ನಮ್ಮನ್ನು ಟಾರ್ಗೆಟ್ ಮಾಡಬೇಡಿ; ಡೊನಾಲ್ಡ್​ ಟ್ರಂಪ್​ ಸುಂಕ ನೀತಿಗೆ ಭಾರತ ತಿರುಗೇಟು| Ministry of External Affairs

MODI
Published on

Ministry of External Affairs: ರಷ್ಯಾದ ತೈಲವನ್ನು ಖರೀದಿಸಿದ್ದಕ್ಕಾಗಿ ಭಾರತದ ಮೇಲೆ ಸುಂಕ ವಿಧಿಸುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನಿರ್ಧಾರಕ್ಕೆ ಭಾರತ ತೀವ್ರವಾಗಿ ತಿರುಗೇಟು ನೀಡಿದೆ. ಅಮೆರಿಕ ಮತ್ತು ಯುರೋಪಿಯನ್ ಒಕ್ಕೂಟ ವಿನಾಕಾರಣ ಭಾರತವನ್ನು ಟಾರ್ಗೆಟ್ ಮಾಡುತ್ತಿರುವುದು ನ್ಯಾಯಸಮ್ಮತವಲ್ಲ. ಇದು ಅಸಮರ್ಥನೀಯ ಎಂದು ವಿದೇಶಾಂಗ ಸಚಿವಾಲಯ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಭಾರತವು ರಷ್ಯಾದ ತೈಲವನ್ನು ಬೃಹತ್ ಪ್ರಮಾಣದಲ್ಲಿ ಖರೀದಿಸುತ್ತಿದೆ ಮತ್ತು ಮುಕ್ತ ಮಾರುಕಟ್ಟೆಯಲ್ಲಿ ದೊಡ್ಡ ಲಾಭಕ್ಕಾಗಿ ಮಾರಾಟ ಮಾಡುತ್ತಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ ಕೆಲವೇ ಗಂಟೆಗಳ ನಂತರ ವಿದೇಶಾಂಗ ಸಚಿವಾಲಯದಿಂದ ಈ ಹೇಳಿಕೆ ಬಂದಿದೆ.

ಈ ಬಗ್ಗೆ ಪ್ರತಿಕ್ರಿಸಿರುವ MEA, ರಷ್ಯಾ-ಯುಕ್ರೇನ್ ಸಂಘರ್ಷದ ನಂತರ ಸಾಂಪ್ರದಾಯಿಕ ಸರಬರಾಜುಗಳನ್ನು ಯುರೋಪ್‌ಗೆ ತಿರುಗಿಸಿದ ಕಾರಣ ಭಾರತ ರಷ್ಯಾದಿಂದ ಆಮದು ಮಾಡಿಕೊಳ್ಳಲು ಪ್ರಾರಂಭಿಸಿತು ಎಂದು ತನ್ನ ಹೇಳಿಕೆಯಲ್ಲಿ ತಿಳಿಸಿದೆ.ಅಲ್ಲದೆ, ಭಾರತವನ್ನು ಟೀಕಿಸುವ ರಾಷ್ಟ್ರಗಳು ಸ್ವತಃ ರಷ್ಯಾದೊಂದಿಗೆ ವ್ಯಾಪಾರದಲ್ಲಿ ತೊಡಗಿಕೊಂಡಿವೆ ಎಂದು ಖಾರವಾಗಿ ಉತ್ತರಿಸಿದೆ.

ಯುರೋಪಿಯನ್​ ಒಕ್ಕೂಟವು ರಷ್ಯಾದೊಂದಿಗೆ ನಡೆಸುತ್ತಿರುವ ಒಪ್ಪಂದದ ಬಗ್ಗೆ ಉಲ್ಲೇಖಿಸಿರುವ MEA, 2024ರಲ್ಲಿ ಯುರೋಪಿಯನ್ ಯುನಿಯನ್ ರಷ್ಯಾದೊಂದಿಗೆ 67.5 ಶತಕೋಟಿ ಯುರೋಗಳಷ್ಟು ಸರಕುಗಳ ದ್ವಿಪಕ್ಷೀಯ ವ್ಯಾಪಾರವನ್ನು ಹೊಂದಿತ್ತು ಎಂದು ಸಚಿವಾಲಯವು ಸ್ಷಷ್ಟಪಡಿಸಿದೆ. ಇದಲ್ಲದೆ, 2023ರಲ್ಲಿ ಇದು 17.2 ಶತಕೋಟಿ ಯುರೋಗಳಷ್ಟು ವ್ಯಾಪಾರವನ್ನು ಹೊಂದಿತ್ತು. ರಷ್ಯಾದೊಂದಿಗೆ ಭಾರತದ ಒಟ್ಟು ವ್ಯಾಪಾರಕ್ಕಿಂತ ಇದು ಹೆಚ್ಚಾಗಿದೆ. ವಾಸ್ತವವಾಗಿ, 2024 ರಲ್ಲಿ ಯುರೋಪಿಯನ್ ಎಲ್‌ಎನ್‌ಜಿ ಆಮದುಗಳು ದಾಖಲೆಯ 16.5 ಮಿಲಿಯನ್ ಟನ್‌ಗಳನ್ನು ತಲುಪಿದ್ದು, 2022 ರಲ್ಲಿ 15.21 ಮಿಲಿಯನ್ ಟನ್‌ಗಳ ಹಿಂದಿನ ದಾಖಲೆಯನ್ನು ಮೀರಿದೆ" ಎಂದು ತಿಳಿಸಿದೆ.

ರಷ್ಯಾ ಮತ್ತು ಯುರೋಪ್ ನಡುವಿನ ವ್ಯಾಪಾರವು ಶಕ್ತಿಗೆ ಮಾತ್ರ ಸೀಮಿತವಾಗಿಲ್ಲ, ರಸಗೊಬ್ಬರಗಳು, ಗಣಿಗಾರಿಕೆ ಉತ್ಪನ್ನಗಳು, ರಾಸಾಯನಿಕಗಳು, ಕಬ್ಬಿಣ, ಉಕ್ಕು ಹಾಗೂ ಯಂತ್ರೋಪಕರಣಗಳು ಮತ್ತು ಸಾರಿಗೆ ಉಪಕರಣಗಳಿಗೂ ಸೀಮಿತವಾಗಿದೆ ಎಂದು MEA ಹೇಳಿದೆ.

ಈ ಹಿನ್ನೆಲೆಯನ್ನು ಗಮನಿಸಿದರೆ, ಭಾರತವನ್ನು ಗುರಿಯಾಗಿಸಿಕೊಂಡಿರುವುದು ಅಸಮರ್ಥನೀಯ ಮತ್ತು ಅಸಮಂಜಸವಾಗಿದೆ ಮತ್ತು ಯಾವುದೇ ಪ್ರಮುಖ ಆರ್ಥಿಕತೆಯಂತೆ ಭಾರತವು ತನ್ನ ರಾಷ್ಟ್ರೀಯ ಹಿತಾಸಕ್ತಿಗಳು ಮತ್ತು ಆರ್ಥಿಕ ಭದ್ರತೆಯನ್ನು ಕಾಪಾಡಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂದು ವಿದೇಶಾಂಗ ಸಚಿವಾಲಯ ಸ್ಪಷ್ಟಪಡಿಸಿದೆ.(ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net