

ಬೆಂಗಳೂರು: ‘ಎಲ್ಲರನ್ನು ಎಲ್ಲರ ವಿಕಾಸ, ವಿಶ್ವಾಸ’ದೊಂದಿಗೆ ಸದೃಢ ಭಾರತ ನಿರ್ವಿುಸಬೇಕೆಂಬ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಆಶಯಕ್ಕೆ ವಿರುದ್ಧದ ನಡೆ ಬೇಡವೆಂದು ರಾಜ್ಯ ಬಿಜೆಪಿ ನಾಯಕರಿಗೆ ವರಿಷ್ಠರು ಖಡಕ್ ಎಚ್ಚರಿಕೆ ಸೂಚನೆ ರವಾನಿಸಿದ್ದಾರೆ. ಪಕ್ಷದಿಂದ ಅಮಾನತುಗೊಂಡ ವಕ್ತಾರೆ ನೂಪುರ್ ಶರ್ಮಾ ಹೇಳಿಕೆಯಿಂದ ಉಂಟಾಗಿರುವ ‘ಹಾನಿ ಪರಿಹಾರ’ಕ್ಕೆ ದೆಹಲಿ ಹಿರಿಯ ನಾಯಕರು ಮುಂದಾಗಿದ್ದು, ಪಕ್ಷ ಆಡಳಿತವಿರುವ ರಾಜ್ಯಗಳಿಗೆ ಹೆಚ್ಚು ಗಮನ ಕೇಂದ್ರೀಕರಿಸಿದೆ. ಯಾವುದೇ ಧರ್ಮ, ಧಾರ್ವಿುಕ ನಾಯಕರು ಹಾಗೂ ಸಂಕೇತಗಳ ಬಗ್ಗೆ ಅನುಚಿತ, ಅತಿರೇಕದ ಹೇಳಿಕೆಗಳನ್ನು ನೀಡಬಾರದು. ಯಾವುದೇ ವ್ಯಕ್ತಿ ಅಥವಾ ಸಂಘಟನೆಗಳ ಪ್ರಚೋದನಾತ್ಮಕ ಹೇಳಿಕೆಗಳಿಗೆ ಸ್ಪಂದನೆ, ಸಮರ್ಥನೆಯನ್ನೂ ನೀಡಕೂಡದು ಎನ್ನುವ ಸೂಚನೆ ನೀಡಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. ಸಚಿವ-ಸಂಸದ, ಶಾಸಕರು ಹಾಗೂ ವಿಶೇಷವಾಗಿ ಬಿಜೆಪಿ ಮಾಧ್ಯಮ ವಿಭಾಗಕ್ಕೆ ಎಚ್ಚರಿಕೆಯಿಂದ ಹೇಳಿಕೆಗಳನ್ನು ನೀಡಬೇಕು. ಅತ್ಯುತ್ಸಾಹ, ಏನೋ ಪ್ರತಿಪಾದಿಸುವ ಭರದಲ್ಲಿ ಆಡುವ ಮಾತುಗಳು ಬೇರೆ ತಿರುವು ಪಡೆಯುವುದಕ್ಕೆ ಅವಕಾಶ ನೀಡಬೇಕು. ಮಾಧ್ಯಮ ವಿಭಾಗಕ್ಕೆ ಸೂಕ್ತ ಕಾರ್ಯಾಗಾರ ಏರ್ಪಡಿಸಿ ನುರಿತರಿಂದ ತರಬೇತಿ ನೀಡುವ ವ್ಯವಸ್ಥೆ ಮಾಡಬೇಕು ಎಂಬ ಪಕ್ಷದ ರಾಜ್ಯ ಸಮಿತಿಗೆ ವರಿಷ್ಠರು ಸೂಚಿಸಿದ್ದಾರೆನ್ನಲಾಗಿದೆ.
ಸಿದ್ದರಾಮಯ್ಯ ಗೌರವಯುತವಾಗಿ ನಡೆದುಕೊಳ್ಳುತ್ತಾರೆ ಎನ್ನುವ ನಿರೀಕ್ಷೆ ಮಾಡಿದ್ದೆವು. ಆದರೆ, ಅವರು ಈ ರೀತಿ ಆರ್ಎಸ್ಎಸ್ ಹಾಗೂ ಚಡ್ಡಿ ಬಗ್ಗೆ ಮಾತನಾಡುತ್ತ ಹೋದರೆ ಅವರ ಗೌರವ ಹಾಳಾಗುತ್ತದೆ. ಅದು ಅವರಿಗೆ ಶೋಭೆ ತರುವುದಿಲ್ಲ. | ಬಿ.ಎಸ್. ಯಡಿಯೂರಪ್ಪ ಮಾಜಿ ಸಿಎಂ
ಬೆಂಗಳೂರು: ಉತ್ತಮ ರಾಜಕೀಯ ಪ್ರಜ್ಞೆಯುಳ್ಳವರು ರಾಜ್ಯದ ಅಭಿವೃದ್ಧಿ, ಉತ್ಪಾದನೆ, ಭವಿಷ್ಯತ್ತಿನ ಬಗ್ಗೆ ಮಾತನಾಡುವುದು ಬಿಟ್ಟು ಆರ್ಎಸ್ಎಸ್ ಬಗ್ಗೆ ಪದೇ ಪದೆ ಪ್ರಸ್ತಾಪಿಸುತ್ತಾರೆ ಎಂದು ಸಿದ್ದರಾಮಯ್ಯ ಅವರಿಗೆ ಸಿಎಂ ಬಸವರಾಜ ಬೊಮ್ಮಾಯಿ ಚಾಟಿ ಬೀಸಿದರು. ಸಿದ್ದರಾಮಯ್ಯ ಅವರಿಗೆ ಮಾತನಾಡಲು ಬೇರೆ ವಿಷಯಗಳಿಲ್ಲವಾದ ಕಾರಣ ಆರ್ಎಸ್ಎಸ್ ಕುರಿತು ಹೇಳಿಕೆ ನೀಡುತ್ತಿದ್ದಾರೆ. ರಾಜ್ಯದ ಜನರು ಇದೆಲ್ಲ ಗಮನಿಸುತ್ತಿದ್ದಾರೆ. ಪಠ್ಯಪುಸ್ತಕ ಪರಿಷ್ಕರಣೆಗೆ ಸಂಬಂಧಿಸಿದಂತೆ ಈಗಾಗಲೆ ನಿರ್ಣಯಗಳಾಗಿದ್ದು, ಶಿಕ್ಷಣ ಸಚಿವರಿಗೆ ಮುಂದಿನ ಹೊಣೆ ಒಪ್ಪಿಸಲಾಗಿದೆ. ಸರ್ಕಾರದ ನಿರ್ಣಯ ಜಾರಿ, ಪ್ರಗತಿ ಬಗ್ಗೆ ಮಾಹಿತಿ ನೀಡುವ ಜವಾಬ್ದಾರಿ ಇನ್ನುಮುಂದೆ ಅವರೇ ನಿರ್ವಹಿಸಲಿದ್ದಾರೆ ಎಂದು ಹೇಳಿದರು.
ಪಂಚಮಸಾಲಿ ಪೀಠಾಧಿಪತಿ ಜತೆಗೆ ಚರ್ಚೆ: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲು ಕುರಿತು ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ ಬರೆದ ಪತ್ರಕ್ಕೆ ಬೊಮ್ಮಾಯಿ ಉತ್ತರಿಸಿ, ಪಂಚಮಸಾಲಿ ಸಮುದಾಯದ ಮುಖಂಡರು ಸೋಮವಾರ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಶ್ರೀಗಳ ಜತೆ ಒಂದೆರಡು ದಿನಗಳಲ್ಲಿ ರ್ಚಚಿಸುವೆ ಎಂದು ತಿಳಿಸಿದರು.