

ಬೆಂಗಳೂರು: ನನ್ನ ಹತ್ರ ಟನ್ ಗಟ್ಟಲೆ ದಾಖಲೆಗಳಿವೆ. ಸುಖಾಸುಮ್ಮನೆ ನನ್ನನ್ನು ಕೆಣಕಬೇಡಿ(Don't tease me, I have tons of documents) ಎಂದು ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ(H D Kumaraswamy) ಎಚ್ಚರಿಸಿದರು.
ಜೆ.ಪಿ.ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ನಾನು ಕನಕಪುರದಲ್ಲಿ ಮಾತ್ರ ಬಂಡೆ ಒಡೆದಿದ್ದೇನೆ. ಬಳ್ಳಾರಿಗೆ ನನಗೂ ಏನು ಸಂಬಂಧ ಎಂದು ಹೇಳಿಕೊಂಡಿದ್ದಾರೆ. ನನ್ನ ಬಳಿ ಟನ್ ಗಟ್ಟಲೆ ದಾಖಲೆಗಳು ಇವೆ. ಗಾಳಿಯಲ್ಲಿ ಗುಂಡು ಹೊಡೆಯುತ್ತಿಲ್ಲ ನಾನು, ಇರುವ ಸತ್ಯ ಹೇಳುತ್ತಿದ್ದೇನೆ ಎಂದು ಗುಟುರು ಹಾಕಿದರು.
ನನ್ನ ಮೇಲಷ್ಟೇ ರಾಜಕೀಯ ಹಗೆತನ ಸಾಧಿಸುತ್ತಿರುವುದು ಅಷ್ಟೇ ಅಲ್ಲ, ರಾಜ್ಯದ ಜನರನ್ನು ಕಿತ್ತು ತಿನ್ನುತ್ತಿರುವ ಈ ಸರ್ಕಾರಕ್ಕೆ ನೇರ ಎಚ್ಚರಿಕೆ ನೀಡುತ್ತಿದ್ದೇನೆ. ಸವಾಲು ಹಾಕಲು ಇಲ್ಲಿಗೆ ಬಂದಿದ್ದೇನೆ. ಇಂದಿನಿಂದ ಈ ಜನ ವಿರೋಧಿ ಸರ್ಕಾರದ ವಿರುದ್ಧ ನೇರ ಯುದ್ಧ ಆರಂಭ ಮಾಡುತ್ತಿದ್ದೇನೆ ಎಂದು ಗುಡುಗಿದರು.
ಎಸ್.ಎಂ. ಕೃಷ್ಣ ಸರ್ಕಾರದಲ್ಲಿ ನಗರಾಭಿವೃದ್ಧಿ ಸಚಿವರಾಗಿದ್ದರು. ಅದಿರಿನ ಮಣ್ಣಿನ ನೆಪದಲ್ಲಿ ಸಾವಿರಾರು ಟನ್ ಕಬ್ಬಿಣದ ಅದಿರನ್ನು ಬಳ್ಳಾರಿಯಲ್ಲಿ ಕದ್ದು ಸಾಗಿಸಿದರು. ಆ ಅದಿರು ಎಲ್ಲಿಗೆ ಹೋಯಿತು? ಏನು ಮಾಡಿದರು. ಅವರು ಯಾರಿಗೆಲ್ಲ ಪತ್ರ ಬರೆದು ಅಧಿಕಾರ ದುರುಪಯೋಗ ಮಾಡಿಕೊಂಡಿದ್ದಾರೆ ಎಂಬ ಬಗ್ಗೆ ನನ್ನ ಬಳಿ ದಾಖಲೆಗಳು ಇವೆ ಎಂದು ಡಿ.ಕೆ.ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದರು.
ನಾನು ಸುಮ್ಮನಿರಲು ಸಾಧ್ಯವೇ ಇಲ್ಲ. ಅವರ ಒಂದೊಂದೇ ಹಗರಣಗಳನ್ನು ಬಯಲಿಗೆ ಎಳೆಯುತ್ತೇನೆ. ಅವರು ಹಗರಣಗಳ ಮಹಾನಾಯಕ. ಈ ಕ್ಷಣದಿಂದ ಈ ಸರ್ಕಾರದ ವಿರುದ್ಧ ಸಮರ ಆರಂಭ ಮಾಡಿದ್ದೇನೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಉಪ ಮುಖ್ಯಮಂತ್ರಿ ಎನ್ನುವ ವ್ಯಕ್ತಿ ಎಷ್ಟು ಕಂಪನಿಗಳ ಹೆಸರಿನಲ್ಲಿ ವ್ಯವಹಾರ ನಡೆಸುತ್ತಿದ್ದಾರೆ. ಏಳು ಕಂಪನಿಗಳ ಹೆಸರಿನಲ್ಲಿ ಅವರು ವ್ಯವಹಾರ ನಡೆಸಿ ಪತ್ರ ವ್ಯವಹಾರವನ್ನೂ ನಡೆಸಿದ್ದಾರೆ. ಎಲ್ಲ ದಾಖಲೆಗಳು ಇವೆ. ಅದಷ್ಟು ಬೇಗ ಬಿಡುಗಡೆ ಮಾಡುತ್ತೇನೆ ಎಂದು ಹೇಳಿದರು.
ನಾನು ಯುವಕನಾಗಿದ್ದಾಗ ಜೀವನೋಪಾಯಕ್ಕಾಗಿ ಬೆಂಗಳೂರಿನ ಹೊಂಬೇಗೌಡನಗರ, ಸುಧಾಮನಗರ ಮತ್ತು ವಿಲ್ಸನ್ ಗಾರ್ಡನ್ ವಾರ್ಡುಗಳಲ್ಲಿ ಕಸ ಎತ್ತುವ ಗುತ್ತಿಗೆ ತೆಗೆದುಕೊಂಡಿದ್ದೆ. ಆಮೇಲೆ ನಮ್ಮ ತಂದೆಯವರು ಬೇಡ ಎಂದು ತಾಕೀತು ಮಾಡಿದ ಮೇಲೆ ಅದನ್ನು ಬಿಟ್ಟೆ ಎಂದರು.
ಬಿಬಿಎಂಪಿ ಕಸದ ಗುತ್ತಿಗೆ ನೀಡುವುದರಲ್ಲಿಯೂ ಕೋಟ್ಯಾಂತರ ರೂಪಾಯಿ ಲೂಟಿ ಮಾಡಲು ಹೊರಟಿದ್ದರು. ಮೂವತ್ತು ವರ್ಷಗಳಷ್ಟು ಸುದೀರ್ಘ ಅವಧಿಗೆ ಬೆಂಗಳೂರಿನ ಕಸ ಎತ್ತಲು ಚೆನ್ನೈನ ಒಬ್ಬ ವ್ಯಕ್ತಿಗೆ ಗುತ್ತಿಗೆ ನೀಡುವ ಹಗರಣಕ್ಕೆ ಮುಂದಾಗಿದ್ದರು. ಪ್ರತಿ ಟನ್ ಕಸ ಎತ್ತಲು 6500 ರೂ.ಗಿಂತ ಹೆಚ್ಚು ಮೊತ್ತವನ್ನು ಪಾವತಿ ಮಾಡಿ 15,000 ಕೋಟಿ ರೂ. ಲೂಟಿ ಮಾಡಲು ಹೊರಟಿದ್ದರು ಎಂದು ನಾನು ಹೇಳಿದ ಮೇಲೆ 6500 ರೂ. ಗಳನ್ನು 3, 000ಕ್ಕೆ ಕಡಿಮೆ ಮಾಡಿದರು ಎಂದು ಹೇಳಿದರು.
ವಿಧಾನಸೌಧದ ಮೂರನೇ ಮಹಡಿಯಲ್ಲಿ ಘಜ್ನಿ ಮಹಮ್ಮದ್, ಘೋರಿ ಮಹಮ್ಮದ್ ಹಾಗೂ ಮಲ್ಲಿಕ್ ಖಫೂರ ಇದ್ದಾರೆ. ಅವರನ್ನು ನಾಚುವ ರೀತಿಯಲ್ಲಿ ಕೊಳ್ಳೆ ಹೊಡೆಯುತ್ತಿದ್ದಾರೆ. ಹನಿಟ್ರ್ಯಾಪ್, ಸುಪಾರಿ ಕೊಲೆ ಬಗ್ಗೆ ಚರ್ಚೆ ಆಗುತ್ತಿದೆ. ಎಂತಹ ಪರಿಸ್ಥಿತಿಗೆ ಬಂದಿದ್ದಾರೆ ಇವರು ಎಂದು ಬೇಸರ ವ್ಯಕ್ತಪಡಿಸಿದರು.
40 ವರ್ಷಗಳ ಹಿಂದೆಯೇ ನಾನು ಬಿಡದಿಯಲ್ಲಿ ಭೂಮಿ ಖರೀದಿ ಮಾಡಿದ್ದೆ. ಅಧಿಕಾರಿಗಳನ್ನು ದುರುಪಯೋಗ ಮಾಡಿಕೊಂಡು ರಾಜ್ಯದಲ್ಲಿ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ನಾನು ಮಾಜಿ ಪ್ರಧಾನಿ ಮಗ, ಎರಡು ಬಾರಿ ಮುಖ್ಯಮಂತ್ರಿ ಆಗಿದ್ದೆ. ನಾನು ನಾಲ್ಕು ಎಕರೆ ಜಮೀನನ್ನ ಒತ್ತುವರಿ ಮಾಡಿಕೊಳ್ಳುಬೇಕಾ? ಎಂದು ಪ್ರಶ್ನಿಸಿದರು.
ಗುತ್ತಿಗೆ ಮೀಸಲು; ಶ್ವೇತಪತ್ರ ಹೊರಡಿಸಿ:
ಮುಸ್ಲಿಮರಿಗೆ ಗುತ್ತಿಗೆ ಮೀಸಲು ಸೇರಿದಂತೆ ಯಾರು ಯಾರಿಗೆ ಗುತ್ತಿಗೆ ಮೀಸಲು ನೀಡಿದ್ದಾರೋ, ಅದರಿಂದ ಅವರು ಎಷ್ಟು ಆರ್ಥಿಕವಾಗಿ ಸಬಲರಾಗಿದ್ದಾರೆ ಎಂಬ ಬಗ್ಗೆ ಶ್ವೇತಪತ್ರ ಹೊರಡಿಸಿ ಎಂದು ಒತ್ತಾಯಿಸಿದರು.
ಮಾಜಿ ಸಚಿವ ಆಲ್ಕೋಡ ಹನುಮಂತಪ್ಪ, ಶಾಸಕರಾದ ನೇಮಿರಾಜ್ ನಾಯಕ, ವಿಧಾನ ಪರಿಷತ್ ಸದಸ್ಯರಾದ ಬೋಜೇಗೌಡ, ಜವರಾಯ ಗೌಡ, ಜೆಡಿಎಸ್ ನಗರ ಘಟಕ ಅಧ್ಯಕ್ಷ ಎಚ್. ಎಂ. ರಮೇಶ್ ಗೌಡ ಮುಂತಾದವರು ಉಪಸ್ಥಿತರಿದ್ದರು.
ಬಿಜೆಪಿ ಜೊತೆ ಮೈತ್ರಿ ಉತ್ತಮವಾಗಿದೆ. ಯಾವ ಹೊಂದಾಣಿಕೆಯ ಕೊರತೆಯೂ ಇಲ್ಲ. ನಾನು ಈ ಬಗ್ಗೆ ಬಿಜೆಪಿ ಎಲ್ಲ ನಾಯಕರ ಜತೆ ಮಾತನಾಡುತ್ತೇನೆ.
-ಎಚ್.ಡಿ.ಕುಮಾರಸ್ವಾಮಿ, ಕೇಂದ್ರ ಸಚಿವ.
ಕುಮಾರಸ್ವಾಮಿ ರಾಜ್ಯ ಸರ್ಕಾರದ ವಿರುದ್ಧ ವಾರ್ ಮಾಡ್ತಾನೇ ಇದ್ದಾರೆ ಮಾಡಲಿ.
-ಸಿದ್ದರಾಮಯ್ಯ, ಸಿಎಂ
ಕುಮಾರಸ್ವಾಮಿಗೆ ನಾನು ಹೇಳುತ್ತೇನೆ. ಎಷ್ಟು ವ್ಯವಹಾರ ಇದೆ ಅದನ್ನು ಬಿಡುಗಡೆ ಮಾಡಲಿ. ನನಗೂ ಗೊತ್ತಿದೆ. ನನ್ನ ಆಸ್ತಿ, ಮಕ್ಕಳು ಮತ್ತು ಕುಟುಂಬದ ಆಸ್ತಿ ಎಷ್ಟಿದೆ ಅದನ್ನೆಲ್ಲ ತೆಗೆಸಿದ್ದಾರೆ. ಕುಮಾರ ಸ್ವಾಮಿಗೆಲ್ಲ ಹೆದರುವಂತಹ ಮಗ ಅಲ್ಲ ನಾನು. ನಾನೇನಾದರೂ ತಪ್ಪು ಮಾಡಿದ್ದರೆ ಯಾವುದೇ ಶಿಕ್ಷೆ ಅನುಭವಿಸಲು ಸಿದ್ಧ.
-ಡಿ.ಕೆ.ಶಿವಕುಮಾರ್, ಡಿಸಿಎಂ.