

ಬೀರೂರು: ಕುರುಬ ಸಮುದಾಯದ ಇತಿಹಾಸ ಕುರಿತು ಸಂಶೋಧನಾ ಪುಸ್ತಕ ಹೊರತಂದಿರುವ ಬೀರೂರಿನ ಡಿ.ಇಸ್ಮಾಯಿಲ್ ಅವರ ಅಧ್ಯಯನ ಕೌಶಲ ಹಾಗೂ ಜ್ಞಾನ ಶ್ಲಾಘನೀಯ ಎಂದು ಕಡೂರು ಪುರಸಭೆ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಹೇಳಿದರು.
ಶನಿವಾರ ಶಾಸನ ಸಂಶೋಧಕ ಡಿ.ಇಸ್ಮಾಯಿಲ್ ಅವರಿಗೆ ಆಸಂದಿ ಮಠದ ರೇವಣ ಸಿದ್ಧೇಶ್ವರ ಸಂಸ್ಥಾನ ಮತ್ತು ಕುರುಬ ಸಮುದಾಯದಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಗೌರವ ಸಲ್ಲಿಸಿ ಮಾತನಾಡಿದರು. ಅನ್ಯ ಧರ್ಮದವರಾದರೂ ಇಸ್ಮಾಯಿಲ್ ಅವರು ಕುರುಬ ಸಮುದಾಯದ ಕುರಿತು ಅಧ್ಯಯನ ನಡೆಸಿದ್ದಾರೆ. ಶಾಸನಗಳ ಪ್ರಕಾರವೇ ಕುರುಬ ಸಮುದಾಯಕ್ಕೆ 1200 ವರ್ಷಗಳ ಇತಿಹಾಸವಿದೆ. ಕುರುಬ ಸಮುದಾಯದ ಗೊಲಗಳು, ಕುಲಗುರುಗಳ ಬಗ್ಗೆ ಗ್ರಂಥ ರಚಿಸಿರುವುದು ಸಮಾಜಕ್ಕೆ ಮಾರ್ಗದರ್ಶಕವಾಗಿದೆ. ಅವರು ಸಂಶೋಧಿಸಿ ಹೊರತಂದಿರುವ ‘ಮಧ್ಯ ಕರ್ನಾಟಕದಲ್ಲಿ ಬೀರದೇವರು’ ಪುಸ್ತಕಗಳನ್ನು ಖರೀದಿಸಿ ಯುವಜನರಿಗೆ ವಿತರಿಸಿ ಅರಿವು ಮೂಡಿಸಲಾಗುವುದು. ಅ.5ರಂದು ಕಡೂರಿನಲ್ಲಿ ನಡೆಯಲಿರುವ ಕುರುಬ ನೌಕರರ ಸಂಘದ ಪ್ರತಿಭಾ ಪುರಸ್ಕಾರ ಸಂದರ್ಭದಲ್ಲಿ ಅವರನ್ನು ಸನ್ಮಾನಿಸಲಾಗುವುದು ಎಂದು ತಿಳಿಸಿದರು.
ಇನ್ನರ್‌ವೀಲ್ ಅಧ್ಯಕ್ಷೆ ಸವಿತಾ ರಮೇಶ್ ಮಾತನಾಡಿ, ಇಸ್ಮಾಯಿಲ್ ಅವರು 30 ವರ್ಷಗಳ ಪರಿಶ್ರಮದ ಫಲ ಈ ಪುಸ್ತಕವಾಗಿದೆ. ಕುರುಬ ಸಮುದಾಯದ ಜಾತ್ರೆಗಳು, ದೇವಾಲಯಗಳು, ಗುಡಿಗೌಡರನ್ನು ಸಂದರ್ಶಿಸಿ, ಶಾಸನಗಳನ್ನು ಅಧ್ಯಯನ ಮಾಡಿ ರಚಿಸಿರುವ ಪುಸ್ತಕ ಕುರುಬ ಸಮುದಾಯಕ್ಕೆ ಆಸ್ತಿಯಾಗಿ ಉಳಿಯಲಿದೆ ಎಂದು ಹೇಳಿದರು.
ಗೌರವ ಸ್ವೀಕರಿಸಿ ಮಾತನಾಡಿದ ಡಿ.ಇಸ್ಮಾಯಿಲ್, ಗ್ರಂಥ ಹೊರತಂದಿದ್ದೇನೆ. ಜನರು ಅದನ್ನು ಓದಿ ಅದರಲ್ಲಿ ನಮೂದಿಸಿರುವ ವಿವರ, ಆಚರಣೆಗಳು ಸರಿಯಾಗಿದೆಯೇ ಎಂದು ತಿಳಿಸಿದರೆ ಅದೇ ನನಗೆ ಪ್ರಶಸ್ತಿ. ಗ್ರಂಥದಲ್ಲಿ ತಪ್ಪಿದ್ದರೆ ತಿಳಿಸಿ. ಅದನ್ನು ಸರಿಪಡಿಸೋಣ ಎಂದು ಹೇಳಿದರು.
ಬೀರೂರು ಪುರಸಭಾಧ್ಯಕ್ಷೆ ಭಾಗ್ಯಲಕ್ಷ್ಮೀ ಮೋಹನ್, ಆಸಂದಿ ರೇವಣಸಿದ್ದೇಶ್ವರ ಸಂಸ್ಥಾನದ ಅಧ್ಯಕ್ಷ ರೇವಣ್ಣ ಮಾತನಾಡಿ, ಪುಸ್ತಕ ಹಾಗೂ ಇಸ್ಮಾಯಿಲ್ ಅವರು ಕುರುಬ ಸಮಾಜದ ಸಂಘಟನೆಗೆ ಕಾರಣೀಭೂತರಾಗಿದ್ದಾರೆ ಎಂದರು.
ಬೀರೂರು ಪುರಸಭೆ ಉಪಾಧ್ಯಕ್ಷ ಎನ್.ಎಂ.ನಾಗರಾಜ್, ಮಾಜಿ ಅಧ್ಯಕ್ಷ ಹಾಲಪ್ಪ, ಯರದಕೆರೆ ರಾಜಪ್ಪ, ಅಜ್ಜಯ್ಯ ಒಡೆಯರ್, ದೇವರಾಜ್, ಚೇತನ್, ಮುದಿಯಪ್ಪ, ಬಿ.ಪಿ.ನಾಗರಾಜ್, ವಿನಾಯಕ್ ನಂಜುಂಡಪ್ಪ, ಉಮೇಶ್, ಸಂತೋಷ್‌ಕುಮಾರ್, ಶಂಕರ್ ಇತರರಿದ್ದರು.