕಿದ್ದಾರೆ. ಆದರೆ, ಹಮಾಸ್​ ದಾಳಿಯ ಬಳಿಕ ಶನಿವಾರದಿಂದ, ಹಮಾಸ್ ಅನ್ನು ಸಂಪೂರ್ಣವಾಗಿ ಕಿತ್ತೊಗೆಯುವುದಾಗಿ ಪ್ರತಿಜ್ಞೆ ಮಾಡಿದ ನಂತರ ಇಸ್ರೇಲ್‌ನ ನಿರಂತರ ದಾಳಿಗಳಿಂದಾಗಿ ಇಡೀ ಗಾಜಾ ಕಡು ಹೊಗೆಯಿಂದ ತುಂಬಿದೆ.

    ಮತ್ತೊಬ್ಬ ನೆಟ್ಟಿಗ ಒಂದು ಹೆಜ್ಜೆ ಮುಂದೆ ಹೋಗಿ ಪಾಕಿಸ್ತಾನದ ಕ್ರಿಕೆಟಿಗನನ್ನು ನಿಮ್ಮ ಗಾಜಾ ಮಂದಿಗೆ ನಿಮ್ಮ ಗೋಧಿಯನ್ನು ಅರ್ಪಿಸಿ ಎನ್ನುವ ಮೂಲಕ ಪಾಕಿಸ್ತಾನದ ಆರ್ಥಿಕ ಪರಿಸ್ಥಿತಿಯನ್ನು ಕಾಲೆಳೆದರು. ಕಳೆದ ಕೆಲವು ವರ್ಷಗಳಿಂದ ಪಾಕ್​ನಲ್ಲಿ ಆರ್ಥಿಕ ಪರಿಸ್ಥಿತಿ ತೀರಾ ಹದಗೆಟ್ಟಿದೆ. ಬೆಲೆಗಳು ತೀವ್ರವಾಗಿ ಆಹಾರ ಬಿಕ್ಕಟ್ಟು ಸೃಷ್ಟಿಯಾಗಿದೆ.

    ನಾಡಿದ್ದು ಹೈವೋಲ್ಟೇಜ್​ ಪಂದ್ಯ
    ಕ್ರೀಡಾಲೋಕದ ಸಾಂಪ್ರಾದಾಯಿಕ ಎದುರಾಳಿಗಳ ಕ್ರಿಕೆಟ್​ ಕದನಕ್ಕೆ ಕೇವಲ 2 ದಿನವಷ್ಟೇ ಬಾಕಿ ಇದೆ. ಅ. 14ರಂದು ಗುಜರಾತಿನ ಅಹಮದಾಬಾದ್​ನಲ್ಲಿರುವ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಇಂಡೋ-ಪಾಕ್​ ಕ್ರಿಕೆಟ್​ ಕದನ ನಡೆಯಲಿದೆ. ಈಗಾಗಲೇ ಈ ಪಂದ್ಯದ ಟಿಕೆಟ್​ಗಳು ಸೋಲ್ಡೌಟ್​ ಆಗಿವೆ. ಮೊನ್ನೆ (ಅ.8) ಆಸ್ಟ್ರೇಲಿಯಾ ವಿರುದ್ಧ ನಡೆದ ತಂಡದ ಮೊದಲ ಪಂದ್ಯದಲ್ಲಿ ಗೆದ್ದು ಭಾರತ ಶುಭಾರಂಭ ಕಂಡಿದೆ. ನಿನ್ನೆ ಆಫ್ಘಾನ್​ ವಿರುದ್ಧ ನಡೆದ ಪಂದ್ಯದಲ್ಲೂ ಭಾರತ ಗೆಲುವು ಸಾಧಿಸಿದೆ. ಇದೇ ಹುಮ್ಮಸ್ಸಿನಲ್ಲಿ ಪಾಕ್​ ವಿರುದ್ಧ ಗೆಲುವು ದಾಖಲಿಸಲು ಭಾರತ ತಯಾರಿ ನಡೆಸುತ್ತಿದೆ. (ಏಜೆನ್ಸೀಸ್​)

    ಏಕದಿನ ಪಂದ್ಯವೊಂದರಲ್ಲಿ 4 ಶತಕ; ವಿಶ್ವಕಪ್​ನಲ್ಲಿ ಇದೇ ಮೊದಲು!

    VIDEO| 1996ರ ವಿಶ್ವಕಪ್​ನಲ್ಲಿ ಪಾಕಿಸ್ತಾನದ ವಾಕರ್​ ಯೂನಿಸ್​ಗೆ​ ದುಸ್ವಪ್ನವಾಗಿ ಕಾಡಿದ್ದರು ಅಜಯ್​ ಜಡೇಜಾ!

    ಭಾರತ-ಪಾಕಿಸ್ತಾನ ನಡುವಿನ ವಿಶ್ವಕಪ್​ ಪಂದ್ಯಕ್ಕೆ ಸಾಕ್ಷಿಯಾಗಲಿದೆ ಗಣ್ಯರ ದಂಡು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts