

ನವದೆಹಲಿ: ಕೋವಿಡ್-19 ಸೋಂಕಿನಿಂದ ರಕ್ಷಿಸಿಕೊಳ್ಳಲು ಮಾಸ್ಕ್ಗಳನ್ನು ಧರಿಸುವುದನ್ನು ಸರ್ಕಾರ ಕಡ್ಡಾಯಗೊಳಿಸಿದೆ. ಆದರೆ, ಎನ್95 ಮಾಸ್ಕ್ ಮಾಲಿನ್ಯ ಸೇರಿ ಎಲ್ಲ ಬಗೆಯ ಸೋಂಕಿನಿಂದಲೂ ರಕ್ಷಣೆ ನೀಡುತ್ತವೆ ಎಂಬ ಕಾರಣಕ್ಕೆ ಜನರು ಅಂಥ ಮಾಸ್ಕ್ಗಳನ್ನು ಬಳಸುತ್ತಿದ್ದಾರೆ.
ಇದೊಂದು ರೀತಿಯಲ್ಲಿ ಒಳ್ಳೆಯದೇ. ಆದರೆ ಕೆಲವರು ವಾಲ್ವ್ಡ್ ರೆಸ್ಪಿರೇಟರ್ಗಳಿರುವ ಎನ್95 ಮಾಸ್ಕ್ಗಳನ್ನು ಬಳಸುತ್ತಿದ್ದಾರೆ. ಇಂಥ ಮಾಸ್ಕ್ಗಳು ಕೋವಿಡ್ನಂಥ ಮಾರಕ ಸೋಂಕಿನಿಂದ ರಕ್ಷಣೆ ಒದಗಿಸುವ ಬದಲು ಮತ್ತಷ್ಟು ಹೆಚ್ಚಿನ ಸೋಂಕು ಉಂಟು ಮಾಡುತ್ತವೆ. ಆದ್ದರಿಂದ ಅಂಥ ಮಾಸ್ಕ್ಗಳನ್ನು ಬಳಸಬೇಡಿ ಎಂದು ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿದೆ.
ಹಾಗಾದರೆ ಎಂಥ ಮಾಸ್ಕ್ಗಳು ಸುರಕ್ಷಿತ? ಆರೋಗ್ಯ ಸಚಿವಾಲಯದ ಆರೋಗ್ಯ ಸೇವೆಗಳ ವಿಭಾಗದ ಮಹಾಪ್ರಧಾನ ನಿರ್ದೇಶಕ ಪ್ರೊ. ಡಾ. ರಾಜೀವ್ ಗರ್ಗ್ ಪ್ರಕಾರ, ಮನೆಯಲ್ಲೇ ತಯಾರಿಸಿದ ಮಾಸ್ಕ್ಗಳನ್ನು ಧರಿಸುವುದು ಹೆಚ್ಚು ಸುರಕ್ಷಿತ. ಇಂಥ ಮಾಸ್ಕ್ಗಳನ್ನು ತಯಾರಿಸುವುದು ಹೇಗೆ ಎಂಬ ಬಗ್ಗೆ ಆರೋಗ್ಯ ಸಚಿವಾಲಯದ ವೆಬ್ಸೈಟ್ನಲ್ಲಿ ವಿವರಿಸಲಾಗಿದೆ. ಅದನ್ನು ನೋಡಿಕೊಂಡು ಮಾಸ್ಕ್ಗಳನ್ನು ಸ್ವತಃ ಸಿದ್ಧಪಡಿಸಿಕೊಂಡು ಸೋಂಕಿನಿಂದ ದೂರವುಳಿಯುವಂತೆ ಸಲಹೆ ನೀಡಿದ್ದಾರೆ. ಈ ಕುರಿತು ಅವರು ಎಲ್ಲ ರಾಜ್ಯಗಳ ಆರೋಗ್ಯ ಕಾರ್ಯದರ್ಶಿಗಳಿಗೆ ಪತ್ರವನ್ನೂ ರವಾನಿಸಿದ್ದಾರೆ.
ವಾಲ್ವ್ಡ್ ರೆಸ್ಪಿರೇಟರ್ಗಳಿರುವ ಎನ್95 ಮಾಸ್ಕ್ಗಳು ಕರೊನಾ ವೈರಾಣು ಪ್ರಸರಣವನ್ನು ತಡೆಯುವುದಿಲ್ಲ. ರೆಸ್ಪಿರೇಟರ್ ಮೂಲಕ ವೈರಾಣುಗಳು ಹೊರಗೆ ಬಿಡುಗಡೆಯಾಗುತ್ತವೆ. ಜತೆಗೆ ವೈರಾಣುಗಳ ಒಳಪ್ರವೇಶಕ್ಕೂ ಅವಕಾಶ ಮಾಡಿಕೊಡುತ್ತವೆ. ಹಾಗಾಗಿ ಇವುಗಳ ಬಳಕೆ ಸುರಕ್ಷಿತವಲ್ಲ ಎಂದು ಡಾ. ರಾಜೀವ್ ಗರ್ಗ್ ಪತ್ರದಲ್ಲಿ ವಿವರಿಸಿದ್ದಾರೆ.
ಕಳೆದ ಏಪ್ರಿಲ್ನಲ್ಲಿ ಕೂಡ ಕೇಂದ್ರ ಸರ್ಕಾರ ಮುಖ ಹಾಗೂ ಮೂಗು ಮುಚ್ಚುವಂಥ ಮನೆಯಲ್ಲೇ ತಯಾರಿಸಿದ ಮಾಸ್ಕ್ಗಳನ್ನು ಬಳಸುವಂತೆ ಸಲಹೆ ನೀಡಿತ್ತು. ಅದರಲ್ಲೂ ವಿಶೇಷವಾಗಿ ಹೊರಗೆ ಹೋಗುವಾಗ ಇಂಥ ಮಾಸ್ಕ್ಗಳನ್ನು ಧರಿಸುವುದು ಕಡ್ಡಾಯ ಎಂದೂ ಹೇಳಿತ್ತು.
ಈ ಮಾಸ್ಕ್ಗಳನ್ನು ಪ್ರತಿದಿನವೂ ಸ್ವಚ್ಛಗೊಳಿಸಿ, ಒಣಗಿಸಿ ಬಳಸಬೇಕು. ಹತ್ತಿಯ ಬಟ್ಟೆಗಳಿಂದ ಮಾಡಿದ ಮಾಸ್ಕ್ಗಳು ಹೆಚ್ಚು ಸುರಕ್ಷಿತ ಎಂದು ಹೇಳಿತ್ತು. ಅಲ್ಲದೆ, ಮುಖವನ್ನೂ ಸಂಪೂರ್ಣವಾಗಿ ಮುಚ್ಚುವಂಥ ಮಾಸ್ಕ್ಗಳನ್ನು ಮನೆಯಲ್ಲೇ ತಯಾರಿಸಿಕೊಳ್ಳುವುದು ಬಗೆಯನ್ನೂ ಕೂಡ ತಿಳಿಸಿತ್ತು.