More

    ಕೈಗಾರಿಕಾ ವಲಯವೀಗ ಗಾರ್ಬೆಜ್ ಏರಿಯಾ!


    ಬರಗೇನಹಳ್ಳಿ ಚಿಕ್ಕರಾಜು ದಾಬಸ್‌ಪೇಟೆ
    ಗ್ರಾಮಾಂತರ ಜಿಲ್ಲೆಯಲ್ಲೇ ಪ್ರಮುಖ ಕೈಗಾರಿಕಾ ವಲಯವಾಗಿ ಖ್ಯಾತಿ ಪಡೆದಿರುವ ನೆಲಮಂಗಲ ತಾಲೂಕು ಸೋಂಪುರ ಕೈಗಾರಿಕಾ ಪ್ರದೇಶ ಈಗ ಗಾರ್ಬೆಜ್ ಏರಿಯಾವಾಗಿ ಕುಖ್ಯಾತಿ ಪಡೆಯುವಂತಾಗಿದೆ.
    ಇಲ್ಲಿನ ಮಲ್ಟಿನ್ಯಾಷನಲ್ ಕಂಪನಿಗಳು ಸೇರಿ ತರಹೇವಾರಿ ಕೈಗಾರಿಕೆಗಳಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡದೆ ರಸ್ತೆಗಳ ಇಕ್ಕೆಲಗಳಲ್ಲಿ ಸುರಿಯುತ್ತಿದ್ದು, ಇಡೀ ಕೈಗಾರಿಕಾ ವಲಯ ಗಬ್ಬೆದ್ದು ನಾರುತ್ತಿದೆ. ಇದಲ್ಲದೆ ತ್ಯಾಜ್ಯಕ್ಕೆ ಬೆಂಕಿ ಹಚ್ಚಿ ಕಸವನ್ನು ಕರಗಿಸುವ ಹುನ್ನಾರ ಕೂಡ ನಡೆಯುತ್ತಿದೆ.
    ವಿಷಕಾರಿ ಹೊಗೆ ಆತಂಕ: ಈ ಭಾಗದಲ್ಲಿ ಬಹುತೇಕ ಔಷಧ ತಯಾರಿಕಾ ಕಂಪನಿಗಳು, ವಿವಿಧ ಬಗೆಯ ರಾಸಾಯನಿಕ ತಯಾರಿಕಾ ಕಂಪನಿ, ಬಣ್ಣ ತಯಾರಿಕಾ ಕಂಪನಿಗಳಿದ್ದು, ಇಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವಸ್ತುಗಳನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಬೇಕು. ಆದರೆ ಇಂಥ ಅಪಾಯಕಾರಿ ತ್ಯಾಜ್ಯವನ್ನು ರಸ್ತೆ ಬದಿಗಳಲ್ಲಿ ಎಸೆದು ಬೆಂಕಿ ಹಚ್ಚುವುದರಿಂದ ದಟ್ಟಹೊಗೆಯೊಂದಿಗೆ ವಿಷಾನಿಲ ಪರಿಸರಕ್ಕೆ ಸೇರ್ಪಡೆಯಾಗುತ್ತಿದೆ. ಸುತ್ತಮುತ್ತಲ ಗ್ರಾಮಗಳಿಗೂ ಈ ಘಾಟು ಹರಡುತ್ತಿದ್ದು, ಸಾರ್ವಜನಿಕರು ಆತಂಕಗೊಂಡಿದ್ದಾರೆ.
    ಚರಂಡಿಗೆ ಕಸ: ಸೋಂಪುರದ ಕೈಗಾರಿಕಾ ಪ್ರದೇಶದಲ್ಲಿನ ಹಲವು ಕಂಪನಿಗಳು ತ್ಯಾಜ್ಯವನ್ನು ರಸ್ತೆ ಬದಿಯ ಚರಂಡಿಗಳಿಗೆ ತುಂಬುತ್ತಿರುವುದರಿಂದ ಚರಂಡಿಗಳಲ್ಲಿ ಕಸ ಕಟ್ಟಿಕೊಂಡು ನೀರಿನ ಹರಿವಿಗೂ ತೊಡಕಾಗಿದೆ. ಮಳೆಗಾಲದಲ್ಲಿ ನೀರು ಸರಾಗವಾಗಿ ಹರಿಯದೆ ರಸ್ತೆಯೆಲ್ಲ ಜಲಾವೃತಗೊಳ್ಳುತ್ತದೆ. ಇದರಿಂದ ಈ ಭಾಗದಲ್ಲಿ ವಾಹನ ಸಂಚಾರಕ್ಕೂ ತೊಂದರೆ ಎದುರಾಗುತ್ತಿದೆ ಸಾರ್ವಜನಿಕರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಅಧಿಕಾರಿಗಳ ಮೌನ ಸೋಂಪುರ ಕೈಗಾರಿಕಾವಲಯ ವ್ಯಾಪ್ತಿಯ ಪಂಚಾಯಿತಿ ಅಧಿಕಾರಿಗಳು, ಜನಪ್ರತಿನಿಧಿಗಳು ಈ ಬಗ್ಗೆ ಯಾವುದೇ ಕ್ರಮಕ್ಕೆ ಮುಂದಾಗುವುದಿಲ್ಲ. ಕಣ್ಣೆದುರೆ ತ್ಯಾಜ್ಯದ ರಾಶಿ ಕಂಡರೂ ಜಾಣಕುರುಡು ಪ್ರದರ್ಶಿಸುತ್ತಿದ್ದಾರೆ. ಈ ಬಗ್ಗೆ ಸಾರ್ವಜನಿಕರು ಪ್ರಶ್ನಿಸಿದರೆ ಕಂಪನಿ ಅಧಿಕಾರಿಗಳು ಬೇಜವಾಬ್ದಾರಿ ಉತ್ತರ ನೀಡುತ್ತಾರೆ. ಪರಿಸರ ಇಲಾಖೆಯವರ ಗಮನಕ್ಕೆ ತಂದರೂ ಯಾವುದೇ ಪ್ರಯೋಜವಾಗಿಲ್ಲ ಎಂಬುದು ಸ್ಥಳೀಯ ಆಕ್ರೋಶವಾಗಿದೆ.

    ದುರ್ವಾಸನೆ ರಾಸಾಯನಿಕ ತಯಾರಿಕಾ ಕಂಪನಿಗಳಿಂದ ಕೆಟ್ಟ ವಾಸನೆ ಬರುತ್ತದೆ. ಇದರೊಂದಿಗೆ ತ್ಯಾಜ್ಯದ ದುರ್ವಾಸನೆ ಸೇರಿ ಈ ಭಾಗದಲ್ಲಿ ಸಂಚಾರ ಮಾಡುವುದೇ ದುಸ್ತರ ಎನ್ನುವಂತಾಗಿದೆ. ಈ ಭಾಗದಲ್ಲಿ ಮೂಗು ಮುಚ್ಚಿಕೊಂಡು ಓಡಾಡಬೇಕಿದ್ದು, ಉಸಿರುಗಟ್ಟಿದ ವಾತಾವರಣ ನಿರ್ಮಾಣವಾಗಿದೆ ಎಂಬ ಆರೋಪ ಕೇಳಿಬರುತ್ತಿದೆ.



    ಇಲ್ಲಿನ ಅನೇಕ ಕಾರ್ಖಾನೆಗಳು ಅಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡುವ ಗೋಜಿಗೆ ಹೋಗುತ್ತಿಲ್ಲ. ಎಲ್ಲೆಂದರಲ್ಲಿ ಕಸ ಎಸೆಯಲಾಗುತ್ತಿದೆ. ರಾತ್ರಿ ವೇಳೆ ವಾಹನಗಳಲ್ಲಿ ಮೂಟೆ ಕಟ್ಟಿ ತಂದು ಎಸೆಯುತ್ತಾರೆ. ಜತೆಗೆ ಕಸಕ್ಕೆ ಬೆಂಕಿ ಹಚ್ಚುತ್ತಾರೆ. ಈ ಬಗ್ಗೆ ಸ್ಥಳೀಯ ಪಂಚಾಯಿತಿ ಎಚ್ಚೆತ್ತು ಕ್ರಮ ಕೈಗೊಳ್ಳಬೇಕು.
    ಲೋಕೇಶ್, ಸೋಂಪುರ ಸ್ಥಳೀಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts