More

    VIDEO| 1996ರ ವಿಶ್ವಕಪ್​ನಲ್ಲಿ ಪಾಕಿಸ್ತಾನದ ವಾಕರ್​ ಯೂನಿಸ್​ಗೆ​ ದುಸ್ವಪ್ನವಾಗಿ ಕಾಡಿದ್ದರು ಅಜಯ್​ ಜಡೇಜಾ!

    ನವದೆಹಲಿ: ಕ್ರಿಕೆಟ್​ ಹುಟ್ಟುವಿನಿಂದ ಹಿಡಿದು ಇಂದಿನವರೆಗೂ ಇಂಡೋ-ಪಾಕ್​ ಕದನ ರೋಚಕತೆ ಕಾಯ್ದುಕೊಂಡಿದೆ. ಅದರಲ್ಲೂ ವಿಶ್ವಕಪ್​ ಕದನಗಳ ಬಗ್ಗೆಯಂತೂ ಹೇಳತೀರದು, ಐಸಿಸಿ ಟಿ20 ಮತ್ತು ಏಕದಿನ ವಿಶ್ವಕಪ್ ಟೂರ್ನಿಯ ಇತಿಹಾಸದಲ್ಲಿ ಒಟ್ಟು 14 ಬಾರಿ ಉಭಯ ತಂಡಗಳು ಮುಖಾಮುಖಿಯಾಗಿವೆ. ಗಮನಾರ್ಹ ಸಂಗತಿ ಏನೆಂದರೆ, ಏಕದಿನ ವಿಶ್ವಕಪ್​ನಲ್ಲಿ ಏಳು ಬಾರಿಯೂ ಭಾರತವೇ ವಿಜಯೋತ್ಸವ ಆಚರಿಸಿದೆ. ಟಿ20 ವಿಶ್ವಕಪ್​ನಲ್ಲಿಯೂ 7 ಬಾರಿ ಉಭಯ ತಂಡಗಳು ಸೆಣಸಾಡಿದ್ದು, ಪಾಕಿಸ್ತಾನ 2021ರಲ್ಲಿ ಒಂದು ಬಾರಿ ಗೆಲುವು ದಾಖಲಿಸಿದೆ. ಎರಡು ಮಾದರಿಯಲ್ಲೂ ಭಾರತವೇ ಪಾರುಪತ್ಯ ಸಾಧಿಸಿದೆ. ಇಂಡೋ-ಪಾಕ್​ ಕದನ ಅನೇಕ ರೋಚಕ ಕ್ಷಣಗಳಿಗೆ ಸಾಕ್ಷಿಯಾಗಿದ್ದು, ಅದರಲ್ಲೊಂದು ಘಟನೆಯನ್ನು ನಾವಿಂದು ಮೆಲಕು ಹಾಕೋಣ.

    ಟೀಮ್​ ಇಂಡಿಯಾದ ಮಾಜಿ ಆಟಗಾರ ಅಜಯ್​ ಜಡೇಜಾ ಅವರು ಪಾಕಿಸ್ತಾನ ವಿರುದ್ಧ 1996ರ ಏಕದಿನ ವಿಶ್ವಕಪ್​ ಟೂರ್ನಿಯಲ್ಲಿ ನೀಡಿದ ಸ್ಫೋಟಕ ಪ್ರದರ್ಶನ ಇಂದಿಗೂ ನೆನಪಿನಲ್ಲಿ ಉಳಿಯುವಂತಿದೆ. ಆ ಕಾಲದಲ್ಲಿ ಕ್ರಿಕೆಟ್​ ಜಗತ್ತಿನ ಬಲಿಷ್ಠ ಬೌಲರ್​ ಎನಿಸಿಕೊಂಡಿದ್ದ ವಾಕರ್​ ಯೂನಿಸ್​ಗೆ ಜಡೇಜಾ ಅವರು ಬೆವರಿಳಿಸಿದ ಪರಿಯಂತೂ ಮರೆಯುವಂತಿಲ್ಲ.

    ಇದನ್ನೂ ಓದಿ: ಹಳಿ ತಪ್ಪಿದ ಈಶಾನ್ಯ ಎಕ್ಸ್‌ಪ್ರೆಸ್ : ನಾಲ್ವರು ಸಾವು, ಹಲವರಿಗೆ ಗಾಯ, ಬದಲಾದ ರೈಲು ಮಾರ್ಗಗಳು…ಇಲ್ಲಿದೆ ಸಂಪೂರ್ಣ ಪಟ್ಟಿ

    ಶ್ರೀಲಂಕಾ ಗೆಲುವು
    ವಿವರಣೆಗೆ ಬರುವುದಾರೆ 1996ರ ಏಕದಿನ ವಿಶ್ವಕಪ್​ ಅನ್ನು ಭಾರತ, ಪಾಕಿಸ್ತಾನ ಮತ್ತು ಶ್ರೀಲಂಕಾ ಆಯೋಜಿಸಿತು. ಭಾರತದ 17 ಸ್ಥಳಗಳಲ್ಲಿ 17 ಪಂದ್ಯಗಳು, ಪಾಕಿಸ್ತಾನ 6 ಸ್ಥಳಗಳಲ್ಲಿ 16 ಪಂದ್ಯಗಳು ಮತ್ತು ಶ್ರೀಲಂಕಾದ 3 ಸ್ಥಳಗಳಲ್ಲಿ 4 ಪಂದ್ಯಗಳು ನಡೆದವು. ಈ ಟೂರ್ನಿಯಲ್ಲಿ ಶ್ರೀಲಂಕಾ ಮತ್ತು ಆಸ್ಟ್ರೇಲಿಯಾ ಫೈನಲ್​ ಪ್ರವೇಶಿಸಿದವು. ಅಂತಿಮವಾಗಿ ಗೆಲುವು ಸಾಧಿಸುವ ಮೂಲಕ ಲಂಕಾ ಮೊದಲ ಬಾರಿಗೆ ವಿಶ್ವಕಪ್​ ಟ್ರೋಫಿಗೆ ಮುತ್ತಿಟ್ಟಿತು. ಆದರೆ, ಇಡೀ ಟೂರ್ನಿಯಲ್ಲಿ ಅಜಯ್​ ಜಡೇಜಾ ಅವರ ಇನ್ನಿಂಗ್ಸ್​ ಮಾತ್ರ ಇಂದಿಗೂ ಮನಸ್ಸಿನಲ್ಲಿ ಉಳಿದಿದೆ. ಆ ಕಾಲದಲ್ಲೇ ಅಬ್ಬರದ ಬ್ಯಾಟಿಂಗ್​ ಏನು ಎಂಬುದನ್ನು ಅದೂ ಪಾಕಿಸ್ತಾನದ ವಿರುದ್ಧವೇ ಜಡೇಜಾ ತೋರಿಸಿಕೊಟ್ಟಿದ್ದರು.

    ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕ್ವಾರ್ಟರ್​ ಫೈನಲ್​ನಲ್ಲಿ ಸಾಂಪ್ರದಾಯಿಕ ಎದುರಾಳಿಗಳು ಮುಖಾಮುಖಿಯಾದರು. 1996ರ ಮಾರ್ಚ್​ 9ರಂದು ಈ ಪಂದ್ಯ ನಡೆಯಿತು. ಈ ವೇಳೆ ಇಡೀ ಮೈದಾನ ಕಿಕ್ಕಿರಿದು ತುಂಬಿತ್ತು. ಭಾರತದ ಪ್ರದರ್ಶನ ಕಂಡು ಇಡೀ ಕ್ರೀಡಾಂಗಣವೇ ಹುಚ್ಚೆದ್ದು ಕುಣಿದಿತ್ತು.

    ವಾಕರ್​ ಯೂನಿಸ್​ ಮೇಲೆ ಜಡೇಜಾ ಸವಾರಿ
    ಮೊದಲು ಬ್ಯಾಟ್​ ಮಾಡಿದ ಭಾರತದ ಪರ ಮಧ್ಯಮ ಕ್ರಮಾಂಕದಲ್ಲಿ ಕ್ರೀಸ್​ಗೆ ಇಳಿದಿದ್ದ ಅಜೇಯ್​ ಜಡೇಜಾ ಟಿ20 ಪಂದ್ಯದ ಮಾದರಿಯಲ್ಲಿ ಬ್ಯಾಟ್​ ಬೀಸಿದರು. ಕೇವಲ 25 ಎಸೆತದಲ್ಲಿ 4 ಬೌಂಡರಿ ಹಾಗೂ 2 ಸಿಕ್ಸರ್​ನೊಂದಿಗೆ 45 ರನ್​ ಕಲೆ ಹಾಕಿದರು. 180 ಸ್ಟ್ರೈಕ್​ರೇಟ್​ ಹೊಂದಿದ್ದರು. ಆ ಕಾಲದಲ್ಲಿ ಪಾಕ್​ನ ವಾಕರ್​ ಯೂನಿಸ್​ ಶ್ರೇಷ್ಠ ಬೌಲರ್​ ಆಗಿದ್ದರು. ಅವರು ಬೌಲಿಂಗ್​ಗೆ ಬಂದರೆ ಅನೇಕರು ನಡುಗುತ್ತಿದ್ದರು. ಆದರೆ, ವಾಕರ್​ ಯೂನಿಸ್​ ಅವರ ಒಂದೇ ಓವರ್​ನಲ್ಲಿ ಜಡೇಜಾ ಅವರು 22 ರನ್​ ಬಾರಿಸುವ ಮೂಲಕ ಅವರನ್ನು ಕ್ಲಬ್​ ಬೌಲರ್​ ರೀತಿ ಮಾಡಿಟ್ಟಿದ್ದರು. ಇಂದಿಗೂ ಭಾರತ ಪಾಲಿಗೆ ಇದೊಂದು ಒಳ್ಳೆಯ ಕ್ಷಣವಾಗಿಯೇ ಉಳಿದುಕೊಂಡಿದೆ.

    ಭಾರತಕ್ಕೆ ಅಮೋಘ ಜಯ
    ಜಡೇಜಾ ಅವರ ಅದ್ಭುತ ಬ್ಯಾಟಿಂಗ್​ ನೆರವಿನಿಂದ ಭಾರತ ಈ ಪಂದ್ಯದಲ್ಲಿ 8 ವಿಕೆಟ್​ ನಷ್ಟಕ್ಕೆ 287 ರನ್​ ಕಲೆಹಾಕಿತ್ತು. ಗುರಿ ಬೆನ್ನತ್ತಿದ್ದ ಪಾಕ್​ 9 ವಿಕೆಟ್​ ನಷ್ಟಕ್ಕೆ ಕೇವಲ 248 ರನ್​ ಮಾತ್ರ ಕಲೆಹಾಕುವ ಮೂಲಕ ಭಾರತ ಎದುರು ಪಾಕ್​ ಸೋಲುಂಡಿತು.

    ಮ್ಯಾಚ್​ ಫಿಕ್ಸಿಂಗ್​ ಆರೋಪ
    ಆದರೆ, ಜಡೇಜಾ ಅವರ ವೃತ್ತಿಜೀವನವು 2000ರಲ್ಲಿ ಮ್ಯಾಚ್ ಫಿಕ್ಸಿಂಗ್​ ಆರೋಪದೊಂದಿಗೆ ಅಂತ್ಯವಾಯಿತು. 5 ವರ್ಷಗಳ ಕಾಲ ನಿಷೇಧಕ್ಕೊಳಗಾದ ಬಳಿಕ ಜಡೇಜಾ ಅವರು ಮತ್ತೆ ಭಾರತದ ಪರ ಆಡಲು ಸಾಧ್ಯವಾಗಲಿಲ್ಲ. ವಕಾರ್ ಯೂನಿಸ್​ ಅವರು 2003ರ ವಿಶ್ವಕಪ್ ವರೆಗೆ ತಮ್ಮ ಆಟವನ್ನು ಮುಂದುವರೆಸಿದರು.

    ನಾಡಿದ್ದು ಹೈವೋಲ್ಟೇಜ್​ ಪಂದ್ಯ
    ಕ್ರೀಡಾಲೋಕದ ಸಾಂಪ್ರಾದಾಯಿಕ ಎದುರಾಳಿಗಳ ಕ್ರಿಕೆಟ್​ ಕದನಕ್ಕೆ ಕೇವಲ 2 ದಿನವಷ್ಟೇ ಬಾಕಿ ಇದೆ. ಅ. 14ರಂದು ಗುಜರಾತಿನ ಅಹಮದಾಬಾದ್​ನಲ್ಲಿರುವ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಇಂಡೋ-ಪಾಕ್​ ಕ್ರಿಕೆಟ್​ ಕದನ ನಡೆಯಲಿದೆ. ಈಗಾಗಲೇ ಈ ಪಂದ್ಯದ ಟಿಕೆಟ್​ಗಳು ಸೋಲ್ಡೌಟ್​ ಆಗಿವೆ. ಮೊನ್ನೆ (ಅ.8) ಆಸ್ಟ್ರೇಲಿಯಾ ವಿರುದ್ಧ ನಡೆದ ತಂಡದ ಮೊದಲ ಪಂದ್ಯದಲ್ಲಿ ಗೆದ್ದು ಭಾರತ ಶುಭಾರಂಭ ಕಂಡಿದೆ. ನಿನ್ನೆ ಆಫ್ಘಾನ್​ ವಿರುದ್ಧ ನಡೆದ ಪಂದ್ಯದಲ್ಲೂ ಭಾರತ ಗೆಲುವು ಸಾಧಿಸಿದೆ. ಇದೇ ಹುಮ್ಮಸ್ಸಿನಲ್ಲಿ ಪಾಕ್​ ವಿರುದ್ಧ ಗೆಲುವು ದಾಖಲಿಸಲು ಭಾರತ ತಯಾರಿ ನಡೆಸುತ್ತಿದೆ. (ಏಜೆನ್ಸೀಸ್​)

    ವಿಶ್ವಕಪ್​ನ ಮೊದಲ ಮುಖಾಮುಖಿಯಲ್ಲೇ ಇಂಡೋ-ಪಾಕ್ ಆಟಗಾರರ​ ನಡುವೆ ನಡೆದಿತ್ತು ಮಾತಿನ ಚಕಮಕಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts