ನಾಯಿಗಳ ಮೇಲೆ ಬಿಜೆಪಿಗೆ ಯಾಕಿಷ್ಟು ವ್ಯಾಮೋಹ: ರಾಹುಲ್​ ಗಾಂಧಿ

Rahul Gandhi
Published on

ನವದೆಹಲಿ: ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್​ ಜೋಡೋ ನ್ಯಾಯ್​ ಯಾತ್ರೆ ಶುರುವಾದ ದಿನದಿಂದಲೂ ಒಂದಿಲ್ಲೊಂದು ವಿಚಾರಕ್ಕೆ ಸದ್ದು ಮಾಡುತ್ತಿದ್ದು, ನಾಯಿಗೆ ಹಾಕಿದ್ದ ಬಿಸ್ಕಟ್​ ಅನ್ನು ಕಾರ್ಯಕರ್ತರಿಗೆ ನೀಡಿದ ವಿಚಾರಕ್ಕೆ ರಾಹುಲ್​ ಗಾಂಧಿ ಜನರ ಕೆಂಗಣ್ಣಿಗೆ ಗುರಿಯಾಗಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿತ್ತು ಮತ್ತು ವ್ಯಾಪಕ ಆಕ್ರೋಶಕ್ಕೆ ಗುರಿಯಾಗಿತ್ತು.

ವೈರಲ್​ ವಿಡಿಯೋದ ಕುರಿತು ಪ್ರತಿಕ್ರಿಯಿಸಿರುವ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ, ಬಿಜೆಪಿಗೆ ನಾಯಿಗಳ ಮೇಲೆ ಯಾಕಿಷ್ಟು ವ್ಯಾಮೋಹ ಎಂಬುದು ನನಗೆ ಅರ್ಥವಾಗುತ್ತಿಲ್ಲ ಎಂದು ಕಿಡಿಕಾರಿದ್ದಾರೆ.

ಇನ್ನೂ ಈ ಕುರಿತು ಪ್ರತಿಕ್ರಿಯಿಸಿರುವ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ, ಮೊದಲಿಗೆ ನಾನು ಬಿಸ್ಕೆಟ್​ ಕೊಟ್ಟಿರುವ ವ್ಯಕ್ತಿ ನಮ್ಮ ಪಕ್ಷದ ಕಾರ್ಯಕರ್ತರಲ್ಲ ಅವರು ಆ ನಾಯಿಯ ಮಾಲೀಕರು. ನಾನು ಮೊದಲಿಗೆ ನಾಯಿಗೆ ಬಿಸ್ಕೆಟ್​ ತಿನ್ನಿಸಲು ಹೋದಾಗ ಅದು ಹೆದರಿತು ಮತ್ತು ನನ್ನ ಕೈಯಲ್ಲಿರುವ ಬಿಸ್ಕೆಟ್​ಗಳನ್ನು ತಿನ್ನಲಿಲ್ಲ. ನಾನು ಕೂಡಲೇ ಆ ಬಿಸ್ಕೆಟ್​ಗಳನ್ನು ನಾಯಿಯ ಮಾಲೀಕರಿಗೆ ಕೊಟ್ಟೆ ಅವರೇ ಅದನ್ನು ತಿನ್ನಿಸಿದರು ಅದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದ್ದಾರೆ.

ಕೆಲ ದಿನಗಳ ಹಿಂದೆಯಷ್ಟೇ ಕಾಂಗ್ರೆಸ್ ಅಧ್ಯಕ್ಷ ಖರ್ಗೆ ಅವರು ಪಕ್ಷದ ಬೂತ್ ಏಜೆಂಟರನ್ನು ನಾಯಿಗೆ ಹೋಲಿಸಿದ್ದರು. ರಾಹುಲ್​ ಗಾಂಧಿ ನಾಯಿ ತಿನ್ನದೇ ಇದ್ದಾಗ ಅದೇ ಬಿಸ್ಕೆಟ್ ಅನ್ನು ತಮ್ಮ ಕಾರ್ಯಕರ್ತನಿಗೆ ನೀಡಿದ್ದಾರೆ. ಯಾವ ಪಕ್ಷದ ಅಧ್ಯಕ್ಷ ಮತ್ತು ಯುವರಾಜ ತನ್ನ ಪಕ್ಷದ ಕಾರ್ಯಕರ್ತರನ್ನು ನಾಯಿಗಳಂತೆ ನಡೆಸಿಕೊಳ್ಳುತ್ತಾರೋ ಅಂತಹ ಪಕ್ಷವು ಕಣ್ಮರೆಯಾಗುವುದು ಸಹಜ ಎಂದು ಬಿಜೆಪಿ ಆರೋಪಿಸಿ ಕಿಡಿಕಾರಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net