ಹಣದ ಹಿಂದೆ ಓಡುವುದನ್ನು ನಿಲ್ಲಿಸಿ ಧರ್ಮದ ಜತೆಗೆ ಹೆಜ್ಜೆ ಹಾಕಿ: ಕೇಂದ್ರ ಸಚಿವೆ ಸ್ಮೃತಿ ಇರಾನಿ ಸಲಹೆ

SDM
ಧರ್ಮಸ್ಥಳದಲ್ಲಿ ಮಂಗಳವಾರ ಸರ್ವಧರ್ಮ ಸಮ್ಮೇಳನದಲ್ಲಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರನ್ನು ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಸ್ಮರಣಿಕೆ ನೀಡಿ ಗೌರವಿಸಿದರು. ಹೇಮಾವತಿ ವಿ.ಹೆಗ್ಗಡೆ, ಡಿ.ಸುರೇಂದ್ರ ಕುಮಾರ್, ಸಮ್ಮೇಳನದ ಅಧ್ಯಕ್ಷ ಎಂ.ಆರ್. ಸತ್ಯನಾರಾಯಣ, ಧರ್ಮಗುರು ಮಾರ್ಸೆಲ್ ಪಿಂಟೊ, ಹಾಸಿಂಪೀರ ಇ.ವಾಲೀಕರ, ನಿವೃತ್ತ ಮುಖ್ಯ ಶಿಕ್ಷಕ ಮುನಿರಾಜ ರೆಂಜಾಳ ಮೊದಲಾದವರು ಉಪಸ್ಥಿತರಿದ್ದರು.
Published on

ಬೆಳ್ತಂಗಡಿ: ಸಾತ್ವಿಕ ಜೀವನವೇ ಶಾಶ್ವತ. ಕೇವಲ ಹಣದ ಹಿಂದೆ ಓಡುವುದನ್ನು ನಿಲ್ಲಿಸಿ ಧರ್ಮದ ಜತೆಗೆ ಹೆಜ್ಜೆ ಹಾಕುವುದರ ಬಗ್ಗೆಯೂ ಚಿಂತನೆ ಇರಬೇಕು. ಇನ್ನೊಬ್ಬರ ದುಃಖ ಹೋಗಲಾಡಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಕೇಂದ್ರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಅಲ್ಪಸಂಖ್ಯಾತ ವ್ಯವಹಾರಗಳ ಸಚಿವೆ ಸ್ಮೃತಿ ಇರಾನಿ ಹೇಳಿದರು. ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಮಂಗಳವಾರ ಲಕ್ಷದೀಪೋತ್ಸವ ಸಂದರ್ಭ 90ನೇ ಸರ್ವಧರ್ಮ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.

ಸಮಾಜದ ಪ್ರತಿಯೊಬ್ಬರೂ ರಾಷ್ಟ್ರಹಿತ, ಜನಹಿತ ಕಾಯುವ ಚಿಂತನೆಯತ್ತ ಸಾಗಬೇಕೇ ಹೊರತು ಹಣಕ್ಕೆ ಮಹತ್ವ ಕೊಟ್ಟು ಅದರಲ್ಲೇ ವೈಭವ ಕಾಣುವುದು ಸರಿಯಲ್ಲ. ದುಃಖದಲ್ಲಿರುವವರ ಕಣ್ಣೀರು ಒರೆಸುವುದು ನಿಜವಾದ ಸೇವೆ ಎಂಬ ಮನೋಭಾವ ನಮ್ಮದಾಗಬೇಕು. ಇದಕ್ಕೆ ಸೂಕ್ತ ಉದಾಹರಣೆ ಡಾ.ವೀರೇಂದ್ರ ಹೆಗ್ಗಡೆಯವರು. ನನಗೆ ಇಂದು ಧರ್ಮಸ್ಥಳದಂಥ ಅಪೂರ್ವ, ಆಧ್ಯಾತ್ಮಿಕ ವಾತಾವರಣದಲ್ಲಿ ಇರಲು, ಮಹಾದೇವನ ಆಶೀರ್ವಾದ ಪಡೆಯಲು ಅವಕಾಶ ಸಿಕ್ಕಿದ್ದಕ್ಕೆ ಖುಷಿಯಾಗಿದೆ ಎಂದರು.

ಶಿವಮೊಗ್ಗದ ವಕೀಲ ಎಂ.ಆರ್. ಸತ್ಯನಾರಾಯಣ ಅಧ್ಯಕ್ಷತೆ ವಹಿಸಿದ್ದರು. ಕ್ರೖೆಸ್ತ ಧರ್ಮದಲ್ಲಿ ಧರ್ಮ ಸಮನ್ವಯದ ಕುರಿತು ಧರ್ಮಗುರು ಮಾರ್ಸೆಲ್ ಪಿಂಟೊ, ಇಸ್ಲಾಂ ಮತ್ತು ಭಾರತೀಯ ಭಾವೈಕ್ಯದ ಕುರಿತು ಹಾಸಿಂಪೀರ ಇ.ವಾಲೀಕರ ಮತ್ತು ಜೈನ ಧರ್ಮದಲ್ಲಿ ಸಾಮರಸ್ಯ ಎಂಬ ವಿಷಯದ ಕುರಿತು ಮೂಡುಬಿದಿರೆಯ ನಿವೃತ್ತ ಮುಖ್ಯ ಶಿಕ್ಷಕ ಮುನಿರಾಜ ರೆಂಜಾಳ ಉಪನ್ಯಾಸ ನೀಡಿದರು.

ನೈತಿಕತೆಯೇ ಶ್ರೇಷ್ಠ, ಶಾಶ್ವತ: ಯಾರು ಸಾಮಾಜಿಕ ಸಹಬಾಳ್ವೆಯನ್ನು ಒಪ್ಪುವುದಿಲ್ಲವೋ, ಪರಸ್ಪರ ಧರ್ಮಗಳನ್ನು ಗೌರವಿಸುವುದಿಲ್ಲವೋ, ತನ್ನ ಧರ್ಮವೇ ಶ್ರೇಷ್ಠ ಎಂದು ಸಾಧಿಸಲು ಹೊರಡುತ್ತಾರೋ, ಅವರು ಈ ದೇಶದ ಅಷ್ಟೇ ಅಲ್ಲ, ಸಮಾಜಕ್ಕೂ ಶತ್ರುಗಳೇ ಆಗುತ್ತಾರೆ. ವಿಶ್ವದ ಎಲ್ಲ ಧರ್ಮಗಳೂ ಭಗವಂತನೆಂಬ ಒಂದೇ ತತ್ವ ಪ್ರತಿಪಾದನೆ ಮಾಡುತ್ತವೆ. ಯಾವುದೇ ಧರ್ಮದಲ್ಲಿ, ಯಾವುದೇ ಶಾಸ್ತ್ರದಲ್ಲಿ ಯಾರಿಗೂ ನಮ್ಮ ವಚನ ಕರ್ಮದಿಂದ ಒಂದಷ್ಟೂ ಹಾನಿಯಾಗಬಾರದೆಂದು ಬರೆಯಲ್ಪಟ್ಟಿದೆ. ಅಂದರೆ ಧರ್ಮದ ಉದ್ದೇಶವೇ ಮಾನವೀಯತೆ, ಸಮನ್ವಯತೆ. ಆದ್ದರಿಂದಲೇ ಧರ್ಮವನ್ನು ಅತಿ ಶ್ರೇಷ್ಠ ಎಂದು ಪರಿಗಣಿಸಲಾಗಿದೆ ಎಂದು ಧರ್ವಧಿಕಾರಿ, ರಾಜ್ಯಸಭಾ ಸದಸ್ಯ ಡಾ.ಡಿ.ವೀರೇಂದ್ರ ಹೆಗ್ಗಡೆ ಹೇಳಿದರು.

ಇಂದು ಧರ್ಮದರ್ಶನ ಅಂಕಣ ಕೃತಿ ಬಿಡುಗಡೆ: ಬೆಳ್ತಂಗಡಿ: ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ‘ವಿಜಯವಾಣಿ’ ಯಲ್ಲಿ ಬರೆಯುತ್ತಿರುವ ಅಂಕಣ ಬರಹಗಳ ಕೃತಿ ‘ಧರ್ಮದರ್ಶನ’ ನ.23ರಂದು ಲಕ್ಷದೀಪೋತ್ಸವದ ಸಾಹಿತ್ಯ ಸಮ್ಮೇಳನದಲ್ಲಿ ಬಿಡುಗಡೆಗೊಳ್ಳಲಿದೆ. ಡಾ.ಡಿ.ವೀರೇಂದ್ರ ಹೆಗ್ಗಡೆ, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಿರ್ದೇಶಕ ಪಿ.ಶೇಷಾದ್ರಿ, ವಿದ್ವಾಂಸರಾದ ವಿದ್ವಾನ್ ಡಾ.ಎಚ್.ವಿ.ನಾಗರಾಜ್, ಸತ್ಯೇಶ್ ಎನ್. ಬೆಳ್ಳೂರ್, ಪತ್ರಕರ್ತ ರವೀಂದ್ರ ಭಟ್ ಐನಕೈ, ಲೇಖಕಿ ಡಾ.ಗೀತಾ ವಸಂತ, ವಿಜಯವಾಣಿ ಸಂಪಾದಕ ಚನ್ನೇಗೌಡ ಕೆ.ಎನ್. ಉಪಸ್ಥಿತರಿರುವರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net