More

    ವಿಶ್ವಕಪ್​ನ ಮೊದಲ ಮುಖಾಮುಖಿಯಲ್ಲೇ ಇಂಡೋ-ಪಾಕ್ ಆಟಗಾರರ​ ನಡುವೆ ನಡೆದಿತ್ತು ಮಾತಿನ ಚಕಮಕಿ!

    ಬೆಂಗಳೂರು: ಕ್ರೀಡಾಲೋಕದ ಸಾಂಪ್ರಾದಾಯಿಕ ಎದುರಾಳಿಗಳ ಕ್ರಿಕೆಟ್​ ಕದನಕ್ಕೆ ಕೇವಲ 3 ದಿನವಷ್ಟೇ ಬಾಕಿ ಇದೆ. ಅ. 14ರಂದು ಗುಜರಾತಿನ ಅಹಮದಾಬಾದ್​ನಲ್ಲಿರುವ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಇಂಡೋ-ಪಾಕ್​ ಕ್ರಿಕೆಟ್​ ಕದನ ನಡೆಯಲಿದೆ. ಈಗಾಗಲೇ ಈ ಪಂದ್ಯದ ಟಿಕೆಟ್​ಗಳು ಸೋಲ್ಡೌಟ್​ ಆಗಿವೆ. ಮೊನ್ನೆ (ಅ.8) ಆಸ್ಟ್ರೇಲಿಯಾ ವಿರುದ್ಧ ನಡೆದ ತಂಡದ ಮೊದಲ ಪಂದ್ಯದಲ್ಲಿ ಗೆದ್ದು ಭಾರತ ಶುಭಾರಂಭ ಕಂಡಿದ್ದು, ಇದೇ ಹುಮ್ಮಸ್ಸಿನಲ್ಲಿ ಪಾಕ್​ ವಿರುದ್ಧ ಗೆಲುವು ದಾಖಲಿಸಲು ತಯಾರಿ ನಡೆಸುತ್ತಿದೆ.

    ಕ್ರಿಕೆಟ್​ ಹುಟ್ಟುವಿನಿಂದ ಹಿಡಿದು ಇಂದಿನವರೆಗೂ ಇಂಡೋ-ಪಾಕ್​ ಕದನ ರೋಚಕತೆ ಕಾಯ್ದುಕೊಂಡಿದೆ. ಅದರಲ್ಲೂ ವಿಶ್ವಕಪ್​ ಕದನಗಳ ಬಗ್ಗೆಯಂತೂ ಹೇಳತೀರದು, ಐಸಿಸಿ ಟಿ20 ಮತ್ತು ಏಕದಿನ ವಿಶ್ವಕಪ್ ಟೂರ್ನಿಯ ಇತಿಹಾಸದಲ್ಲಿ ಒಟ್ಟು 14 ಬಾರಿ ಉಭಯ ತಂಡಗಳು ಮುಖಾಮುಖಿಯಾಗಿವೆ. ಗಮನಾರ್ಹ ಸಂಗತಿ ಏನೆಂದರೆ, ಏಕದಿನ ವಿಶ್ವಕಪ್​ನಲ್ಲಿ ಏಳು ಬಾರಿಯೂ ಭಾರತವೇ ವಿಜಯೋತ್ಸವ ಆಚರಿಸಿದೆ. ಟಿ20 ವಿಶ್ವಕಪ್​ನಲ್ಲಿಯೂ 7 ಬಾರಿ ಉಭಯ ತಂಡಗಳು ಸೆಣಸಾಡಿದ್ದು, ಪಾಕಿಸ್ತಾನ 2021ರಲ್ಲಿ ಒಂದು ಬಾರಿ ಗೆಲುವು ದಾಖಲಿಸಿದೆ. ಎರಡು ಮಾದರಿಯಲ್ಲೂ ಭಾರತವೇ ಪಾರುಪತ್ಯ ಸಾಧಿಸಿದೆ. ಇಂಡೋ-ಪಾಕ್​ ಕದನ ಅನೇಕ ರೋಚಕ ಕ್ಷಣಗಳಿಗೆ ಸಾಕ್ಷಿಯಾಗಿದ್ದು, ಅದರಲ್ಲೊಂದು ಘಟನೆಯನ್ನು ನಾವಿಂದು ಮೆಲಕು ಹಾಕೋಣ.

    1992ರ ಮಾರ್ಚ್​ 4ರಂದು ಭಾರತ ಮತ್ತು ಪಾಕಿಸ್ತಾನ ಮೊಟ್ಟ ಮೊದಲ ಬಾರಿಗೆ ಐಸಿಸಿ ವಿಶ್ವಕಪ್​ ಟೂರ್ನಿಯಲ್ಲಿ ಮುಖಾಮುಖಿಯಾದವು. ಇಂದಿಗೂ ಇದೊಂದು ಐತಿಹಾಸಿಕ ದಿನವಾಗಿ ಉಳಿದಿದೆ. ನ್ಯೂಜಿಲೆಂಡ್​ ಮತ್ತು ಆಸ್ಟ್ರೇಲಿಯಾ ಈ ಟೂರ್ನಿಯನ್ನು ಆಯೋಜಿಸಿತ್ತು. ಆಸ್ಟ್ರೇಲಿಯಾ ನೆಲದಲ್ಲಿ ಭಾರತ ಮತ್ತು ಪಾಕ್​ ನಡುವಿನ ಪಂದ್ಯ ನಡೆಯಿತು. ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ವಿರುದ್ಧ ಸೋತು ಭಾರತ ಹೀನಾಯ ಸ್ಥಿತಿಯಲ್ಲಿತ್ತು. ಇನ್ನೊಂದೆಡೆ ಪಾಕಿಸ್ತಾನ ಒಂದು ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಒಳ್ಳೆಯ ಸ್ಥಾನದಲ್ಲಿತ್ತು. ಆದರೂ ಭಾರತ ಗೆಲುವು ಸಾಧಿಸಿದ್ದು ಮಾತ್ರ ರಣ ರೋಚಕವಾಗಿತ್ತು. ಇದೇ ಪಂದ್ಯದಲ್ಲಿ ಪಾಕ್​ ಬ್ಯಾಟ್ಸ್​ಮನ್​ ಜಾವೇದ್​ ಮಿಯಾಂದಾದ್​ ಮಾಡಿದ ಚೇಷ್ಟೆ ಇಂದಿಗೂ ನೆನಪಾಗಿ ಉಳಿದಿದೆ.

    ಇದನ್ನೂ ಓದಿ: ಸ್ವಿಸ್​ ಬ್ಯಾಂಕ್​ ಖಾತೆಗಳ ಹೊಸ ವಿವರ ಪಡೆದ ಭಾರತ; ಸ್ವಿಟ್ಜರ್ಲೆಂಡ್​ನೊಂದಿಗಿನ ವಾರ್ಷಿಕ ಮಾಹಿತಿ ವಿನಿಮಯ

    ಅಂದಿನ ಭಾರತ ತಂಡದ ನಾಯಕರಾಗಿದ್ದ ಮೊಹಮ್ಮದ್​ ಅಜರುದ್ದೀನ್​ ಟಾಸ್​ ಗೆದ್ದು ಬ್ಯಾಟಿಂಗ್​ ಆಯ್ದುಕೊಂಡರು. ಈ ಪಂದ್ಯವನ್ನು 49 ಓವರ್​ಗಳಿಗೆ ಕಡಿತಗೊಳಿಸಲಾಗಿತ್ತು. 5ನೇ ಕ್ರಮಾಂಕದಲ್ಲಿ ಕ್ರೀಸ್​ಗೆ ಇಳಿದಿದ್ದ ಸಚಿನ್​ ತೆಂಡೂಲ್ಕರ್​, 62 ಎಸೆತಕ್ಕೆ 54 ರನ್​ ಗಳಿಸುವ ಮೂಲಕ ಅಜೇಯರಾಗಿ ಉಳಿದಿದ್ದರು. ಇದು ವಿಶ್ವಕಪ್​ನಲ್ಲಿ ಸಚಿನ್​ ಅವರ ಮೊದಲ ಅರ್ಧಶತಕವಾಗಿತ್ತು. ಅಜೇಯ್​ ಜಡೇಜಾ (77 ಎಸೆತಕ್ಕೆ 46 ರನ್​) ಮತ್ತು ಕಪಿಲ್​ ದೇವ್​ (26 ಎಸೆತಕ್ಕೆ 35 ರನ್​) ಉತ್ತಮ ಆಟದೊಂದಿಗೆ ಭಾರತ ನಿಗದಿತ ಓವರ್​ಗಳಲ್ಲಿ ಏಳು ವಿಕೆಟ್​ ನಷ್ಟಕ್ಕೆ 216 ರನ್​ ಕಲೆಹಾಕಿತ್ತು. ಪಾಕ್​ ಪರ ಲೆಗ್​ ಸ್ಪಿನ್ನರ್​ ಮುಸ್ತಾಕ್​ ಅಹ್ಮದ್​ 59 ರನ್​ಗೆ 3 ವಿಕೆಟ್​ ಪಡೆದು ಮಿಂಚಿದರು.

    ಭಾರತ ನೀಡಿದ 217ರನ್​ಗಳ ಗುರಿಯನ್ನು ಬೆನ್ನತ್ತಿದ ಪಾಕಿಸ್ತಾನ ಆರಂಭದಲ್ಲಿ ಇಂಜಮಾಮ್​ ಉಲ್​ ಅಕ್​ (2 ರನ್​) ವಿಕೆಟ್​ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಜಾಹೀದ್​ ಫಾಜಲ್​ ಸಹ ಇಂಜಮಾಮ್​ ಹಾದಿಯನ್ನು ಹಿಡಿದರು. 17ರನ್​ಗೆ ಪ್ರಮುಖ 2 ವಿಕೆಟ್​ ಕಳೆದುಕೊಂಡು ಪಾಕಿಸ್ತಾನ ಸಂಕಷ್ಟಕ್ಕೆ ಸಿಲುಕಿತ್ತು. ಈ ವೇಳೆ ಜಾವೇದ್​ ಮಿಯಾಂದಾದ್​ (40) ಮತ್ತು ಆಮರ್​ ಸೋಹೈಲ್​ (62) ಉತ್ತಮ ಜತೆಯಾಟವಾಗಿ ತಂಡಕ್ಕೆ ಆಸರೆಯಾದರು.

    ಕಿರಣ್​ ಮೋರೆ ಮನವಿಗೆ ಸಿಟ್ಟಾದ ಮಿಯಾಂದಾದ್​
    ಮಿಯಾಂದಾದ್​ ಮತ್ತು ಆಮರ್​ ಸೋಹೈಲ್​ ಕ್ರೀಸ್​ನಲ್ಲಿ ಕಚ್ಚಿಕೊಂಡಿದ್ದರು. ಇದು ಭಾರತ ತಂಡವನ್ನು ಆತಂಕಕ್ಕೆ ದೂಡಿತ್ತು. ಹೇಗಾದರ ಇಬ್ಬರ ಜತೆಯಾಟ ಮುರಿಯಬೇಕೆಂದು ಭಾರತ ಸಾಕಷ್ಟು ತಂತ್ರಗಳನ್ನು ಪ್ರಯೋಗಿಸಿತು. ಸಚಿನ್​ ತೆಂಡೂಲ್ಕರ್​ ಬೌಲಿಂಗ್​ ಮಾಡುವಾಗ ಪಾಕಿಸ್ತಾನಕ್ಕೆ 25 ಓವರ್​ಗಳಲ್ಲಿ 85 ರನ್​ ಅವಶ್ಯಕತೆ ಇತ್ತು. ಕೇವಲ 2 ವಿಕೆಟ್​ ಮಾತ್ರ ಬಿದ್ದಿತ್ತು. ಗೆಲುವಿನ ಹಾದಿ ಸುಲಭವಾಗಿತ್ತು. ಆದರೆ, ವಿಕೆಟ್​ ಕೀಪರ್​ ಕಿರಣ್​ ಮೋರೆ ಅವರ ನಿರಂತರ ಅಂಪೈರ್​ ಮನವಿಯಿಂದ ಬೇಸರಗೊಂಡಿದ್ದರು. ಸ್ಟ್ರೈಕ್​ನಲ್ಲಿದ್ದ ಮಿಯಾಂದಾದ್​ ಅಂಪೈರ್​ ಬಳಿ ಹೋಗಿ ಮೋರೆ ವಿರುದ್ಧ ದೂರು ಸಹ ನೀಡಿದ್ದರು. ಆದರೆ, ಮೋರೆ ಆರೋಪವನ್ನು ನಿರಾಕರಿಸಿದರು. ಅಲ್ಲದೆ, ಇಬ್ಬರ ನಡುವೆ ಮಾತಿನ ಚಕಮಕಿ ಸಹ ನಡೆದಿತ್ತು. ಇದೇ ಸಂದರ್ಭದಲ್ಲಿ ಸಚಿನ್​ ಎಸೆದ ಚೆಂಡನ್ನು ಮಿಯಾಂದಾದ್​ ಬಾರಿಸಿದಾಗ ಆ ಚೆಂಡು ಫ್ರಂಟ್​ ವಿಭಾಗದಲ್ಲಿ ನಿಂತಿದ್ದ ಕ್ಷೇತ್ರ ರಕ್ಷಕನ ಕೈ ಸೇರಿತು. ಇದನ್ನು ನೋಡಿದ ಮಿಯಾಂದಾದ್​ ರನ್​ ಗಳಿಸುವ ಯತ್ನವನ್ನು ಮೊಟಕುಗೊಳಿಸಿ ವಾಪಸ್​ ಕ್ರೀಸ್​ಗೆ ಬಂದರು. ಈ ವೇಳೆ ಚೆಂಡು ಮೋರೆ ಅವರ ಕೈ ಸೇರಿತು. ಅವರು ವಿಕೆಟ್​ಗೆ ಚೆಂಡನ್ನು ತಾಗಿಸಿದರು. ಆದರೆ, ಅಷ್ಟರಲ್ಲಾಗಲೇ ಮಿಯಾಂದಾದ್​ ಕ್ರೀಸ್​ ತಲುಪಿದರು. ಈ ವೇಳೆ ಮಿಯಾಂದಾದ್​ ಅವರು ಮೂರು ಜಂಪಿಂಗ್​ ಮಾಡುವ ಮೂಲಕ ಮೋರೆ ಅವರು ಅಂಪೈರ್​ ಬಳಿ ಮನವಿ ಮಾಡುವ ರೀತಿಯನ್ನು ಅಣುಕಿಸಿದರು. ಈ ವೇಳೆ ಇಡೀ ಕ್ರೀಡಾಂಗಣವೂ ಸಹ ನಗೆಗಡಲಲ್ಲಿ ತೇಲಿತು.

    ಇನ್ನು ಪಂದ್ಯದ ವಿಚಾರಕ್ಕೆ ಬಂದರೆ, ಮಿಯಾಂದಾದ್​ ಮತ್ತು ಸೊಹೈಲ್​ ಅವರ ಉತ್ತಮ ಜಟೆಯಾಟದ ಹೊರತಾಗಿಯೂ ಪಾಕ್​ ತಂಡ ಭಾರತದ ವಿರುದ್ಧ ಹೀನಾಯ ಸೋಲನ್ನು ಅನುಭವಿಸಿತು. ಕೊನೆಯ ಎಂಟು ವಿಕೆಟ್​ ಅನ್ನು ಕೇವಲ 68 ರನ್​ಗೆ ಕಳೆದುಕೊಳ್ಳುವ ಮೂಲಕ 43 ರನ್​ಗಳ ಅಂತರದಿಂದ ಪಾಕ್​ ಸೋಲನ್ನು ಅನುಭವಿಸಿತು. (ಏಜೆನ್ಸೀಸ್​)

    1996ರ ವಿಶ್ವಕಪ್ ರೋಚಕ ಕ್ಷಣ: ಕನ್ನಡಿಗನನ್ನು ಕೆಣಕಿ ಜಗತ್ತಿನೆದುರು ಮುಖಭಂಗ ಅನುಭವಿಸಿತ್ತು ಪಾಕ್​!

    ಏಕದಿನ ವಿಶ್ವಕಪ್ 2023| ಭಾರತ-ಪಾಕಿಸ್ತಾನ ಹೈವೋಲ್ಟೇಜ್ ಪಂದ್ಯ; ಅಭಿಮಾನಿಗಳಿಗೆ ಶುಭ ಸುದ್ದಿ ನೀಡಿದ ಬಿಸಿಸಿಐ

    Asian Games; ರಿಲಯನ್ಸ್ ಫೌಂಡೇಶನ್ ಬೆಂಬಲಿತ ಕ್ರೀಡಾಪಟುಗಳಿಗೆ 12 ಪದಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts