ಸತ್ತರೂ ನಂಬಬೇಡಿ: ಸಾವಿನ ನಂತರ 6 ಗಂಟೆವರೆಗೂ ಹಾವುಗಳು ಕಚ್ಚಬಹುದು, ಅಧ್ಯಯನದಲ್ಲಿ ಬಹಿರಂಗ! Snakes

Snakes
Published on

Snakes : ನಾಗರಹಾವು ಮತ್ತು ಕಟ್ಟು ಹಾವು (ಕ್ರೈಟ್​) ಸಾವಿನ ನಂತರವೂ ಆರು ಗಂಟೆಗಳವರೆಗೆ ವಿಷವನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿವೆ ಎಂಬ ಆಘಾತಕಾರಿ ಸಂಗತಿ ಬೆಳಕಿಗೆ ಬಂದಿದೆ. ಅಸ್ಸಾಂನ ಪ್ರಾಣಿಶಾಸ್ತ್ರಜ್ಞರು ಮತ್ತು ಆರೋಗ್ಯ ತಜ್ಞರ ತಂಡ ನಡೆಸಿದ ಅಧ್ಯಯನದಲ್ಲಿ ಈ ವಿಚಾರ ಗೊತ್ತಾಗಿದೆ. ಈ ಅಧ್ಯಯನವು ಅಂತಾರಾಷ್ಟ್ರೀಯ ಜರ್ನಲ್ ಫ್ರಾಂಟಿಯರ್ಸ್ ಇನ್ ಟ್ರಾಪಿಕಲ್ ಡಿಸೀಸಸ್‌ನ ಇತ್ತೀಚಿನ ಸಂಚಿಕೆಯಲ್ಲಿ ಪ್ರಕಟವಾಗಿದೆ.

ಪ್ರಾಣಿಶಾಸ್ತ್ರಜ್ಞೆ ಸುಶ್ಮಿತಾ ಠಾಕೂರ್, ಜೈವಿಕ ತಂತ್ರಜ್ಞಾನ ಶಾಸ್ತ್ರಜ್ಞ ರಾಬಿನ್ ಡೋಲ್, ಅರಿವಳಿಕೆ ತಜ್ಞ ಸುಜಿತ್ ಗಿರಿ ಮತ್ತು ಮಕ್ಕಳ ತಜ್ಞರಾದ ಗೌರವ್ ಚೌಧರಿ ಹಾಗೂ ಹೆಮಿನ್ ನಾಥ್ ಅವರನ್ನೊಳಗೊಂಡ ಸಂಶೋಧನಾ ತಂಡವು ಈ ಆವಿಷ್ಕಾರವನ್ನು ಮಾಡಿದೆ.

ಅಧ್ಯಯನವು ಸತ್ತ ಹಾವಿನ ಕಡಿತದ ಮೂರು ಪ್ರಕರಣಗಳನ್ನು ಉಲ್ಲೇಖಿಸುತ್ತದೆ. ಅವುಗಳಲ್ಲಿ ಎರಡು ಸತ್ತ ನಾಗರಹಾವುಗಳಿಂದ ಮತ್ತು ಒಂದು ಕಟ್ಟು ಹಾವಿನ ಕಡಿತದ ಪ್ರಕರಣವಾಗಿದೆ. ಈ ಮೂರೂ ಪ್ರಕರಣಗಳು ಅಸ್ಸಾಂನಲ್ಲಿ ಸಂಭವಿಸಿವೆ. 20 ಡೋಸ್ ಆಂಟಿವೆನಮ್ ನೀಡಿದ ನಂತರ ಸಂತ್ರಸ್ತರನ್ನು ಸಾವಿನ ಅಪಾಯದಿಂದ ರಕ್ಷಣೆ ಮಾಡಲಾಗಿದೆ. ಸಂತ್ರಸ್ತರಿಗೆ ಸುಮಾರು 25 ದಿನಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಯಿತು.

ರಾಟಲ್‌ಸ್ನೇಕ್‌ಗಳು, ಉಗುಳುವ ನಾಗರಹಾವುಗಳು ಮತ್ತು ಆಸ್ಟ್ರೇಲಿಯಾದ ಕೆಂಪು ಹೊಟ್ಟೆಯ ಕಪ್ಪು ಹಾವುಗಳು ಸಾವಿನ ನಂತರವೂ ಕಚ್ಚುವ ಮತ್ತು ಮನುಷ್ಯರು ಹಾಗೂ ಪ್ರಾಣಿಗಳನ್ನು ಕೊಲ್ಲುವ ಸಾಮರ್ಥ್ಯವನ್ನು ಹೊಂದಿವೆ ಎಂದು ಈ ಹಿಂದೆಯೇ ಹೇಳಲಾಗಿತ್ತು. ಆದಾಗ್ಯೂ, ಅಸ್ಸಾಂನಲ್ಲಿನ ಘಟನೆಗಳು ನಾಗರಹಾವುಗಳು ಮತ್ತು ಕಟ್ಟು ಹಾವುಗಳು ಸಾವಿನ ನಂತರವೂ ಕಚ್ಚಬಹುದು ಎಂದು ಇತ್ತೀಚಿಗೆ ತೋರಿಸಿದೆ ಎಂದು ಸಂಶೋಧನಾ ತಂಡದ ಸದಸ್ಯ ಡಾ. ಸುರಜಿತ್ ಗಿರಿ ಹೇಳಿದ್ದಾರೆ.

ಬಿಸಿರಕ್ತದ ಸಸ್ತನಿಗಳನ್ನು ಕೊಂದರೂ ಅಥವಾ ಶಿರಚ್ಛೇದ ಮಾಡಿದರೂ, ಅವುಗಳ ಮೆದುಳು ಏಳು ನಿಮಿಷಗಳವರೆಗೆ ಸಕ್ರಿಯವಾಗಿರಬಹುದು. ಆದಾಗ್ಯೂ, ಬಿಸಿರಕ್ತ, ನಿಧಾನವಾಗಿ ಚಯಾಪಚಯಗೊಳ್ಳುವ ಹಾವುಗಳ ತಲೆಗಳನ್ನು ಕತ್ತರಿಸಿದರೂ, ಅವುಗಳ ಮೆದುಳು ನಾಲ್ಕರಿಂದ ಆರು ಗಂಟೆಗಳ ಕಾಲ ಜೀವಂತವಾಗಿರಬಹುದು ಎಂದು ಸಂಶೋಧಕರು ಹೇಳುತ್ತಾರೆ. ನೀವು ಕತ್ತರಿಸಿದ ತಲೆಯನ್ನು ಮುಟ್ಟಿದರೂ, ಅವು ಇನ್ನೂ ಕಚ್ಚಬಹುದು ಎಂದು ಅಧ್ಯಯನ ಹೇಳಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net