

Noida Case: ಉತ್ತರ ಪ್ರದೇಶ ರಾಜ್ಯದ ನೋಯ್ಡಾದ ಏಸ್ ಸಿಟಿ ಸೊಸೈಟಿಯ 13 ನೇ ಮಹಡಿಯಿಂದ ಹಾರಿ 37 ವರ್ಷದ ಮಹಿಳೆ ಮತ್ತು ಅವರ 11 ವರ್ಷದ ವಿಶೇಷ ಚೇತನ ಮಗ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಮೃತ ದುರ್ದೈವಿಗಳನ್ನು ಸಾಕ್ಷಿ ಚಾವ್ಲಾ ಮತ್ತು ಅವರ ಪುತ್ರ ದಕ್ಷ ಎಂದು ಗುರುತಿಸಲಾಗಿದ್ದು, ರಕ್ತದ ಮಡುವಿನಲ್ಲಿ ಬಿದ್ದಿರುವುದು ನೋಡಿದ ನೆರೆ ಹೊರೆಯವರ ಜೋರಾದ ಕಿರುಚಾಟ ಕೇಳಿದ ಬಳಿಕ ವಿಷಯ ಬಹಿರಂಗಗೊಂಡಿದ್ದು, ಬಿಸ್ರಾಖ್ ಠಾಣೆಯ ಪೊಲೀಸರು ತಕ್ಷಣ ಆಗಮಿಸಿ ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ ಎಂದು ವರದಿಯಾಗಿದೆ.
ಸಾಕ್ಷಿಯ ಪತಿ ದರ್ಪಣ್ ಚಾವ್ಲಾ ಅವರಿಗೆ ಬರದಿದ್ದಾರೆನ್ನಲಾದ ಪತ್ರ ಮನೆಯಲ್ಲಿ ಕಂಡು ಬಂದಿದ್ದು ಅದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಪತ್ರದಲ್ಲಿ "ನಾವು ಈ ಲೋಕವನ್ನು ತೊರೆಯುತ್ತಿದ್ದೇವೆ ಕ್ಷಮಿಸಿ. ನಾವು ಇನ್ನು ಮುಂದೆ ನಿಮಗೆ ತೊಂದರೆ ನೀಡಲು ಬಯಸುವುದಿಲ್ಲ. ನಮ್ಮ ಸಾವಿಗೆ ಯಾರೂ ಕಾರಣರಲ್ಲ ಎಂದು ಬರೆಯಲಾಗಿದೆ. ಬಾಲಕ ದಕ್ಷ, ದೀರ್ಘಕಾಲದಿಂದ ಮಾನಸಿಕ ಅಸ್ವಸ್ಥನಾಗಿದ್ದು, ಮಾತ್ರೆ ಮತ್ತು ಔಷಧಿಗಳ ಮೇಲೆ ಅವಲಂಬಿತರಾಗಿದ್ದರು ಎನ್ನಲಾಗಿದೆ. ಹಲವಾರು ವೈದ್ಯರ ಬಳಿ ಚಿಕಿತ್ಸೆ ಕೊಡಿಸಿದರು, ದೇವರಿಗೆ ಪ್ರಾರ್ಥನೆ ನಡೆಸಿದರು ಸ್ಥಿತಿ ಸುಧಾರಿಸಲಿಲ್ಲ. ಈ ವಿಷಯವಾಗಿ ತಾಯಿ ಸಾಕ್ಷಿ ಆಗಾಗ್ಗೆ ನೋವಿನಲ್ಲಿರುತ್ತಿದ್ದರು, ತಮ್ಮ ಕಷ್ಟವನ್ನು ನೆರೆಹೊರೆಯವರ ಬಳಿ ಹೇಳಿಕೊಂಡಿದ್ದರು ಎಂದು ತಿಳಿಸಿದ್ದಾರೆ.
ಶನಿವಾರ ಬೆಳಿಗ್ಗೆ, ಚಾರ್ಟರ್ಡ್ ಅಕೌಂಟೆಂಟ್ ಆಗಿರುವ ದರ್ಪಣ್, ಮಗನಿಗೆ ಔಷಧಿ ಕೊಡುವಂತೆ ಸಾಕ್ಷಿಗೆ ಹೇಳಿದ್ದಾರೆ, ಮಾತ್ರೆ ನೀಡಿದ ಸಾಕ್ಷಿ ನಂತರ ಅವನನ್ನು ಬಾಲ್ಕನಿಗೆ ಕರೆದೊಯ್ದರು. ಕೆಲವೇ ಕ್ಷಣಗಳಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ.
ಈ ವಿಷಯವಾಗಿ ಪ್ರತಿಕ್ರಿಯೆ ನೀಡಿರುವ ನೋಯ್ಡಾದ ಸೆಂಟ್ರಲ್ ಪೊಲೀಸ್ ಠಾಣೆಯ ಎಡಿಸಿಪಿ ಶವ್ಯಾ ಗೋಯೆಲ್, ಮಗ ಮಾನಸಿಕವಾಗಿ ಅಸ್ಥಿರನಾಗಿದ್ದರಿಂದ ಸಾಕ್ಷಿ ಒತ್ತಡಕ್ಕೊಳಗಾಗಿದ್ದಳು. ಈಗಾಗಲೇ ಆತ್ಮಹತ್ಯೆ ಪತ್ರ ಪತ್ತೆಯಾಗಿದ್ದು. ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ, ಉನ್ನತ ಮಟ್ಟದ ತನಿಖೆ ನಡೆಯುತ್ತಿದೆ ಎಂದರು.(ಏಜೆನ್ಸೀಸ್)